
ಹೈದರಾಬಾದ್(ಏ.22): ಹ್ಯಾಟ್ರಿಕ್ ಜಯದ ಬಳಿಕ ಮೊಹಾಲಿಯಲ್ಲಿ ಗೇಲ್ ಆರ್ಭಟಕ್ಕೆ ನಲುಗಿದ ಸನ್'ರೈಸರ್ಸ್ ಹೈದರಾಬಾದ್, ತವರಿನಲ್ಲಿ ಪುಟಿದೇಳಲು ಕಾತರಿಸುತ್ತಿದೆ. ಇಂದು ನಡೆಯುವ ಬಹು ನಿರೀಕ್ಷಿತ ದಕ್ಷಿಣ ಡರ್ಬಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. 4 ಪಂದ್ಯಗಳಲ್ಲಿ ತಲಾ 3ರಲ್ಲಿ ಗೆದ್ದಿರುವ ಉಭಯ ತಂಡಗಳು 6 ಅಂಕ ಪಡೆದಿದ್ದು, ಇಲ್ಲಿನ ಉಪ್ಪಳ ಕ್ರೀಡಾಂಗಣದಲ್ಲಿ ಗೆದ್ದ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
ಬಲಿಷ್ಠ ಬೌಲಿಂಗ್ ಪಡೆಯ ನೆರವಿನಿಂದ ಮೊದಲ 3 ಪಂದ್ಯದಲ್ಲಿ ಗೆದ್ದು ಬೀಗಿದ್ದ ವಿಲಿಯಮ್ಸನ್ ಪಡೆಗೆ ಬ್ಯಾಟಿಂಗ್ ತನ್ನ ದೌರ್ಬಲ್ಯ ಎನ್ನುವುದು ಕಳೆದ ಪಂದ್ಯದಲ್ಲಿ ಅರಿವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಸಮತೋಲನವಿಲ್ಲದಿರುವುದು ಚೆನ್ನೈ ವಿರುದ್ಧವೂ ರೈಸರ್ಸ್'ಗೆ ಮುಳುವಾಗಬಹುದು.
ಮತ್ತೊಂದೆಡೆ ಅನುಭವಿಗಳಿಂದ ತುಂಬಿರುವ ಚೆನ್ನೈ, ತನ್ನ ಚತುರ ನಾಯಕ ಧೋನಿಯ ರಣತಂತ್ರಗಳಿಂದ ದೊಡ್ಡ ತಾರೆಯರ ಸದ್ದಡಗಿಸುತ್ತಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್'ನ ಅಪಾಯಕಾರಿ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸಿದ ರೀತಿ ಮೆಚ್ಚುಗೆಗೆ ಪಾತ್ರವಾಗಿತ್ತು. ವಾಟ್ಸನ್ ಲಯಕ್ಕೆ ಮರಳಿರುವುದು ಹಾಗೂ ರೈನಾ ಗಾಯದಿಂದ ಚೇತರಿಸಿಕೊಂಡು ವಾಪಸಾಗಿರುವುದು ಸಿಎಸ್‌ಕೆ ಬಲ ಇಮ್ಮಡಿಗೊಳಿಸಿದೆ. ಚೆನ್ನೈನ ಆಲ್ರೌಂಡರ್ಸ್ ಹಾಗೂ ಸನ್'ರೈಸರ್ಸ್ ಬೌಲರ್ಸ್ ವಿರುದ್ಧ ಪೈಪೋಟಿ ಎಲ್ಲರ ಕುತೂಹಲ ಕೆರಳಿಸಿದೆ.
ಪಂದ್ಯ ಆರಂಭ: ಸಂಜೆ 4 ಗಂಟೆಗೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.