
ಭಾರತದ ಡಬ್ಲ್ಯೂಡಬ್ಲ್ಯೂಇ ಪ್ರಖ್ಯಾತ ಕುಸ್ತಿಪಟು ಎಂದರೆ ಅದು ದಿ ಗ್ರೇಟ್ ಖಲಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ನಮ್ಮ ದೇಶದ ಖಲಿ ನಮ್ಮ ದೇಶದಲ್ಲಿ ಮಾತ್ರವಲ್ಲ, ಡಬ್ಲ್ಯೂಡಬ್ಲ್ಯೂಇ ಮನೋರಂಜನಾತ್ಮಕ ಕ್ರೀಡೆ ಮೂಲಕ ವಿದೇಶಗಳಲ್ಲಿಯೂ ಪ್ರಸಿದ್ಧಿಯಾಗಿದ್ದಾರೆ. ಆದರೆ, ಡಬ್ಲ್ಯೂಡಬ್ಲ್ಯೂಇ ರಿಂಗ್‌ನಲ್ಲಿ ಆಟವಾಡುವಾಗ ತನ್ನ ಶಕ್ತಿಯನ್ನು ಬಳಸಿ ಯುವ ಕುಸ್ತಿಪಟುವಿಗೆ ಹೊಡೆದಿದ್ದು, ಅವನು ಸತ್ತೇ ಹೋಗಿದ್ದನು. ಇದರಿಂದ ಮುಂದೆ ಗ್ರೇಟ್ ಖಲಿ ಏನೆಲ್ಲಾ ಎದುರಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ...
ಜಾಗತಿಕ ಮಟ್ಟದ ಕುಸ್ತಿ ಜಗತ್ತಿನಲ್ಲಿ ಅವರು ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಪ್ರಪಂಚದಾದ್ಯಂತ ಹೆಸರು ಗಳಿಸಿದ ಭಾರತದ ತಾರೆ ದಿ ಗ್ರೇಟ್ ಖಲಿ ಅವರಾಗಿದ್ದಾರೆ. ಅವರು ಅನೇಕ ದೊಡ್ಡ ಕುಸ್ತಿಪಟುಗಳನ್ನು ಡಬ್ಲ್ಯೂಡಬ್ಲ್ಯೂಇ ರಿಂಗಿನಲ್ಲಿ ಸೋಲಿಸಿದ್ದಾರೆ. ಒಬ್ಬರಿಗಿಂತ ಒಬ್ಬರು ಧೀರ ಫೈಟರ್‌ಗಳು ಖಲಿ ಮುಂದೆ ತಲೆಬಾಗುತ್ತಿದ್ದರು. ಒಮ್ಮೆ ಅವರು ಫೈಟ್‌ಗಾಗಿ ರಿಂಗ್‌ಗೆ ಪ್ರವೇಶಿಸಿದಾಗ, ಪ್ರೇಕ್ಷಕರ ಶಬ್ದದಿಂದ ವಾತಾವರಣವು ವರ್ಣಮಯವಾಗುತ್ತಿತ್ತು. ಆದರೆ, ದೇಶ ಮತ್ತು ಪ್ರಪಂಚದಲ್ಲಿ ಹೆಸರು ಗಳಿಸಿದ ಖಲಿ ಅವರೊಂದಿಗೆ ದೊಡ್ಡ ಘಟನೆಯೂ ಸಂಭವಿಸಿದೆ. ಅವರ ಶಕ್ತಿ ಯುವ ಕುಸ್ತಿಪಟುವಿನ ಸಾವಿಗೆ ಕಾರಣವಾಯಿತು. ಇದರಿಂದ ಖಲಿ ಫೈಟ್‌ಗೆ ಹೋಗುವ ಮುನ್ನವೇ ಭಾರೀ ಕಷ್ಟವನ್ನು ಅನುಭವಿಸಿದ್ದಾರೆ.
ವಾಸ್ತವವಾಗಿ, ಕುಸ್ತಿ ಜಗತ್ತಿಗೆ (ಡಬ್ಲ್ಯೂಡಬ್ಲ್ಯೂಇ) ಬರುವ ಮೊದಲು ಪ್ರತಿಯೊಬ್ಬ ಕುಸ್ತಿಪಟುವಿಗೆ ವಿಶೇಷ ತರಬೇತಿಯ ಅಗತ್ಯವಿರುತ್ತದೆ. ಬ್ರಿಯಾನ್ ಒಂಗ್ ಎಂಬ ಯುವ ಕುಸ್ತಿಪಟುವೂ ಇದೇ ರೀತಿಯ ಕನಸು ಕಾಣುತ್ತಾ ತರಬೇತಿ ಪಡೆಯುತ್ತಿದ್ದರು. ಅವರು WWEಗೆ ಹೋಗಲು ಬಯಸಿದ್ದರು. ಆದರೆ, ಬ್ರಿಯಾನ್ ಒಂಗ್ ಅವರ ಆರಂಭವೇ ಅಂತ್ಯವಾಗುತ್ತದೆ ಎಂದು ಅವರಿಗೆ ಸ್ವಲ್ಪವೂ ತಿಳಿದಿರಲಿಲ್ಲ. 2001ರಲ್ಲಿ, ಬ್ರಿಯಾನ್ ಮತ್ತು ಖಲಿ ಒಟ್ಟಿಗೆ ರಿಂಗಿನಲ್ಲಿ ತರಬೇತಿ ಪಡೆಯುತ್ತಿದ್ದರು. ಆ ಸಮಯದಲ್ಲಿ ಯುವ ಆಟಗಾರನ ವಯಸ್ಸು ತುಂಬಾ ಕಡಿಮೆಯಿತ್ತು. ರಿಂಗಿನಲ್ಲಿ ತರಬೇತಿಯ ಸಮಯದಲ್ಲಿ ಖಲಿ ಅವರು ಎದುರಾಳಿ ಒಂಗ್ ಅವರನ್ನು ಎರಡು ಬಾರಿ ತಿರುಗಿಸಿದರು. ಖಲಿ ಆ ಆಟಗಾರನನ್ನು ತಿರುಗಿಸಿ ಬಿಟ್ಟಾಗ ಅವರ ತಲೆ ನೇರವಾಗಿ ಮ್ಯಾಟ್ ಮೇಲೆ ಬಿದ್ದಿತು. ನಂತರ ಒಂಗ್ ಅವರು ಪ್ರಜ್ಞಾಹೀನರಾದರು.
ದುರಂತ ಘಟನೆಯ ನಂತರ ಖಲಿ ದುಃಖಿತರಾದರು:
ಬ್ರಿಯಾನ್ ಪ್ರಜ್ಞಾಹೀನರಾದ ನಂತರ ತಕ್ಷಣವೇ ವೈದ್ಯಕೀಯ ತಂಡ ಅಲ್ಲಿಗೆ ಆಗಮಿಸಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಗ ತುಂಬಾ ತಡವಾಗಿತ್ತು. ಅಲ್ಲಿ ವೈದ್ಯರು ಅವರನ್ನು ಮೃತ ಎಂದು ಘೋಷಿಸಿದರು. ಈ ದುರಂತ ಘಟನೆಯ ನಂತರ ಖಲಿ ತುಂಬಾ ದುಃಖಿತರಾದರು. ನಂತರ WWE ಕ್ರಮ ಕೈಗೊಂಡು ಖಲಿ ಅವರನ್ನು ಡಬ್ಲ್ಯೂಡಬ್ಲ್ಯೂಇಗೆ ಕಳಿಸುವ ಕುರಿತಾದ ಒಪ್ಪಂದವನ್ನು ಹಿಂತೆಗೆದುಕೊಂಡಿತು. ಇದರಿಂದ ಅವರು ಪಡೆದಿದ್ದ ಹಾಗೂ ಕೊಡುವುದಾಗಿ ಹೇಳಿದ್ದ ಹಣವು ಕೂಡ ವಾಪಸ್ ಹೋಗಿತ್ತು.
ಖಲಿಗೆ ಭಾರಿ ದಂಡ ವಿಧಿಸಲಾಯಿತು:
ದಿ ಗ್ರೇಟ್ ಖಲಿ ಮತ್ತು ಬ್ರಿಯಾನ್ ಒಂಗ್ ನಡುವಿನ ತರಬೇತಿಯ ಸಮಯವನ್ನು ತನಿಖೆ ಮಾಡಲಾಯಿತು. ತನಿಖಾ ವರದಿಯ ನಂತರ, ಇದು ಉದ್ದೇಶಪೂರ್ವಕವಾಗಿ ಅಲ್ಲ, ಆದರೆ ಇದು ಅಪಘಾತ ಎಂದು ಬಹಿರಂಗವಾಯಿತು. ನ್ಯಾಯಾಲಯವು ಈ ಪ್ರಕರಣದಲ್ಲಿ ಕ್ರಮ ಕೈಗೊಂಡು ಖಲಿ ಮೇಲೆ ₹13 ಲಕ್ಷ ದಂಡ ವಿಧಿಸಿತು. ಈ ಘಟನೆಯ ನಂತರ ಖಲಿ ಕೆಲವು ದಿನಗಳವರೆಗೆ ಕುಸ್ತಿ ಜಗತ್ತಿನಿಂದ ಹೊರಗುಳಿಯಬೇಕಾಯಿತು. ಈ ಸಮಯದಲ್ಲಿ ಅವರು ಖಿನ್ನತೆಗೂ ಒಳಗಾಗಿದ್ದರು. ನಂತರ ಡಬ್ಲ್ಯೂಡಬ್ಲ್ಯೂಇ ಜಗತ್ತಿಗೆ ಮರಳಿ ತನ್ನ ಶಕ್ತಿ ಪ್ರದರ್ಶನ ಮಾಡಿ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಖಲಿ ಪಂಜಾಬ್‌ನ ಜಲಂಧರ್‌ನಲ್ಲಿ ತಮ್ಮದೇ ಆದ ಕುಸ್ತಿ ಕಂಪನಿಯನ್ನು ನಡೆಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.