ಆಸ್ಟ್ರೇಲಿಯಾ ವಿರುದ್ಧ ರಾಹುಲ್-ಪೃಥ್ವಿ ಒಪನರ್ಸ್? ಮಯಾಂಕ್‌ಗೆ ಸ್ಥಾನ!

By Web DeskFirst Published Oct 16, 2018, 9:24 AM IST
Highlights

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ತಂಡದ ಆಯ್ಕೆ ಕಸರತ್ತು ನಡೆಯುತ್ತಿದೆ. ಯುವ ಆಟಗಾರರಿಗೆ ಅವಕಾಶ ನೀಡಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ. ಆದರೆ ಕೆಲ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. 

ಮುಂಬೈ(ಅ.16): ವೆಸ್ಟ್‌ಇಂಡೀಸ್‌ ವಿರುದ್ಧ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿ ಭಾರತ ತಂಡ ಭರ್ಜರಿ ಸಂಭ್ರಮಾಚರಣೆಯಲ್ಲಿರಬಹುದು, ಆದರೆ ತಂಡದಲ್ಲಿ ಕೆಲ ಸಮಸ್ಯೆಗಳು ಹಾಗೇ ಉಳಿದುಕೊಂಡಿದ್ದು ಆಸ್ಪ್ರೇಲಿಯಾ ಪ್ರವಾಸಕ್ಕೆ ತಂಡದ ಆಯ್ಕೆ ನಡೆಸುವ ಮುನ್ನ ಭಾರತ ತಂಡದ ಆಡಳಿತ ಹಾಗೂ ಆಯ್ಕೆ ಸಮಿತಿ ಪರಿಹಾರ ಹುಡುಕಬೇಕಿದೆ.

ತಂಡದಲ್ಲಿ 3ನೇ (ಮೀಸಲು) ಆರಂಭಿಕ ಹಾಗೂ 2ನೇ (ಮೀಸಲು) ವಿಕೆಟ್‌ ಕೀಪರ್‌ ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಯುವ ಆಟಗಾರರಾದ ಪೃಥ್ವಿ ಶಾ ಹಾಗೂ ರಿಶಭ್‌ ಪಂತ್‌ ಆಕರ್ಷಕ ಪ್ರದರ್ಶನಗಳೊಂದಿಗೆ ತಂಡದ ನಂಬಿಕೆ ಉಳಿಸಿಕೊಂಡಿದ್ದು ಡಿ.6ರಿಂದ ಅಡಿಲೇಡ್‌ ಆರಂಭಗೊಳ್ಳಲಿರುವ ಆಸ್ಪ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ಗೆ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ. ಸುದೀರ್ಘ ಹಾಗೂ ಮಹತ್ವದ ಸರಣಿಗಳಲ್ಲಿ ಮೀಸಲು ಆಟಗಾರರ ಅಗತ್ಯ ಇರಲಿದೆ.

ಕೆ.ಎಲ್‌.ರಾಹುಲ್‌ ಕಳೆದ 17 ಇನ್ನಿಂಗ್ಸ್‌ಗಳಲ್ಲಿ 14ರಲ್ಲಿ ವೈಫಲ್ಯ ಕಂಡರೂ, ತಂಡದ ಆಡಳಿತ ಅವರ ಬೆನ್ನಿಗೆ ನಿಂತಿದೆ. ಸರಣಿ ಗೆಲುವಿನ ಬಳಿಕ ಮಾತನಾಡಿದ ನಾಯಕ ಕೊಹ್ಲಿ, ‘ಕೆ.ಎಲ್‌.ರಾಹುಲ್‌ ತಮ್ಮ ತಪ್ಪುಗಳನ್ನು ಅರಿತು, ತಿದ್ದಿಕೊಳ್ಳಲಿದ್ದಾರೆ ಎನ್ನುವ ನಂಬಿಕೆ ನನಗಿದೆ. ಅವರ ಆಟದ ಬಗ್ಗೆ ಯಾವುದೇ ಅನುಮಾನಗಳಿಲ್ಲ. ತಪ್ಪುಗಳನ್ನು ಗುರುತಿಸಿ ಹೇಳಿದಾಗ ಅದನ್ನು ಕೇಳಿಸಿಕೊಂಡು, ಸರಿಪಡಿಸಿಕೊಳ್ಳುವ ಗುಣ ಅವರಲ್ಲಿದೆ’ ಎಂದರು.

ನಾಯಕ ಕೊಹ್ಲಿಯ ಮಾತು ಮೊದಲ ಟೆಸ್ಟ್‌ ಮಟ್ಟಿಗೆ ರಾಹುಲ್‌ ಹಾಗೂ ಪೃಥ್ವಿ ಶಾ ತಂಡದ ಆರಂಭಿಕರು ಎನ್ನುವ ಸುಳಿವು ನೀಡಿದೆ. ಆದರೆ ರಾಹುಲ್‌ ಮತ್ತೊಮ್ಮೆ ವೈಫಲ್ಯ ಕಂಡರೆ ಮುಂದೇನು? ಈ ಪ್ರಶ್ನೆಗೆ ತಂಡದ ಆಡಳಿತದ ಬಳಿ ಇಲ್ಲವೇ ಆಯ್ಕೆಗಾರರ ಬಳಿ ಸ್ಪಷ್ಟಉತ್ತರವಿಲ್ಲ.

ವಿಂಡೀಸ್‌ ವಿರುದ್ಧ ಸರಣಿಯಲ್ಲಿ ಮೀಸಲು ಆರಂಭಿಕನಾಗಿದ್ದ ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌, ಆಸ್ಪ್ರೇಲಿಯಾಗೆ ತೆರಳಲಿರುವ 17 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಗರ್‌ವಾಲ್‌ ದೇಸಿ ಕ್ರಿಕೆಟ್‌ನಲ್ಲಿ ರಾಶಿ ರಾಶಿ ರನ್‌ ಗಳಿಸಿದರೂ, ಮಿಚೆಲ್‌ ಸ್ಟಾರ್ಕ್ನ ಬೌನ್ಸ್‌, ಹೇಜಲ್‌ವುಡ್‌ನ 4ನೇ ಸ್ಟಂಪ್‌ ದಾಳಿ, ಪ್ಯಾಟ್‌ ಕಮಿನ್ಸ್‌ರ ವೇಗವನ್ನು ಎದುರಿಸಲು ಸಿದ್ಧರಿದ್ದಾರಾ? ಎನ್ನುವ ಬಗ್ಗೆ ಅನುಮಾನಗಳಿವೆ. 

ಸಾಧಾರಣ ಗುಣಮಟ್ಟದ ವೇಗದ ಬೌಲರ್‌ಗಳನ್ನು ಹೊಂದಿದ್ದ ವೆಸ್ಟ್‌ಇಂಡೀಸ್‌ ವಿರುದ್ಧ ಮಯಾಂಕ್‌ಗೆ ಅವಕಾಶ ಕೊಟ್ಟು ಪ್ರಯೋಗ ನಡೆಸಬಹುದಾಗಿತ್ತು. ಆದರೆ ತಂಡ ಅದನ್ನು ಮಾಡಲಿಲ್ಲ. ಇದೀಗ ಮಯಾಂಕ್‌ ಟೆಸ್ಟ್‌ ಕ್ರಿಕೆಟ್‌ನ ಅನುಭವವೇ ಇಲ್ಲದೆ ಆಸ್ಪ್ರೇಲಿಯಾಗೆ ತೆರಳಿದರೆ ಅಚ್ಚರಿಯಿಲ್ಲ. ಇಲ್ಲವಾದಲ್ಲಿ ರಾಹುಲ್‌, ಪೃಥ್ವಿ ಹಾಗೂ ಮಯಾಂಕ್‌ ಮೂವರು ಅನನುಭವಿಗಳೊಂದಿಗೆ ಆಸ್ಪ್ರೇಲಿಯಾಗೆ ತೆರಳಲು ಭಾರತ ಹಿಂದೇಟು ಹಾಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾದಲ್ಲಿ ಮಯಾಂಕ್‌, ಕರುಣ್‌ ನಾಯರ್‌ರಂತೆ ಆಡುವ ಅವಕಾಶ ಪಡೆಯದೆಯೇ ತಂಡದಿಂದ ಹೊರಬೀಳಬೇಕಾಗುತ್ತದೆ.

ಆಸ್ಪ್ರೇಲಿಯಾದ ವಾತಾವರಣಕ್ಕೆ ಮುರಳಿ ವಿಜಯ್‌ರಂತ ಆಟಗಾರ ಹೆಚ್ಚು ಸೂಕ್ತ. ಆದರೆ ವಿಜಯ್‌, ಇಂಗ್ಲೆಂಡ್‌ ಪ್ರವಾಸದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿ ತಂಡದಿಂದ ಹೊರಬಿದ್ದರು. ಇತ್ತೀಚೆಗೆಷ್ಟೇ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ವಿರುದ್ಧ ಮಾಡಿದ್ದ ಆರೋಪಗಳು, ವಿಜಯ್‌ ಆಯ್ಕೆಗೆ ಅಡ್ಡಿಯಾಗಬಹುದು.

ಗಾಯಾಳು ವೃದ್ಧಿಮಾನ್‌ ಸಾಹ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರನ್ನು ಆಸ್ಪ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮೀಸಲು ವಿಕೆಟ್‌ ಕೀಪರ್‌ ಸ್ಥಾನ ಯಾರಿಗೆ ನೀಡಬೇಕು ಎನ್ನುವ ಗೊಂದಲವೂ ಆಯ್ಕೆ ಸಮಿತಿಯನ್ನು ಕಾಡುತ್ತಿದೆ. ಭಾರತ ‘ಎ’ ತಂಡದ ಪರ ಉತ್ತಮ ಪ್ರದರ್ಶನ ತೋರಿದ ಆಂಧ್ರ ಪ್ರದೇಶದ ಕೋನಾ ಭರತ್‌ ಹೆಸರು ಚಾಲ್ತಿಯಲ್ಲಿದೆ. ಅನುಭವಿ ಪಾರ್ಥೀವ್‌ ಪಟೇಲ್‌ ಸಹ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

click me!