ಟೆನಿಸ್ ದಿಗ್ಗಜ ರೋಜರ್ ಫೆಡರರ್ ತಮ್ಮ ವೃತ್ತಿ ಜೀವನದ 101 ನೇ ಪ್ರಶಸ್ತಿ ಜಯಿಸಿದ್ದಾರೆ. ಮಿಯಾಮಿ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ಜಾನ್ ಇಸ್ನೇರ್ ವಿರುದ್ಧ ಫೆಡರರ್ ಭರ್ಜರಿ ಜಯ ಸಾಧಿಸಿದ್ದಾರೆ.
ಮಿಯಾಮಿ[ಏ.02]: ಗ್ರ್ಯಾಂಡ್ ಸ್ಲಾಂ ದಾಖಲೆಗಳ ಒಡೆಯ, ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ತಮ್ಮ ವೃತ್ತಿ ಬದುಕಿನ 101ನೇ ಪ್ರಶಸ್ತಿ ಗೆದ್ದಿದ್ದಾರೆ.
ಭಾನುವಾರ ಇಲ್ಲಿ ನಡೆದ ಎಟಿಪಿ ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದ ಜಾನ್ ಇಸ್ನೇರ್ ವಿರುದ್ಧ 6-1, 6-4 ನೇರ ಸೆಟ್‌ಗಳಲ್ಲಿ ಜಯಿಸಿದ ಫೆಡರರ್ ದಾಖಲೆಯ 101ನೇ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದು ಸೇರಿದಂತೆ ಫೆಡರರ್ ಜಯಿಸಿದ 4ನೇ ಮಿಯಾಮಿ ಪ್ರಶಸ್ತಿ ಇದಾಗಿದೆ. ಈ ಋುತುವಿನಲ್ಲಿ ಫೆಡರರ್‌ಗೆ ಇದು 2ನೇ ಪ್ರಶಸ್ತಿಯಾಗಿದೆ.
ಮಾ.2ರಂದು ಫೆಡರರ್ ದುಬೈ ಓಪನ್ ಗೆಲ್ಲುವ ಮೂಲಕ ಪ್ರಶಸ್ತಿಗಳ ಶತಕ ಬಾರಿಸಿದ್ದರು. ವಿಶ್ವ ಟೆನಿಸ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಆಟಗಾರ ಸಾಲಿನಲ್ಲಿ ಫೆಡರರ್ 2ನೇ ಸ್ಥಾನದಲ್ಲಿದ್ದರೆ, 109 ಪ್ರಶಸ್ತಿ ಜಯಿಸಿರುವ ಅಮೆರಿಕದ ದಿಗ್ಗಜ ಟೆನಿಸಿಗ ಜಿಮ್ಮಿ ಕಾರ್ನರ್ ಅಗ್ರಸ್ಥಾನದಲ್ಲಿದ್ದಾರೆ.
ಮಿಯಾಮಿ ಓಪನ್: ಫೈನಲ್ ಪ್ರವೇಶಿಸಿದ ರೋಜರ್ ಫೆಡರರ್
1998ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಫೆಡರರ್, 2001ರಲ್ಲಿ ಮಿಲಾನ್ ಒಳಾಂಗಣ ಟೆನಿಸ್ ಟೂರ್ನಿ ಜಯಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದಿದ್ದರು. ನಂತರ 2003ರಲ್ಲಿ ವಿಂಬಲ್ಡನ್ ಜಯಿಸುವ ಮೂಲಕ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಂ ಜಯಿಸಿದರು. ಇಲ್ಲಿಯವರೆಗೂ ಫೆಡರರ್ ಒಟ್ಟು 20 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿದ್ದಾರೆ.