ಟೆನಿಸ್ ದಿಗ್ಗಜ ರೋಜರ್ ಫೆಡರರ್ ವಿರುದ್ದ ಭಾರತದ ಸಮಿತ್ ನಗಾಲ್ ಹೋರಾಟಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫೆಡರರ್ ವಿರುದ್ಧ ಕಣಕ್ಕಿಳಿದು ಮೊದಲ ಸೆಟ್‌ನಲ್ಲಿ ಗೆಲುವು ದಾಖಲಿಸೋ ಮೂಲಕ ವಿಶ್ವ ಟೆನಿಸ್ ಕ್ಷೇತ್ರಕ್ಕೆ ಶಾಕ್ ನೀಡಿದ್ದರು. ಸುಮಿತ್ ಹಾಗೂ ಫೆಡರರ್ ನಡುವಿನ ರೋಚಕ ಪಂದ್ಯದ ಮುಖ್ಯಾಂಶ ಇಲ್ಲಿದೆ.
ನ್ಯೂಯಾರ್ಕ್(ಆ.28): ಟೆನಿಸ್ ಮಾಂತ್ರಿಕ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ವಿರುದ್ಧ ಆಡುವ ಅವಕಾಶ ಸಿಗುವುದೇ ದೊಡ್ಡ ವಿಷಯ. ಹೀಗಿದ್ದಾಗ, ಫೆಡರರ್ ವಿರುದ್ಧ ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಪಂದ್ಯದಲ್ಲಿ ಕಣಕ್ಕಿಳಿದು ಮೊದಲ ಸೆಟ್ ಜಯಿಸಿದ ಸಾಧನೆಯನ್ನು ಭಾರತದ ಯುವ ಟೆನಿಸಿಗ ಸುಮಿತ್ ನಗಾಲ್ ಮಾಡಿದರು. ಮಂಗಳವಾರ ಬೆಳಗ್ಗೆ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸುಮಿತ್, 6-4, 1-6, 2-6, 4-6 ಸೆಟ್‌ಗಳಲ್ಲಿ ವೀರೋಚಿತ ಸೋಲು ಕಂಡರೂ, ಫೆಡರರ್ರಿಂದ ಬೆನ್ನು ತಟ್ಟಿಸಿಕೊಂಡರು. ‘ಈತ ವಿಶೇಷ ಪ್ರತಿಭೆ. ಅವರ ವೃತ್ತಿಬದುಕು ಉಜ್ವಲವಾಗಿರಲಿದೆ ಎಂದು ಅನಿಸುತ್ತಿದೆ’ ಎಂದು ಪಂದ್ಯದ ಬಳಿಕ ಫೆಡರರ್ ಹೇಳಿದರು.
ಇದನ್ನೂ ಓದಿ: ರೋಜರ್ ಫೆಡರರ್ ಬಗೆಗೆ ನಿಮಗೆ ಗೊತ್ತಿರದ 5 ಸಂಗತಿಗಳಿವು
undefined
ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಜ್ನೇಶ್ ಗುಣೇಶ್ವರನ್, ವಿಶ್ವ ನಂ.5 ರಷ್ಯಾದ ಡಾನಿಲ್ ಮೆಡ್ವೆಡೆವ್ ವಿರುದ್ಧ 4-6, 1-6, 2-6 ಸೆಟ್‌ಗಳಲ್ಲಿ ಪರಾಭವಗೊಂಡು ಹೊರಬಿದ್ದರು.
ಶರಪೋವಾಗೆ ಸೋಲು: ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ತಾರಾ ಆಟಗಾರ್ತಿಯರಾದ ಸೆರೆನಾ ವಿಲಿಯಮ್ಸ್ ಹಾಗೂ ಮರಿಯಾ ಶರಪೋವಾ ಮುಖಾಮುಖಿಯಾಗಿದ್ದರು. ಶರಪೋವಾ ವಿರುದ್ಧ ಸೆರೆನಾ 6-1, 6-1ರ ಸುಲಭ ಗೆಲುವು ಸಾಧಿಸಿ 2ನೇ ಸುತ್ತಿಗೇರಿದರು. ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ವಿಶ್ವ ನಂ.1 ನೋವಾಕ್ ಜೋಕೋವಿಚ್ ಸಹ ಸುಲಭ ಜಯ ಪಡೆದರು.