ವಿಂಬಲ್ಡನ್ ಟೂರ್ನಿ ರೋಚಕ ಘಟ್ಟದತ್ತ ಸಾಗುತ್ತಿದ್ದು, ದಿಗ್ಗಜ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ತಾಯಿಯಾದ ಬಳಿಕ ಸೆರೆನಾ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಲಂಡನ್[ಜು.10]: ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ದಿಗ್ಗಜ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕನಸು ಈಡೇರುವ ಲಕ್ಷಣಗಳು ಕಾಣುತ್ತಿವೆ. ವಿಂಬಲ್ಡನ್ ಟೂರ್ನಿಯ ಸೆಮಿಫೈನಲ್‌ಗೆ ಅಮೆರಿಕದ ಟೆನಿಸ್ ತಾರೆ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನ ಸೆಮೀಸ್ ಮುಖಾಮುಖಿ ನಿರ್ಧಾರವಾಗಿದ್ದು, ಸೆರೆನಾ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಚೆಕ್ ಗಣರಾಜ್ಯದ ಬಾರ್ಬೊರಾ ಸ್ಟೈಕೋವಾ ವಿರುದ್ಧ ಸೆಣಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಮಾಜಿ ನಂ.1 ರೊಮೇನಿಯಾದ ಸಿಮೋನಾ ಹಾಲೆಪ್ ಹಾಗೂ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ ಸೆಣಸಾಡಲಿದ್ದಾರೆ.
ವಿಂಬಲ್ಡನ್ 2019: ವಿಶ್ವ ನಂ1 ಬಾರ್ಟಿ ಔಟ್!
ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸೆರೆನಾ, ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತ ಅಲಿಸನ್ ರಿಸ್ಕೆ ವಿರುದ್ಧ 6-4, 4-6, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಚೀನಾದ ಶೂಯಿ ಝಾಂಗ್ ವಿರುದ್ಧ ನಡೆದ ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಹಾಲೆಪ್, 7-6, 6-1 ಸೆಟ್‌ಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು.
8ನೇ ಶ್ರೇಯಾಂಕಿತ ಸ್ವಿಟೋಲಿನಾ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಮುಚೋವಾ ವಿರುದ್ಧ 7-5, 6-4 ಸೆಟ್‌ಗಳಲ್ಲಿ ಗೆದ್ದು ಮೊದಲ ಬಾರಿಗೆ ವಿಂಬಲ್ಡನ್ ಸೆಮೀಸ್‌ಗೇರಿದರೆ, ಈ ವರ್ಷ ಗ್ರ್ಯಾಂಡ್‌ಸ್ಲಾಂಗಳಲ್ಲಿ ಗೆಲುವನ್ನೇ ಕಾಣದೆ ವಿಂಬಲ್ಡನ್‌ಗೆ ಪ್ರವೇಶಿಸಿದ್ದ ಸ್ಟೆ್ರೖಕೋವಾ, ಬ್ರಿಟನ್‌ನ ಜೋಹಾನ ಕೊಂಟಾ ವಿರುದ್ಧ 7-5, 6-1 ಸೆಟ್‌ಗಳಲ್ಲಿ ಜಯಿಸಿ, ಉಪಾಂತ್ಯಕ್ಕೇರಿದರು.
ಸೆಮೀಸ್ ನಿರೀಕ್ಷೆಯಲ್ಲಿ ರೋಜರ್, ರಾಫಾ
ಬುಧವಾರ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ನೋವಾಕ್ ಜೋಕೋವಿಚ್-ಡೇವಿಡ್ ಗಾಫಿನ್, ರೋಜರ್ ಫೆಡರರ್-ಕೇ ನಿಶಿಕೋರಿ, ಗಿಡೋ ಪೆಲ್ಲಾ-ಬಟಿಸ್ಟಾಅಗುಟ್, ರಾಫೆಲ್ ನಡಾಲ್-ಸ್ಯಾಮ್ ಕ್ವೆರ್ರಿ ಮುಖಾಮುಖಿಯಾಗಲಿದ್ದಾರೆ. ಫೆಡರರ್ ಗೆದ್ದರೆ, ವಿಂಬಲ್ಡನ್‌ನಲ್ಲಿ ಅದು ಅವರ 100ನೇ ಗೆಲುವಾಗಲಿದೆ. ಸೆಮಿಫೈನಲ್‌ನಲ್ಲಿ ಫೆಡರರ್-ನಡಾಲ್ ಎದುರಾಗುವ ನಿರೀಕ್ಷೆ ಇದೆ.