
ಹೈದರಾಬಾದ್: ಐಸಿಸಿ ಏಕದಿನ ವಿಶ್ವಕಪ್‌ಗೆ ಸೋಮವಾರ ಬಿಸಿಸಿಐ ತಂಡ ಆಯ್ಕೆ ಮಾಡಲಿದ್ದು, ಸಮಯಕ್ಕೆ ಸರಿಯಾಗಿ ಲಯ ಕಂಡುಕೊಂಡಿರುವ ಶಿಖರ್ ಧವನ್ ಮತ್ತೊಂದು ಆಕರ್ಷಕ ಇನ್ನಿಂಗ್ಸ್ ಮೂಲಕ ಆಯ್ಕೆಗಾರರ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ.
ಕೆಕೆಆರ್ ವಿರುದ್ಧ ಶುಕ್ರವಾರ ಅಜೇಯ 97 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಗೆಲುವು ತಂದುಕೊಟ್ಟ ಧವನ್, ಇಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಮಿಂಚಿ ತಂಡವನ್ನು ಮತ್ತೆ ಗೆಲ್ಲಿಸಲು ಉತ್ಸುಕರಾಗಿದ್ದಾರೆ. ಡೆಲ್ಲಿ ಬ್ಯಾಟಿಂಗ್ ಬಲಿಷ್ಠವಾಗಿದ್ದರೂ ಬೌಲಿಂಗ್ ವಿಭಾಗದಲ್ಲಿ ಸ್ವಲ್ಪ ದುರ್ಬಲ ಎನಿಸುತ್ತಿದೆ. ಆದರೂ ತಂಡ ಸತತ 2 ಪಂದ್ಯಗಳಲ್ಲಿ ಜಯಿಸಿದ್ದು, ಹ್ಯಾಟ್ರಿಕ್ ಬಾರಿಸಲು ಎದುರು ನೋಡುತ್ತಿದೆ.
ಮತ್ತೊಂದೆಡೆ ಸತತ 2 ಪಂದ್ಯಗಳಲ್ಲಿ ಸೋಲುಂಡಿರುವ ಸನ್‌ರೈಸರ್ಸ್, ಪುಟಿದೇಳಲು ಕಾತರಿಸುತ್ತಿದೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳನ್ನು ಹೊಂದಿರುವ ಸನ್‌ರೈಸರ್ಸ್, ಡೆಲ್ಲಿಗೆ ಸೋಲಿನ ರುಚಿ ತೋರಿಸಲು ರಣತಂತ್ರ ರೂಪಿಸಿದೆ. ಡೇವಿಡ್ ವಾರ್ನರ್ ಹಾಗೂ ಕಗಿಸೋ ರಬಾಡ ನಡುವಿನ ಪೈಪೋಟಿ ಕುತೂಹಲ ಹೆಚ್ಚಿಸಿದೆ.
ಪಿಚ್ ರಿಪೋರ್ಟ್
ಹೈದಾರಾಬಾದ್ ಪಿಚ್ ಬ್ಯಾಟ್ಸ್‌ಮನ್ ಸ್ನೇಹಿಯಾಗಿದ್ದು, ಇಲ್ಲಿ ನಡೆದಿರುವ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ನಿಧಾನಗತಿಯ ಬೌಲರ್‌ಗಳು ಹೆಚ್ಚು ಯಶಸ್ಸು ಕಂಡಿದ್ದಾರೆ. ಸ್ಪಿನ್ನರ್‌ಗಳ ಪಾತ್ರ ಮಹತ್ವದೆನಿಸಲಿದೆ.
ಒಟ್ಟು ಮುಖಾಮುಖಿ: 13
ಸನ್‌ರೈಸರ್ಸ್: 09
ಡೆಲ್ಲಿ: 04
ಸಂಭವನೀಯ ಆಟಗಾರರ ಪಟ್ಟಿ
ಸನ್‌ರೈಸರ್ಸ್: ವಾರ್ನರ್, ಬೇರ್‌ಸ್ಟೋವ್, ವಿಜಯ್, ನಬಿ, ಪಾಂಡೆ, ಹೂಡಾ, ಯೂಸುಫ್, ರಶೀದ್, ಭುವನೇಶ್ವರ್ (ನಾಯಕ), ಕೌಲ್, ಸಂದೀಪ್.
ಡೆಲ್ಲಿ: ಪೃಥ್ವಿ, ಧವನ್, ಶ್ರೇಯಸ್ (ನಾಯಕ), ಪಂತ್, ಇನ್‌ಗ್ರಾಂ, ಮೋರಿಸ್, ಅಕ್ಷರ್, ಪೌಲ್, ತೆವಾಟಿಯಾ, ರಬಾಡ, ಇಶಾಂತ್.
ಸ್ಥಳ: ಹೈದರಾಬಾದ್
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.