ಭಾರತ ವಿರುದ್ಧದ ಒನ್'ಡೇ ಸರಣಿಗಾಗಿ ಹೊಸ ನಾಯಕನಿಗೆ ಪಟ್ಟಕಟ್ಟಿದ ಲಂಕಾ..!

By Suvarna Web DeskFirst Published Nov 30, 2017, 1:55 PM IST
Highlights

ಪ್ರಮುಖ ಆಟಗಾರರು ಟಿ20 ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದಾಗ, ತಿಸಾರ ಪೆರೇರಾ ಯುವ ತಂಡವನ್ನು ಕಟ್ಟಿಕೊಂಡು ಪಾಕ್'ನಲ್ಲಿ ಆಡಿದ್ದು ಲಂಕಾ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಿತ್ತು. ಒತ್ತಡವನ್ನು ಪೆರೇರಾ ನಿಭಾಯಿಸಿದ ರೀತಿ, ಆಯ್ಕೆ ಸಮಿತಿಯ ಮನ ಸೆಳೆದಿತ್ತು. ಹೀಗಾಗಿ ಅವರನ್ನೇ ನಾಯಕರನ್ನಾಗಿ ನೇಮಕ ಮಾಡಲಾಯಿತು.

ಕೊಲಂಬೊ(ನ.30): ಶ್ರೀಲಂಕಾ ತಂಡದಲ್ಲಿ ಮತ್ತೊಮ್ಮೆ ನಾಯಕತ್ವದ ಬದಲಾವಣೆ ಆಗಿದೆ. ಭಾರತ ವಿರುದ್ಧ ನಡೆಯಲಿರುವ 3 ಏಕದಿನ ಹಾಗೂ 3 ಟಿ-20 ಪಂದ್ಯಗಳ ಸರಣಿಗೆ ಲಂಕಾ ತಂಡವನ್ನು ಆಲ್ರೌಂಡರ್ ತಿಸಾರ ಪೆರೇರಾ ಮುನ್ನಡೆಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಸದ್ಯದಲ್ಲೇ ಪೂರ್ಣ ತಂಡವನ್ನು ಪ್ರಕಟಿಸುವುದಾಗಿ ಲಂಕಾ ಮಂಡಳಿ ತಿಳಿಸಿದೆ.

ತರಂಗ ಕೈಜಾರಿದ ನಾಯಕತ್ವ: ಈ ವರ್ಷ ಜುಲೈನಲ್ಲಿ ಏಂಜೆಲೋ ಮ್ಯಾಥ್ಯೂಸ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೆಸ್ಟ್‌'ಗೆ ದಿನೇಶ್ ಚಾಂಡಿಮಲ್ ಹಾಗೂ ಸೀಮಿತ ಓವರ್‌'ಗಳ ತಂಡಕ್ಕೆ ಉಪುಲ್ ತರಂಗ ಅವರನ್ನು ನಾಯಕರನ್ನಾಗಿ ನೇಮಕಗೊಳಿಸಲಾಗಿತ್ತು. ತರಂಗಗೆ ನಾಯಕತ್ವ ನೀಡಿದ್ದು ಹಲವರ ಅಚ್ಚರಿಗೆ ಕಾರಣವಾಗಿತ್ತು. ನಾಯಕತ್ವ ವಹಿಸಿಕೊಂಡ ಬಳಿಕ ತಂಡದ ಪ್ರದರ್ಶನ ಗುಣಮಟ್ಟ ಹೆಚ್ಚಿಸುವಲ್ಲಿ ಅವರು ವಿಫಲರಾದರು. 3 ಏಕದಿನ ಸರಣಿಗಳಲ್ಲಿ 5-0 ಅಂತರದಿಂದ ಲಂಕಾ ವೈಟ್‌'ವಾಶ್ ಆದ ಬಳಿಕ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ತರಂಗ ಈಗಾಗಲೇ 2 ಬಾರಿ ನಿಧಾನಗತಿ ಬೌಲಿಂಗ್‌'ಗೆ ದಂಡ ಹಾಕಿಸಿಕೊಂಡಿದ್ದಾರೆ.

ಆಯ್ಕೆ ಸಮಿತಿ ಮನಗೆದ್ದ ಪೆರೇರಾ: ಪ್ರಮುಖ ಆಟಗಾರರು ಟಿ20 ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದಾಗ, ತಿಸಾರ ಪೆರೇರಾ ಯುವ ತಂಡವನ್ನು ಕಟ್ಟಿಕೊಂಡು ಪಾಕ್'ನಲ್ಲಿ ಆಡಿದ್ದು ಲಂಕಾ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಿತ್ತು. ಒತ್ತಡವನ್ನು ಪೆರೇರಾ ನಿಭಾಯಿಸಿದ ರೀತಿ, ಆಯ್ಕೆ ಸಮಿತಿಯ ಮನ ಸೆಳೆದಿತ್ತು. ಹೀಗಾಗಿ ಅವರನ್ನೇ ನಾಯಕರನ್ನಾಗಿ ನೇಮಕ ಮಾಡಲಾಯಿತು. ಆಯ್ಕೆ ಸಮಿತಿ ಮುಂದಿದ್ದ ಮತ್ತೆರಡು ಹೆಸರುಗಳೆಂದರೆ ಏಂಜೆಲೋ ಮ್ಯಾಥ್ಯೂಸ್ ಹಾಗೂ ದಿನೇಶ್ ಚಾಂಡಿಮಲ್. ಮ್ಯಾಥ್ಯೂಸ್ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುವುದರಿಂದ ಅವರ ಹೆಸರನ್ನು ಕೈಬಿಡಲಾಯಿತು. ಇನ್ನು ಚಾಂಡಿಮಲ್ ಸೀಮಿತ ಓವರ್ ಮಾದರಿಯಲ್ಲಿ ಲಯ ಕಳೆದುಕೊಂಡು ಪರದಾಡುತ್ತಿದ್ದಾರೆ. ಹೀಗಾಗಿ ನಾಯಕತ್ವ ಅವರಿಗೆ ಹೊರೆಯಾಗಲಿದೆ ಎಂದು ಪೆರೇರಾರನನ್ನು ನಾಯಕನಾಗಿ ನೇಮಿಸಲಾಯಿತು ಎಂದು ಲಂಕಾ ಕ್ರಿಕೆಟ್ ಮಂಡಳಿ ಮೂಲಗಳು ತಿಳಿಸಿವೆ. ತರಂಗ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದೇ, ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

click me!