
ವೆಲ್ಲಿಂಗ್ಟನ್[ಫೆ.06]: 3 ತಿಂಗಳಿಗೂ ಹೆಚ್ಚು ಕಾಲ ತವರಿನಿಂದ ದೂರವಿರುವ ಭಾರತ ಕ್ರಿಕೆಟ್ ತಂಡ, ಭರ್ಜರಿ ಗೆಲುವಿನೊಂದಿಗೆ ತವರಿಗೆ ಮರಳಲು ಕಾತರಿಸುತ್ತಿದೆ. ಇತ್ತೀಚೆಗಷ್ಟೇ 4-1ರ ಅಂತರದಲ್ಲಿ ಏಕದಿನ ಸರಣಿ ವಶಪಡಿಸಿಕೊಂಡು ನ್ಯೂಜಿಲೆಂಡ್ ನೆಲದಲ್ಲಿ ಅತಿದೊಡ್ಡ ಅಂತರದ ಗೆಲುವಿನ ದಾಖಲೆ ಬರೆದಿದ್ದ ಭಾರತ, ಇದೀಗ ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆಲ್ಲುವ ಗುರಿ ಹೊಂದಿದೆ. ಬುಧವಾರದಿಂದ 3 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದ್ದು, ಇಲ್ಲಿನ ಬೇಸಿನ್ ರಿಸರ್ವ್ ಕ್ರೀಡಾಂಗಣ ಚೊಚ್ಚಲ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಟಿ20 ಸರಣಿಗೆ ಕಮ್’ಬ್ಯಾಕ್ ಮಾಡಿದ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್’ಮನ್..!
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ವಿಶ್ವಕಪ್ ಹತ್ತಿರವಾಗುತ್ತಿದ್ದು, ಮಾದರಿ ಯಾವುದಾದರೂ ಸರಿ ಪ್ರತಿ ಪಂದ್ಯವೂ ಭಾರತಕ್ಕೆ ಮಹತ್ವದಾಗಲಿದೆ. ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಈ ಸರಣಿ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ನೆರವಾಗಲಿದೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗದ ಪಂತ್, ಟಿ20 ತಂಡಕ್ಕೆ ಮರಳಿದ್ದು ಭರ್ಜರಿ ಪ್ರದರ್ಶನದ ಮೂಲಕ ಆಯ್ಕೆಗಾರರ ಗಮನ ಸೆಳೆಯಲು ಎದುರು ನೋಡುತ್ತಿದ್ದಾರೆ. ಮಾಜಿ ನಾಯಕ ಎಂ.ಎಸ್.ಧೋನಿ ಟಿ20 ತಂಡಕ್ಕೆ ವಾಪಸಾಗಿದ್ದಾರೆ. ಕಳೆದ ವರ್ಷದಂತ್ಯದಲ್ಲಿ ನಡೆದಿದ್ದ ಆಸ್ಪ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಕಳೆದ ಜುಲೈನಲ್ಲಿ ಕೊನೆ ಬಾರಿಗೆ ಟಿ20 ಆಡಿದ್ದ ಧೋನಿ, ಇತ್ತೀಚೆಗೆ ಏಕದಿನ ಮಾದರಿಯಲ್ಲಿ ಉತ್ತಮ ಲಯ ಕಾಯ್ದುಕೊಂಡಿದ್ದಾರೆ. ಹೀಗಾಗಿ ಧೋನಿ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ.
ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ, ಆದರೆ...?
ಈ ಸರಣಿ ದಿನೇಶ್ ಕಾರ್ತಿಕ್, ಅಂಬಟಿ ರಾಯುಡು ಹಾಗೂ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್‌ಗೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅವಕಾಶ ನೀಡಲಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಗಿಲ್‌ಗೆ 3ನೇ ಕ್ರಮಾಂಕ ದೊರೆಯಬಹುದು. ಆಲ್ರೌಂಡರ್ ಕೃನಾಲ್ ಪಾಂಡ್ಯ ಹಾಗೂ ಪಂಜಾಬ್ ವೇಗಿ ಸಿದ್ಧಾರ್ಥ್ ಕೌಲ್ ಸಹ ತಂಡ ಕೂಡಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ತಂಡದಲ್ಲಿರುವ ಏಕೈಕ ಅನುಭವಿ ವೇಗಿ. ಖಲೀಲ್ ಅಹ್ಮದ್, ಮೊಹಮದ್ ಸಿರಾಜ್ ಏಕದಿನದಲ್ಲಿ ದುಬಾರಿಯಾದ ಕಾರಣ, ಕೌಲ್ 2ನೇ ವೇಗಿಯಾಗಿ ಸ್ಥಾನ ಪಡೆಯಬಹುದು. ಹಾರ್ದಿಕ್ ಪಾಂಡ್ಯ 3ನೇ ವೇಗಿ ಸ್ಥಾನ ತುಂಬಲಿದ್ದಾರೆ. ಶಿಖರ್ ಧವನ್, ಕಿವೀಸ್ ವಿರುದ್ಧ ಕೊನೆ 3 ಏಕದಿನಗಳಲ್ಲಿ ನಿರೀಕ್ಷಿತ ಆಟವಾಡಿರಲಿಲ್ಲ. ಆದರೆ ನ್ಯೂಜಿಲೆಂಡ್ ಪ್ರವಾಸವನ್ನು ಉತ್ತಮವಾಗಿ ಮುಕ್ತಾಯಗೊಳಿಸಲು ಎದುರು ನೋಡುತ್ತಿದ್ದಾರೆ. ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ ಜೋಡಿ ತನ್ನ ಸ್ಪಿನ್ ಮೋಡಿಯನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.
ಧೋನಿ ಇರುವಾಗ ಗೆರೆ ದಾಟಬೇಡಿ: ಇದು ICC ನೀಡಿದ ಎಚ್ಚರಿಕೆ..!
ಕಿವೀಸ್‌ಗೆ ಪುಟಿದೇಳುವ ಗುರಿ: ಏಕದಿನ ಸರಣಿಯನ್ನು 1-4ರ ಅಂತರದಲ್ಲಿ ಸೋತ ಬಳಿಕ ಟಿ20 ಸರಣಿಯಲ್ಲಾದರೂ ಭಾರತ ವಿರುದ್ಧ ಪ್ರಾಬಲ್ಯ ಮೆರೆಯಲು ನ್ಯೂಜಿಲೆಂಡ್ ಕಾಯುತ್ತಿದೆ. ಟಿ20 ಮಾದರಿಯಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವೆ ನ್ಯೂಜಿಲೆಂಡ್ ನೆಲದಲ್ಲಿ ಈ ವರೆಗೂ ನಡೆದಿರುವುದು ಏಕೈಕ ಟಿ20 ಸರಣಿ. 2008-09ರಲ್ಲಿ ನಡೆದಿದ್ದ ಸರಣಿಯನ್ನು ಆತಿಥೇಯ ತಂಡ 2-0ಯಲ್ಲಿ ಜಯಿಸಿತ್ತು. ಭಾರತದಲ್ಲಿ 2012ರಲ್ಲಿ ನಡೆದಿದ್ದ 2 ಪಂದ್ಯಗಳ ಸರಣಿಯನ್ನು ನ್ಯೂಜಿಲೆಂಡ್ 1-0ಯಲ್ಲಿ ತನ್ನದಾಗಿಸಿಕೊಂಡಿತ್ತು. 2017-18ರಲ್ಲಿ ಕಿವೀಸ್ ಪಡೆಗೆ ಆತಿಥ್ಯ ವಹಿಸಿದ್ದ ಭಾರತ, 3 ಪಂದ್ಯಗಳ ಸರಣಿಯಲ್ಲಿ 2-1ರ ಜಯ ಸಾಧಿಸಿತ್ತು.
ದೇಸಿ ಟೂರ್ನಿಯಲ್ಲಿ ಮಿಂಚಿದ ಆಲ್ರೌಂಡರ್‌ಗಳಾದ ಡರೆಲ್ ಮಿಚೆಲ್ ಹಾಗೂ ಬ್ಲೇರ್ ಟಿಕ್ನೆರ್‌ರನ್ನು ತಂಡಕ್ಕೆ ಸೇರಿಸಿಕೊಂಡಿರುವ ಕಿವೀಸ್, ಇಬ್ಬರನ್ನು ಕಣಕ್ಕಿಳಿಸಲಿದೆಯಾ ಎನ್ನುವ ಕುತೂಹಲವಿದೆ. ಅನುಭವಿ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಸೇವೆ ತಂಡಕ್ಕೆ ಲಭ್ಯವಿರುವುದಿಲ್ಲ. ಟಿಮ್ ಸೌಥಿ ಬೌಲಿಂಗ್ ಪಡೆ ಮುನ್ನಡೆಸುವ ನಿರೀಕ್ಷೆ ಇದೆ. ರಾಸ್ ಟೇಲರ್, ಕೇನ್ ವಿಲಿಯಮ್ಸನ್ ಪ್ರದರ್ಶನ ತಂಡಕ್ಕೆ ನಿರ್ಣಾಯಕವೆನಿಸಲಿದೆ.
ತಂಡಗಳ ವಿವರ
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ, ಶುಭ್‌ಮನ್ ಗಿಲ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಸಿದ್ಧಾಥ್‌ರ್ ಕೌಲ್, ಖಲೀಲ್ ಅಹ್ಮದ್, ಮೊಹಮದ್ ಸಿರಾಜ್.
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಕಾಲಿನ್ ಮನ್ರೊ, ಸ್ಕಾಟ್ ಕುಗ್ಗೆಲಿಯಾನ್, ರಾಸ್ ಟೇಲರ್, ಕಾಲಿನ್ ಡಿ ಗ್ರಾಂಡ್‌ಹೋಮ್, ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫೆರ್ಟ್, ಜೇಮ್ಸ್ ನೀಶಮ್, ಲಾಕಿ ಫಗ್ರ್ಯೂಸನ್, ಡಗ್ ಬ್ರೇಸ್‌ವೆಲ್, ಡರೆಲ್ ಮಿಚೆಲ್, ಬ್ಲೇರ್ ಟಿಕ್ನೆರ್.
ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.