Spain Masters: ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್‌ ಲಗ್ಗೆ

By Kannadaprabha News  |  First Published Mar 31, 2023, 6:45 AM IST

ಮ್ಯಾಡ್ರಿಡ್‌ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಿಂಧು, ಶ್ರೀಕಾಂತ್ ಮಿಂಚಿನಾಟ
2022ರ ಕಾಮನ್‌ವೆಲ್ತ್‌ ಗೇಮ್ಸ್‌ ಬಳಿಕ ಮೊದಲ ಬಾರಿಗೆ ಅಂತಿಮ 8ರ ಘಟ್ಟ ಪ್ರವೇಶಿದ ಸಿಂಧು
ಸಾಯಿ ಪ್ರಣೀತ್ ಮಣಿಸಿ ಎಂಟರಘಟ್ಟಕ್ಕೆ ಲಗ್ಗೆಯಿಟ್ಟ ಕಿದಂಬಿ ಶ್ರೀಕಾಂತ್


ಮ್ಯಾಡ್ರಿಡ್‌(ಮಾ.31): ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಸಿಂಧು, ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಇಂಡೋನೇಷ್ಯಾದ ಪುತ್ರಿ ಕುಸುವ ವರ್ದಾನಿ ವಿರುದ್ಧ 21-16, 21-14 ನೇರ ಗೇಮ್‌ಗಳಲ್ಲಿ ಜಯ ಸಾಧಿಸಿದರು. 2022ರ ಕಾಮನ್‌ವೆಲ್ತ್‌ ಗೇಮ್ಸ್‌ ಬಳಿಕ ಸಿಂಧು ಮೊದಲ ಬಾರಿಗೆ ಟೂರ್ನಿಯೊಂದರ ಅಂತಿಮ-8ರ ಸುತ್ತಿಗೇರಿದ್ದಾರೆ.

ಇನ್ನು ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಭಾರತದವರೇ ಆದ ಬಿ.ಸಾಯಿ ಪ್ರಣೀತ್‌ ವಿರುದ್ಧ 21-15, 21-12 ಗೇಮ್‌ಗಳಲ್ಲಿ ಜಯಿಸಿದರು. ಶ್ರೀಕಾಂತ್‌ಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ಎದುರಾಗಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

Tap to resize

Latest Videos

ಮೈಸೂರು ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಪ್ರಜ್ವಲ್‌ ದೇವ್‌

ಮೈಸೂರು: ಸ್ಥಳೀಯ ಆಟಗಾರ ಎಸ್‌.ಡಿ. ಪ್ರಜ್ವಲ್‌ ದೇವ್‌ ಮೈಸೂರು ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ತಾರಾ ಟೆನಿಸಿಗ ವಿಷ್ಣು ವರ್ಧನ್‌ ವಿರುದ್ಧ 6-4, 7-6(6) ಸೆಟ್‌ಗಳಲ್ಲಿ ಜಯಗಳಿಸಿದರು.

ಇನ್ನು ಭಾರತದವರೇ ಆದ ಫೈಸಲ್‌ ಕಮರ್‌ ವಿರುದ್ಧ ಗೆದ್ದ ಶಶಿಕುಮಾರ್‌ ಮುಕುಂದ್‌ ಸಹ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಶಶಿಕುಮಾರ್‌ಗಿದು ದಿನದಲ್ಲಿ 2ನೇ ಪಂದ್ಯವಾಗಿತ್ತು. ಬುಧವಾರ ಸಂಜೆ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಅಂತಿಮ 32ರ ಸುತ್ತಿನ ಪಂದ್ಯವನ್ನು ಗೆದ್ದ ಶಶಿ, ಗುರುವಾರ ಪ್ರಿ ಕ್ವಾರ್ಟರ್‌ನಲ್ಲಿ 6-1, 6-2ರ ಸುಲಭ ಜಯ ಸಾಧಿಸಿದರು.

Bengaluru: ಮಹಿಳಾ ಅಥ್ಲೀಟ್‌ನ ಬಾತ್‌ರೂಮ್‌ ವಿಡಿಯೋ ಸೆರೆಹಿಡಿದ ವಾಲಿಬಾಲ್‌ ಆಟಗಾರ್ತಿ!

ಇನ್ನು ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ಭಾರತೀಯ ಜೋಡಿಯಾದ ರಿತ್ವಿಕ್‌ ಚೌಧರಿ ಹಾಗೂ ನಿಕಿ ಪೂಣಚ್ಚ, ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ನಿತಿನ್‌ ಹಾಗೂ ಫ್ರಾನ್ಸ್‌ನ ಫ್ಲೋರೆಂಟ್‌ ವಿರುದ್ಧ 6-3, 7-6ರಲ್ಲಿ ಜಯಿಸಿ ಸೆಮೀಸ್‌ಗೇರಿತು.

ವನಿತಾ ಫುಟ್ಬಾಲ್‌: ಇಂದು ಕರ್ನಾಟಕ-ಅಸ್ಸಾಂ ಪಂದ್ಯ

ಬೆಂಗಳೂರು: 27ನೇ ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ಕರ್ನಾಟಕ ತನ್ನ 2ನೇ ಪಂದ್ಯವನ್ನಾಡಲಿದ್ದು, ಅಸ್ಸಾಂ ತಂಡವನ್ನು ಎದುರಿಸಲಿದೆ. ಗುಂಪು-6ರಲ್ಲಿ ಸ್ಥಾನ ಪಡೆದಿರುವ ಕರ್ನಾಟಕ, ಮೊದಲ ಪಂದ್ಯದಲ್ಲಿ ಗುಜರಾತ್‌ ವಿರುದ್ಧ 9-1 ಗೋಲುಗಳಲ್ಲಿ ಗೆಲುವು ಸಾಧಿಸಿತ್ತು. 

ಅಸ್ಸಾಂಗೆ ಇದು ಮೊದಲ ಪಂದ್ಯ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಪ್ರಧಾನ ಸುತ್ತಿಗೇರಲಿದ್ದು, 2ನೇ ಸ್ಥಾನ ಪಡೆಯುವ ತಂಡವು ಪ್ರಧಾನ ಸುತ್ತಿಗೇರಲು ಉಳಿದ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಬೇಕಿದೆ.

click me!