363 ದಿನಗಳ ಕೋಚ್ ಅವಧಿಯಲ್ಲಿ ಕುಂಬ್ಳೆ ಸಾಧಿಸಿದ್ದೇನು..?

By Naveen KodaseFirst Published Jun 22, 2017, 7:21 PM IST
Highlights

ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಟೀಂ ಇಂಡಿಯಾ ಸಾಧಿಸಿದ್ದೇನು ಎನ್ನುವ ಕಿರು ಪರಿಚಯ ನಿಮ್ಮ ಮುಂದೆ..

- ನವೀನ್ ಕೊಡಸೆ

ಭಾರತ ಕ್ರಿಕೆಟ್ ತಂಡದ ಮುಖ್ಯಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ಕೆಳಗಿಳಿದಿದ್ದಾರೆ. ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಬೌಲರ್ ಹಾಗೂ ಸಭ್ಯ ಕ್ರಿಕೆಟಿಗ ಎನ್ನುವ ಖ್ಯಾತಿಗಳಿಸಿದ್ದ ಅನಿಲ್ ಕುಂಬ್ಳೆ ಒಂದು ವರ್ಷದ ಕೋಚ್ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕೋಚ್ ಅವಧಿಯ ಕೊನೆಯಲ್ಲಿ ಕುಂಬ್ಳೆಯನ್ನು ಟೀಂ ಇಂಡಿಯಾ ಆಟಗಾರರು ನಡೆಸಿಕೊಂಡ ರೀತಿ ಮಾತ್ರ ಯಾರು ಒಪ್ಪುವಂತಹದ್ದಲ್ಲ. ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಆಟಗಾರರ ಒಣ ಪ್ರತಿಷ್ಟೆಯಿಂದಾಗಿ, ಕುಂಬ್ಳೆ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಒಂದು ವರದಿಯ ಪ್ರಕಾರ ಅಶ್ವಿನ್ ಜೊತೆಗೆ ಸಖ್ಯ ಹಾಗೆಯೇ ರಾಂಚಿ ಟೆಸ್ಟ್'ನಲ್ಲಿ ನಾಯಕ ಕೊಹ್ಲಿ ವಿರೋಧದ ನಡುವೆಯೂ ಕುಲ್ದೀಪ್ ಯಾದವ್ ಅವರನ್ನು ಆಡಿಸಿದ್ದು ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಮನಸ್ತಾಪ ಉಂಟಾಗಲು ಕಾರಣ ಎನ್ನಲಾಗುತ್ತಿದೆ.

ಅಷ್ಟಕ್ಕೂ ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಟೀಂ ಇಂಡಿಯಾ ಸಾಧಿಸಿದ್ದೇನು ಎನ್ನುವ ಕಿರು ಪರಿಚಯ ನಿಮ್ಮ ಮುಂದೆ..

ಮುಖ್ಯ ಕೋಚ್ ಆಗಿ ನೇಮಕ: ಜೂನ್ 22, 2016

ಭಾರತ ವೆಸ್ಟ್'ಇಂಡಿಸ್ ಪ್ರವಾಸ : 2 ಟೆಸ್ಟ್(2-0 ಸರಣಿ ಜಯ), 1 ಟಿ20(0-1 ಸರಣಿ ಸೋಲು)

ನ್ಯೂಜಿಲ್ಯಾಂಡ್ ಭಾರತ ಪ್ರವಾಸ : 3 ಟೆಸ್ಟ್(3-0 ಸರಣಿ ಜಯ), 5 ಏಕದಿನ(3-2 ಸರಣಿ ಜಯ)

ಇಂಗ್ಲೆಂಡ್ ಭಾರತ ಪ್ರವಾಸ : 5 ಟೆಸ್ಟ್(4-0 ಸರಣಿ ಜಯ), 3 ಏಕದಿನ(2-1 ಸರಣಿ ಜಯ), 3 ಟಿ20(2-1 ಸರಣಿ ಜಯ)

ಬಾಂಗ್ಲಾದೇಶ ಟೆಸ್ಟ್ : 1 ಟೆಸ್ಟ್(1-0 ಸರಣಿ ಜಯ)

ಆಸ್ಟ್ರೇಲಿಯಾ ಭಾರತ ಪ್ರವಾಸ : 4 ಟೆಸ್ಟ್(2-1 ಸರಣಿ ಜಯ)

ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 : ರನ್ನರ್ ಅಪ್ 5 ಏಕದಿನ ಪಂದ್ಯ(3 ಗೆಲುವು, 2 ಸೋಲು)

ಕೋಚ್ ಹುದ್ದೆಗೆ ರಾಜೀನಾಮೆ : ಜೂನ್ 20, 2017

ಟೆಸ್ಟ್ ಸರಣಿ : 5 ರಲ್ಲಿ 5 ಸರಣಿ ಜಯಭೇರಿ

ಏಕದಿನ ಸರಣಿ : ಮೂರು ಸರಣಿಯಲ್ಲಿ 2 ಏಕದಿನ ಸರಣಿಯಲ್ಲಿ ಜಯ

ಟಿ20 ಸರಣಿ : ಎರಡು ಸರಣಿಯಲ್ಲಿ ಒಂದು ಸರಣಿ ಜಯ

ಕಾಲಾವಧಿ: 363 ದಿನಗಳು

ಕುಂಬ್ಳೆ ಮಾರ್ಗದರ್ಶನದಲ್ಲಿ ಟಂ ಇಂಡಿಯಾವು ಒಟ್ಟು 15 ಟೆಸ್ಟ್ ಪಂದ್ಯಗಳನ್ನಾಡಿದ್ದು ಅದರಲ್ಲಿ 12ರಲ್ಲಿ ಜಯ ಸಾಧಿಸಿದರೆ, ಎರಡು ಪಂದ್ಯ ಡ್ರಾ ಹಾಗೂ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲುಂಡಿದೆ.

ಅನಿಲ್ ಕುಂಬ್ಳೆಯ ಕೋಚ್ ಸಾಧನೆಯನ್ನು ಕೇವಲ ಅಂಕಿ ಅಂಶಗಳಲ್ಲಿ ಹೇಳಿದರೆ, ಅವರನ್ನು ಖಂಡಿತಾ ಸೀಮಿತಗೊಳಿಸಿದಂತಾಗುತ್ತದೆ. ಈ ಅಂಕಿ-ಅಂಶಗಳನ್ನು ಬಿಟ್ಟು ಇತರೆ ಪ್ರಮುಖ ಅಂಶಗಳನ್ನು ಗಮನಿಸುವುದಾದರೆ,:

ಕುಂಬ್ಳೆ ಮಾರ್ಗದರ್ಶನದಲ್ಲಿ ಆರ್. ಅಶ್ವಿನ್ ಅದ್ಭುತ ಯಶಸ್ಸು ಕಂಡಿರುವುದನ್ನು ಸ್ವತಃ ಅಶ್ವಿನ್ ಅವರೇ ಒಪ್ಪಿಕೊಂಡಿದ್ದಾರೆ. ಕಳೆದ ವರ್ಷ ಅಶ್ವಿನ್ ತವರಿನ ಸರಣಿಯಲ್ಲಿ 80 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದಿರುವುದೇ ಇದಕ್ಕೆ ಸಾಕ್ಷಿ.

ಮತ್ತೋರ್ವ ಆಟಗಾರ ಸಾಂದರ್ಭಿಕ ಸ್ಪಿನ್ನರ್ ಆಗಿ ತಂಡದಲ್ಲಿ ಗುರುತಿಸಿಕೊಂಡಿದ್ದ ರವೀಂದ್ರ ಜಡೇಜಾ ಟೆಸ್ಟ್ ನಂ.1 ಬೌಲರ್ ಆಗಲು ಕಾರಣ ಕುಂಬ್ಳೆ ಮಾರ್ಗದರ್ಶನ ಹಾಗೂ ಅಗತ್ಯ ಸಂದರ್ಭದಲ್ಲಿ ನೀಡಿದ ಉಪಯುಕ್ತ ಸಲಹೆ.

ಆಸಿಸ್ ಬೌಲರ್ ಸ್ಟೀವ್ ಓ ಕೆಫೆ ಎದುರು ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಬೆಂಗಳೂರು ಟೆಸ್ಟ್'ನಲ್ಲಿ 92 ರನ್ ಬಾರಿಸುವ ಮೂಲಕ ಪಂದ್ಯ ಗೆಲ್ಲಿಸಿಕೊಟ್ಟರೆ, ರಾಂಚಿಯಲ್ಲಿ ನಡೆದ ಟೆಸ್ಟ್'ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದರು. ಇದಕ್ಕೆ ಕಾರಣ ಕುಂಬ್ಳೆ ನೆಟ್ಸ್'ನಲ್ಲಿ ತಾಂತ್ರಿಕ ಸಲಹೆ ನೀಡಿದ್ದು ಹಾಗೂ ಎಡಗೈನಲ್ಲಿ ಬೌಲಿಂಗ್ ಮಾಡಿ ಆತ್ಮವಿಶ್ವಾಸ ತುಂಬಿದ್ದು.

ಕುಂಬ್ಳೆ ಮಾರ್ಗದರ್ಶನದಲ್ಲಿ ಕೆ.ಎಲ್ ರಾಹುಲ್ ಹಾಗೂ ಕರುಣ್ ನಾಯರ್ ಟೀಂ ಇಂಡಿಯಾದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಯಿತು.

ಕುಂಬ್ಳೆ ಅವಧಿಯಲ್ಲಿ ಜಯಂತ್ ಯಾದವ್, ಕೇದಾರ್ ಜಾಧವ್ ಹಾಗೂ ಕುಲ್ದೀಪ್ ಯಾದವ್ ಟೆಸ್ಟ್ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿ ಮಿಂಚಿದರು. ಇನ್ನು ಯುವ ಕ್ರಿಕೆಟಿಗರಾದ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಅವರಂತವರಿಗೆ ಉತ್ತಮ ಡ್ರೆಸ್ಸಿಂಗ್ ರೋಂ ವಾತಾವರಣ ಕಲ್ಪಿಸಿಕೊಡುವಲ್ಲಿ ಕುಂಬ್ಳೆ ವಹಿಸಿದ ಪಾತ್ರ ಮಹತ್ವದ್ದು.

ಕೋಚ್ ಹುದ್ದೆಯಿಂದ ಕುಂಬ್ಳೆ ಕೆಳಗಿಳಿದಿದ್ದರಿಂದ ಅವರಿಗೇನು ನಷ್ಟವಿಲ್ಲ, ಆದರೆ ಟೀಂ ಇಂಡಿಯಾ ಇಂತಹ ಅತ್ಯುತ್ತಮ ಕೋಚ್'ನನ್ನು ಉಳಿಸಿಕೊಳ್ಳದಿರುವುದು ದೊಡ್ಡ ದುರಂತ...

ಈಗ ಹೇಳಿ ಟೀಂ ಇಂಡಿಯಾ ಕಳೆದುಕೊಂಡಿದ್ದು ಕುಂಬ್ಳೆ ಎನ್ನುವ ಕೇವಲ ಒಬ್ಬ ಕೋಚ್'ನ್ನಲ್ಲ, ಬದಲಾಗಿ ಕುಂಬ್ಳೆಯೆಂಬ ಅನಘ್ಯ ರತ್ನವನ್ನು ಅಲ್ಲವೇ..?  

click me!