ಶೀತಲ್‌ ದೇವಿ ವರ್ಷದ ಶ್ರೇಷ್ಠ ಪ್ಯಾರಾ ಅಥ್ಲೀಟ್‌

By Kannadaprabha NewsFirst Published Dec 31, 2023, 9:37 AM IST
Highlights

ಸದ್ಯ ವಿಶ್ವ ನಂ.1 ಸ್ಥಾನದಲ್ಲಿರುವ 16ರ, ಜಮ್ಮು&ಕಾಶ್ಮೀರದ ಶೀತಲ್‌ ಪ್ಯಾರಾ ಏಷ್ಯಾಡ್‌ನಲ್ಲಿ 2 ಚಿನ್ನ, 1 ಬೆಳ್ಳಿ ಪಡೆದಿದ್ದರು. ಅಲ್ಲದೆ ಎರಡೂ ಕೈಗಳಿಲ್ಲದೆ ಅಂತಾರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡ ವಿಶ್ವದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದರು.

ನವದೆಹಲಿ(ಡಿ.31): ಇತ್ತೀಚೆಗಷ್ಟೇ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 3 ಪದಕ ಗೆದ್ದಿರುವ ಭಾರತದ ಶೀತಲ್‌ ದೇವಿ ವಿಶ್ವ ಆರ್ಚರಿ ಸಂಸ್ಥೆಯ ವರ್ಷದ ಶ್ರೇಷ್ಠ ಮಹಿಳಾ ಪ್ಯಾರಾ ಅಥ್ಲೀಟ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಸದ್ಯ ವಿಶ್ವ ನಂ.1 ಸ್ಥಾನದಲ್ಲಿರುವ 16ರ, ಜಮ್ಮು&ಕಾಶ್ಮೀರದ ಶೀತಲ್‌ ಪ್ಯಾರಾ ಏಷ್ಯಾಡ್‌ನಲ್ಲಿ 2 ಚಿನ್ನ, 1 ಬೆಳ್ಳಿ ಪಡೆದಿದ್ದರು. ಅಲ್ಲದೆ ಎರಡೂ ಕೈಗಳಿಲ್ಲದೆ ಅಂತಾರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡ ವಿಶ್ವದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದರು.

ಕ್ಯಾಂಡಿಟೇಟ್ಸ್‌ ಚೆಸ್‌ ಟೂರ್ನಿಗೆ ಗುಕೇಶ್‌: 3ನೇ ಭಾರತೀಯ

ಸಮರ್‌ಕಂದ್‌(ಉಜ್ಬೇಕಿಸ್ತಾನ): 2024ರ ಏ.2ರಿಂದ 25ರ ವರೆಗೆ ಕೆನಡಾದ ಟೊರೊಂಟೊದಲ್ಲಿ ನಡೆಯಲಿರುವ ಪ್ರತಿಷ್ಠಿತ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಗೆ ಭಾರತದ ಡಿ.ಗುಕೇಶ್‌ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅವರು ಟೂರ್ನಿಗೆ ಪ್ರವೇಶ ಪಡೆದ 3ನೇ ಭಾರತೀಯ ಎನಿಸಿಕೊಂಡಿದ್ದು, ಹೊಸ ಇತಿಹಾಸ ಸೃಷ್ಟಿಯಾಗಿದೆ.

ಮತ್ತೊಮ್ಮೆ ಬಯಲಾಯ್ತು ಭಾರತೀಯ ಬ್ಯಾಟರ್ಸ್ ವೀಕ್ನೇಸ್..!

ಈಗಾಗಲೇ ಆರ್‌.ಪ್ರಜ್ಞಾನಂದ ಹಾಗೂ ವಿದಿತ್‌ ಗುಜರಾತಿ ಟೂರ್ನಿಗೆ ಪ್ರವೇಶ ಪಡೆದಿದ್ದರು. ಸಮರ್‌ಕಂದ್‌ನಲ್ಲಿ ನಡೆದ ವಿಶ್ವ ಬ್ಲಿಡ್ಜ್‌ ಟೂರ್ನಿಯಲ್ಲಿ ಗುಕೇಶ್‌ ಹಾಗೂ ನೆದರ್‌ಲೆಂಡ್ಸ್‌ನ ಅನೀಶ್‌ ಗಿರಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕ್ಯಾಂಡಿಡೇಟ್ಸ್‌ ಪ್ರವೇಶಿಸಬೇಕಿದ್ದರೆ ಅನೀಶ್‌ ಅಗ್ರಸ್ಥಾನಿಯಾಗಬೇಕಿತ್ತು. ಆದರೆ 3ನೇ ಸ್ಥಾನಿಯಾದರು. ಹೀಗಾಗಿ 2ನೇ ಸ್ಥಾನಿ ಗುಕೇಶ್‌ಗೆ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಲಭಿಸಿತು.

ಪ್ರೊ ಕಬಡ್ಡಿ: ಟೈಟಾನ್ಸ್‌ಗೆ 7ನೇ ಸೋಲು

ನೋಯ್ಡಾ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ತೆಲುವು ಟೈಟಾನ್ಸ್‌ 7ನೇ ಸೋಲನುಭವಿಸಿದೆ. ಶನಿವಾರ ಯು ಮುಂಬಾ ವಿರುದ್ಧ ಟೈಟಾನ್ಸ್‌ 34-52 ಅಂಕಗಳಿಂದ ಶರಣಾಯಿತು. ಇದು ಮುಂಬಾಗೆ 7 ಪಂದ್ಯಗಳಲ್ಲಿ 5ನೇ ಗೆಲುವು.

ಪವನ್ ಶೆರಾವತ್‌ ಇಲ್ಲದೆ ಆಡಿದ ಟೈಟಾನ್ಸ್‌ ಆರಂಭದಿಂದಲೇ ಹಿನ್ನಡೆ ಅನುಭವಿಸಿತು. ಮೊದಲಾರ್ಧಕ್ಕೆ ತಂಡದ ಅಂಕ 17-24. ಆ ಬಳಿಕವೂ ಟೈಟಾನ್ಸ್‌ಗೆ ಪುಟಿದೇಳಲು ಅವಕಾಶ ನೀಡದ ಮುಂಬಾ, ಅಧಿಕಾರಯುತವಾಗಿ ಜಯಭೇರಿ ಬಾರಿಸಿತು. ಮುಂಬಾದ ಗುಮಾನ್‌ ಸಿಂಗ್‌ 10, ಡಿಫೆಂಡರ್‌ಗಳಾದ ಸೋಂಬೀರ್‌ ಹಾಗೂ ರಿಂಕು ತಲಾ 8 ಅಂಕ ಗಳಿಸಿದರು.

ಶನಿವಾರದ ಮತ್ತೊಂದು ಪಂದ್ಯದಲ್ಲಿ ಯು.ಪಿ.ಯೋಧಾಸ್‌ ವಿರುದ್ಧ ದಬಾಂಗ್‌ ಡೆಲ್ಲಿ 35-25 ಅಂಕಗಳ ಗೆಲುವು ಸಾಧಿಸಿತು. ತಂಡಕ್ಕಿದು 4ನೇ ಗೆಲುವು.

ಇಂದಿನ ಪಂದ್ಯಗಳು: ಗುಜರಾತ್‌-ಬೆಂಗಾಲ್‌, ರಾತ್ರಿ 8ಕ್ಕೆ

ಬೆಂಗಳೂರು ಬುಲ್ಸ್-ತಲೈವಾಸ್‌, ರಾತ್ರಿ 9ಕ್ಕೆ

ಎಎಫ್‌ಸಿ ಏಷ್ಯನ್‌ ಕಪ್‌: ಭಾರತ ತಂಡ ಪ್ರಕಟ

ನವದೆಹಲಿ: ಜ.12ರಿಂದ ಫೆ.10ರ ವರೆಗೆ ಕತಾರ್‌ನಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್‌ ಫುಟ್ಬಾಲ್ ಟೂರ್ನಿಗೆ 26 ಆಟಗಾರರ ಭಾರತ ತಂಡ ಪ್ರಕಟಗೊಂಡಿದೆ. ಅನುಭವಿಗಳಾದ ಸುನಿಲ್‌ ಚೆಟ್ರಿ, ಸಂದೇಶ್‌ ಝಿಂಗನ್, ಮಹೇಶ್‌ ಸಿಂಗ್‌, ಚಾಂಗ್ಟೆ, ಸಹಲ್‌ ಸಮದ್‌ ತಂಡದಲ್ಲಿದ್ದಾರೆ. ಟೂರ್ನಿಯಲ್ಲಿ 24 ತಂಡಗಳು ಭಾಗಿಯಾಗಲಿದ್ದು, ‘ಬಿ’ ಗುಂಪಿನಲ್ಲಿರುವ ಭಾರತ ಜ.13ರಂದು ಆಸ್ಟ್ರೇಲಿಯಾ, ಜ.18ಕ್ಕೆ ಉಜ್ಬೇಕಿಸ್ತಾನ, ಜ.23ಕ್ಕೆ ಸಿರಿಯಾ ವಿರುದ್ಧ ಸೆಣಸಲಿದೆ. ಭಾರತ ಈ ವರೆಗೆ 4 ಬಾರಿ ಟೂರ್ನಿಯಲ್ಲಿ ಆಡಿದ್ದು, 1964ರಲ್ಲಿ ರನ್ನರ್‌-ಅಪ್‌ ಆಗಿತ್ತು.

click me!