Sports Flashback 2023: ರೊನಾಲ್ಡೋನಿಂದ ಜೋಕೋವರೆಗೆ ಜನವರಿಯಲ್ಲಿ ಸದ್ದು ಮಾಡಿದ ಸ್ಪೋರ್ಟ್ಸ್ ಸುದ್ದಿಗಳಿವು..!

By Naveen Kodase  |  First Published Dec 12, 2023, 12:11 PM IST

2023ರ ಜನವರಿ ತಿಂಗಳಿನಲ್ಲಿ ಕ್ರೀಡಾಕ್ಷೇತ್ರದಲ್ಲಿ ಗಮನ ಸೆಳೆದ ಮಹತ್ವದ ಘಟನೆಗಳನ್ನು ನಾವಿಂದು ಮೆಲುಕು ಹಾಕೋಣ ಬನ್ನಿ:


ಬೆಂಗಳೂರು: ನಾವೀಗ 2023ರ ಕೊನೆಯ ಘಟಕ್ಕೆ ಬಂದು ನಿಂತಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ 2023ಕ್ಕೆ ಗುಡ್‌ಬೈ ಹೇಳಿ 2024 ಅನ್ನು ವೆಲ್ಕಮ್‌ ಮಾಡಲಿಕ್ಕೆ ಸಜ್ಜಾಗಿದ್ದೇವೆ. ನಾವಿಂದು 2023ರ ಜನವರಿ ತಿಂಗಳಿನಲ್ಲಿ ಜರುಗಿದ ಮಹತ್ವದ ಕ್ರೀಡಾ ಚುಟುವಟಿಕೆಗಳನ್ನು ಮೆಲುಕು ಹಾಕೋಣ ಬನ್ನಿ.

ವರ್ಷಾರಂಭದಲ್ಲೇ ಪಥ ಬದಲಿಸಿದ ರೊನಾಲ್ಡೋ:

Latest Videos

undefined

ವಿಶ್ವ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರೆನಿಸಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಈ ವರ್ಷಾರಂಭದಲ್ಲಿ ಏಷ್ಯಾ ಫುಟ್ಬಾಲ್ ಜಗತ್ತಿಗೆ ಕಾಲಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಸೌದಿ ಅರೇಬಿಯಾದ ಅಲ್‌-ನಸ್ರ್ ಕ್ಲಬ್‌ ಜೊತೆ 2025ರ ವರೆಗೂ ಆಡಲು ರೊನಾಲ್ಡೋ ಒಪ್ಪಂದಕ್ಕೆ ಸಹಿ ಹಾಕಿದ್ದರು. ರೊನಾಲ್ಡೋಗೆ ವಾರ್ಷಿಕ 200 ಮಿಲಿಯನ್‌ ಯುರೋ(ಅಂದಾಜು 1775 ಕೋಟಿ ರು.) ವೇತನ ದೊರೆಯಲಿದೆ. ಇದರೊಂದಿಗೆ ವಿಶ್ವದ ಅತಿ ದುಬಾರಿ ಫುಟ್ಬಾಲಿಗ ಎನ್ನುವ ದಾಖಲೆಯನ್ನು 37 ವರ್ಷದ ರೊನಾಲ್ಡೋ ಬರೆದರು.

ಕಿಲಿಯಾನ್‌ ಎಂಬಾಪೆ ಫ್ರಾನ್ಸ್‌ ಲೀಗ್‌ನಲ್ಲಿ ಪ್ಯಾರಿಸ್‌ ಸೇಂಟ್‌ ಜರ್ಮೈನ್‌(ಪಿಎಸ್‌ಜಿ) ಪರ ಆಡುತ್ತಿದ್ದು, ಅವರು ವಾರ್ಷಿಕ 9.09 ಕೋಟಿ ಯುರೋ(ಅಂದಾಜು 806 ಕೋಟಿ ರು.) ವೇತನ ಪಡೆಯುತ್ತಿದ್ದರು. ಈ ಮೂಲಕ ಈ ವರೆಗೂ ಫುಟ್ಬಾಲ್‌ ಕ್ಲಬ್‌ವೊಂದರಿಂದ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರ ಎನ್ನುವ ದಾಖಲೆ ಹೊಂದಿದ್ದರು. ರೊನಾಲ್ಡೋ ಆ ದಾಖಲೆ ಮುರಿದಿದ್ದು, ಎಂಬಾಪೆಗಿಂತ ದುಪ್ಪಟ್ಟು ವೇತನ ಗಳಿಸಲಿದ್ದಾರೆ. 

ಟೀಂ ಇಂಡಿಯಾಗೆ ಆಯ್ಕೆಗೆ ಯೋ-ಯೋ ಟೆಸ್ಟ್‌ ಕಡ್ಡಾಯ..!

ಭಾರತ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಬೇಕು ಅಂದರೆ ಆಟಗಾರರು ಯೋ-ಯೋ ಫಿಟ್ನೆಸ್‌ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಪಾಸಾಗಬೇಕಿದೆ. 2016ರಿಂದ ಜಾರಿಯಲ್ಲಿದ್ದ ಈ ಪರೀಕ್ಷೆಯನ್ನು ಕೋವಿಡ್‌ ಬಳಿಕ ಕೈಬಿಡಲಾಗಿತ್ತು. ಆದರೆ ಅನೇಕ ಆಟಗಾರರು ಪದೇಪದೇ ಗಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಜುಗರಕ್ಕೆ ಒಳಗಾಗಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ), ಯೋ-ಯೋ ಫಿಟ್ನೆಸ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿತು.

ಡೆಕ್ಸಾ ಪರೀಕ್ಷೆಯೂ ಕಡ್ಡಾಯ!

ಯೋ-ಯೋ ಟೆಸ್ಟ್‌ ಜೊತೆ ಹೊಸದಾಗಿ ಡೆಕ್ಸಾ ಪರೀಕ್ಷೆಯಲ್ಲೂ ಪಾಸಾಗುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಆಟಗಾರರ ಮೂಳೆ  ಸ್ಕ್ಯಾನ್‌ ನಡೆಸಲಾಗುತ್ತದೆ. ಜೊತೆಗೆ ದೇಹದಲ್ಲಿರುವ ಕೊಬ್ಬಿನಂಶದ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಈ ಪರೀಕ್ಷೆಯ ಮೂಲಕ ಆಟಗಾರ ಗಾಯಗೊಳ್ಳುವ ಸಾಧ್ಯತೆಯ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಬಿಸಿಸಿಐ ತಿಳಿಸಿತ್ತು.

ರಿಷಭ್‌ ಪಂತ್ ಶಸ್ತ್ರಚಿಕಿತ್ಸೆ:

2022ರ ಡಿಸೆಂಬರ್ 30ರ ರಾತ್ರಿ ನಡೆದ ಗಂಭೀರ ರಸ್ತೆ ಅಪಘಾತದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ 25 ವರ್ಷದ ಪಂತ್‌ ಅವರ ತಲೆ, ಕೈ, ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿವೆ. ರಿಷಭ್ ಪಂತ್ ಅವರ ಲಿಗಮೆಂಟ್ ಸರ್ಜರಿಯ ಕುರಿತಂತೆ ಬಿಸಿಸಿಐ ಅಂತಿಮ ತೀರ್ಮಾನ ತೆಗೆದುಕೊಂಡಿತ್ತು.

ಟೆನಿಸ್ ಬದುಕಿಗೆ ಸಾನಿಯಾ ಮಿರ್ಜಾ ವಿದಾಯ:

ದಶಕಗಳ ಕಾಲ ಭಾರತ ಟೆನಿಸ್‌ನಲ್ಲಿ ಮಿಂಚಿದ್ದ ಮೂಗುತಿ ಸುಂದರಿ, ಜನವರಿಯ ಆರಂಭದಲ್ಲೇ ತಮ್ಮ ಟೆನಿಸ್ ವೃತ್ತಿಬದುಕಿಗೆ ವಿದಾಯ ಘೋಷಿಸುವ ತೀರ್ಮಾನ ಪ್ರಕಟಿಸಿದ್ದರು. 2023ರ ಆಸ್ಟ್ರೇಲಿಯನ್ ಓಪನ್ ಸಾನಿಯಾ ಆಡಿದ ಕೊನೆಯ ಟೆನಿಸ್ ಗ್ರ್ಯಾನ್‌ಸ್ಲಾಂ ಎನಿಸಿಕೊಂಡಿತು. 36 ವರ್ಷದ ಸಾನಿಯಾ ಮಿರ್ಜಾ ಫೆಬ್ರವರಿ ತಿಂಗಳಿನಲ್ಲಿ ದುಬೈನಲ್ಲಿ ನಡೆಯಲಿರುವ WTA 1000 ಟೂರ್ನಿ ಎಂದು ಘೋಷಿಸಿದರು.

ಬ್ರಿಜ್‌ಭೂಷಣ್ ವಿರುದ್ದ ಹೋರಾಟ ಆರಂಭಿಸಿದ ಕುಸ್ತಿಪಟುಗಳು:

ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ದ ಕೊಲೆ ಬೆದರಿಕೆ, ಲೈಂಗಿಕ ಕಿರುಕುಳ, ಇತ್ಯಾದಿ ಆರೋಪಗಳನ್ನು ಹೊರಿಸಿ ಖ್ಯಾತ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲಿ ಮೊದಲ ಬಾರಿಗೆ ಪ್ರತಿಭಟನೆ ಆರಂಭಿಸಿದರು. ಹಾಲಿ ಸಮಿತಿಯನ್ನು ವಿಸರ್ಜಿಸಿ ಕೂಡಲೇ ಹೊಸ ಸಮಿತಿ ಆಯ್ಕೆ ಮಾಡಬೇಕೆಂದು ಕುಸ್ತಿಪಟುಗಳು ಪಟ್ಟು ಹಿಡಿದರು. ಖ್ಯಾತ ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ, ವಿನೇಶ್‌ ಫೋಗಟ್‌, ಸಾಕ್ಷಿ ಮಲಿಕ್‌ ಸೇರಿ ಪ್ರಮುಖರು ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದರು.

ವುಮೆನ್ಸ್ ಪ್ರೀಮಿಯರ್‌ ಲೀಗ್; 5 ತಂಡಗಳು ಭಾಗಿ

ಬಹುನಿರೀಕ್ಷಿತ ಮಹಿಳಾ ಐಪಿಎಲ್‌ನ ತಂಡಗಳ ಬಿಡ್ಡಿಂಗ್‌ನಲ್ಲಿ 5 ತಂಡಗಳಿಗೆ ಅವಕಾಶ ನೀಡಲಾಗಿತ್ತು. ತಂಡಗಳ ಖರೀದಿಗೆ ಆರಂಭದಲ್ಲಿ 30ಕ್ಕೂ ಹೆಚ್ಚು ಸಂಸ್ಥೆಗಳು ಆಸಕ್ತಿ ವಹಿಸಿವೆ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ ಪುರುಷರ ಐಪಿಎಲ್‌ನ 7 ಫ್ರಾಂಚೈಸಿಗಳು ಸೇರಿ ಒಟ್ಟು 17 ಸಂಸ್ಥೆಗಳು ರೇಸ್‌ನಲ್ಲಿರುವುದು ಖಚಿತವಾಗಿತ್ತು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ಬಿಡ್ ಜಯಿಸುವಲ್ಲಿ ಯಶಸ್ವಿಯಾದವು. 

ICC ODI Rankings: ಮೊದಲ ಬಾರಿಗೆ ನಂ.1 ಪಟ್ಟಕ್ಕೇರಿಸಿದ ವೇಗಿ ಮೊಹಮ್ಮದ್ ಸಿರಾಜ್‌..!

ಟೀಂ ಇಂಡಿಯಾ ಮಾರಕ ವೇಗಿ ಮೊಹಮ್ಮದ್‌ ಸಿರಾಜ್‌, ಐಸಿಸಿ ಏಕದಿನ ರ‍್ಯಾಂಕಿಂಗ್‌‌ನಲ್ಲಿ ಇದೇ ಮೊದಲ ಬಾರಿಗೆ ನಂಬರ್ 01 ಸ್ಥಾನಕ್ಕೇರುವಲ್ಲಿ ಯಶಸ್ವಿಯಾದರು. ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ ಎದುರಿನ ಮೂರು ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಜೋಶ್ ಹೇಜಲ್‌ವುಡ್ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದರು. 

ಅರಿನಾ ಸಬಲೆಂಕಾ, ನೋವಾಕ್ ಜೋಕೋವಿಚ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್

3 ಬಾರಿ ಗ್ರ್ಯಾನ್‌ ಸ್ಲಾಂ ಸೆಮಿಫೈನಲ್‌ಗಳಲ್ಲಿ ಸೋತು ಪ್ರಶಸ್ತಿಯಿಂದ ದೂರ ಉಳಿದಿದ್ದ ಬೆಲಾರಸ್‌ನ ಅರಿನಾ ಸಬಲೆಂಕಾ, ಆಸ್ಪ್ರೇಲಿಯನ್‌ ಓಪನ್‌ ಗೆಲ್ಲುವ ಮೂಲಕ ಸಿಂಗಲ್ಸ್‌ ವಿಭಾಗದಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟರು. ಫೈನಲ್‌ನಲ್ಲಿ ಹಾಲಿ ವಿಂಬಲ್ಡನ್‌ ಚಾಂಪಿಯನ್‌, ಕಜಕಸ್ತಾನದ ಎಲೈನಾ ರಬೈಕೆನಾ ವಿರುದ್ಧ 4-6, 6-3, 6-4 ಸೆಟ್‌ಗಳಲ್ಲಿ ಜಯಿಸಿದರು.

ಇನ್ನು ನೋವಾಕ್‌ ಜೋಕೋವಿಚ್‌ 10ನೇ ಬಾರಿಗೆ ಆಸ್ಪ್ರೇಲಿಯನ್‌ ಓಪನ್‌ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು. ವೃತ್ತಿಬದುಕಿನಲ್ಲಿ 22ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸುವ ಮೂಲಕ ಸ್ಪೇನ್‌ನ ರಾಫೆಲ್‌ ನಡಾಲ್‌ರ ದಾಖಲೆ ಸರಿಗಟ್ಟುವಲ್ಲಿ ಜೋಕೋ ಯಶಸ್ವಿಯಾದರು.

click me!