ಕನ್ನಡ ಸಿನಿಮಾ-ಕ್ರಿಕೆಟ್ ಪ್ರೇಮಿಗಳ ಪಾಲಿಗಿದು ಸಿಹಿ ಸುದ್ದಿ..!

First Published Jul 22, 2018, 1:19 PM IST
Highlights

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಟ ಸುದೀಪ್, ‘ಕಳೆದ ಬಾರಿಯ ಕೆಸಿಸಿ ಲೀಗ್ ಯಶಸ್ವಿಯಾಗಿದೆ. ಕೆಸಿಸಿ ಲೀಗ್ ಇನ್ನಷ್ಟು ಯಶಸ್ವಿಯಾಗಲು ಅಂತಾರಾಷ್ಟ್ರೀಯ ಆಟಗಾರರು ಲೀಗ್‌ನಲ್ಲಿ ಆಡಲಿದ್ದಾರೆ. ಇದರಿಂದ ಲೀಗ್ ಮತ್ತಷ್ಟು ಸ್ಪರ್ಧಾತ್ಮಕವಾಗಿರಲಿದೆ’ ಎಂದು ಹೇಳಿದ್ದಾರೆ. 

ಬೆಂಗಳೂರು[ಜು.22]: ಕರ್ನಾಟಕ ಚಲನಚಿತ್ರ ಕಪ್ ಟಿ20 ಲೀಗ್ 2ನೇ ಆವೃತ್ತಿಯು ಸೆಪ್ಟೆಂಬರ್ 8,9ರಂದು ನಡೆಯಲಿದೆ. ಈ ಬಾರಿಯ ಲೀಗ್‌ನ ವಿಶೇಷತೆಯೆಂದರೆ, 6 ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್, ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್, ಹರ್ಷಲ್ ಗಿಬ್ಸ್, ಇಂಗ್ಲೆಂಡ್‌ನ ಓವೈಸ್ ಷಾ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಟ ಸುದೀಪ್, ‘ಕಳೆದ ಬಾರಿಯ ಕೆಸಿಸಿ ಲೀಗ್ ಯಶಸ್ವಿಯಾಗಿದೆ. ಕೆಸಿಸಿ ಲೀಗ್ ಇನ್ನಷ್ಟು ಯಶಸ್ವಿಯಾಗಲು ಅಂತಾರಾಷ್ಟ್ರೀಯ ಆಟಗಾರರು ಲೀಗ್‌ನಲ್ಲಿ ಆಡಲಿದ್ದಾರೆ. ಇದರಿಂದ ಲೀಗ್ ಮತ್ತಷ್ಟು ಸ್ಪರ್ಧಾತ್ಮಕವಾಗಿರಲಿದೆ’ ಎಂದು ಹೇಳಿದ್ದಾರೆ. ‘ಕೆಸಿಸಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕು. ಹೀಗಾಗಿ ದಿಗ್ಗಜ ಆಟಗಾರರನ್ನು ಆಹ್ವಾನಿಸಿದರೆ ಹೇಗೆ ಎನ್ನುವ ಆಲೋಚನೆ ಬಂತು. ಕೇಳಿದೊಡನೆ ಎಲ್ಲರೂ ಒಪ್ಪಿಕೊಂಡಿದ್ದು ಬಹಳ ಸಂತೋಷ ನೀಡಿದೆ. ಇತಿಹಾಸ ಸೃಷ್ಟಿಸುತ್ತೇವೆ ಎಂದು ಹೊರಟವರು ಇತಿಹಾಸ ಸೃಷ್ಟಿಸುವುದಿಲ್ಲ. ನಾನು ಸುಮ್ಮನೆ ಆರಂಭಿಸಿದೆ, ಈಗ ಎಲ್ಲವೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಲೀಗ್ ಯಶಸ್ಸಿಗೆ ಚಿತ್ರರಂಗದ ಪ್ರತಿಯೊಬ್ಬರೂ ಬೆಂಬಲ ನೀಡುತ್ತಿದ್ದಾರೆ. ಶಿವರಾಜ್ ಕುಮಾರ್, ಪುನೀತ್, ಉಪೇಂದ್ರ, ಯಶ್ ಎಲ್ಲರೂ ಸಹಕಾರ ನೀಡುತ್ತಿದ್ದಾರೆ’ ಎಂದು ಸುದೀಪ್ ಹೇಳಿದರು.

ಬಳಿಕ ಮಾತನಾಡಿದ ವಿರೇಂದ್ರ ಸೆಹ್ವಾಗ್, ‘ನಮಸ್ಕಾರ ಬೆಂಗಳೂರು’ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದರು. ‘ಕನ್ನಡ ಚಿತ್ರರಂಗದ ಕುರಿತು ಕೇಳಿದ್ದೇನೆ. ನನ್ನ ಮಕ್ಕಳು ದಕ್ಷಿಣ ಭಾರತದ ಚಲನಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ’ ಎಂದು ಹೇಳಿದರು. ‘ನಟರೊಂದಿಗೆ ಕ್ರಿಕೆಟ್ ಆಡುವುದು ಹೊಸ ಅನುಭವ. ಈ ಹಿಂದೆ ಬಾಲಿವುಡ್ ನಟರೊಂದಿಗೆ ಒಂದು ಪಂದ್ಯವನ್ನಾಡಿದ್ದೆ.
ಈಗ ಕೆಸಿಸಿ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದೇನೆ’ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದಿಲ್ಶಾನ್, ಕ್ಲೂಸ್ನರ್, ಗಿಬ್ಸ್, ಷಾ ಸಹ ಪಾಲ್ಗೊಂಡಿದ್ದರು.

click me!