
ಮೆಲ್ಬೋರ್ನ್(ಜ.25): ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಕೃಷ್ಣಸುಂದರಿಯ ಗೆಲುವಿನ ನಾಗಾಲೋಟ ಮುಂದುವರೆದಿದ್ದು, 22 ಗ್ರಾಂಡ್'ಸ್ಲಾಮ್ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸ್ ಅಂತಿಮ ನಾಲ್ಕರ ಘಟ್ಟಕ್ಕೆ ದಾಪುಗಾಲಿಟ್ಟಿದ್ದಾರೆ.
ಇಲ್ಲಿನ ರಾಡ್ ಲೇವರ್ ಅರೇನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್'ಫೈನಲ್ ಹಣಾಹಣಿಯಲ್ಲಿ ಬ್ರಿಟನ್'ನ ಯುವ ಆಟಗಾರ್ತಿ, ಒಂಬತ್ತನೇ ಶ್ರೇಯಾಂಕಿತೆ ಜೋಹಾನ್ನ ಕೊಂಟಾ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡಿದ ದ್ವಿತೀಯ ಶ್ರೇಯಾಂಕಿತೆ ಸೆರೆನಾ, 6-2, 6-3 ನೇರ ಸೆಟ್'ಗಳಲ್ಲೇ ಜಯಶಾಲಿಯಾದರು.
75 ನಿಮಿಷಗಳ ಸೆಣಸಾಟದಾದ್ಯಂತ ಅಬ್ಬರಿಸಿದ ಸೆರೆನಾ, 10 ಏಸ್ ಮತ್ತು 25 ವಿನ್ನರ್'ಗಳನ್ನು ಸಿಡಿಸಿದರು. ಇದರೊಂದಿಗೆ ವರ್ಷದ ಮೊದಲ ಗಾಂಡ್'ಸ್ಲಾಮ್ ಟೂರ್ನಿಯಲ್ಲಿ ಎಂಟನೇ ಬಾರಿಗೆ ನಾಲ್ಕರ ಘಟ್ಟ ತಲುಪಿದ ಸಾಧನೆ ಮೆರೆದರು. ಭಾನುವಾರ ನಡೆಯಲಿರುವ ಫೈನಲ್'ಗೆ ಸ್ಥಾನ ಗಿಟ್ಟಿಸಲು ಆಕೆ ಕ್ರೊವೇಷಿಯಾದ ಮಿರ್ಜಾನ ಲುಸಿಕ್-ಬರೋನಿ ಎದುರಿನ ಪಂದ್ಯದಲ್ಲಿ ಗೆಲುವು ಕಾಣಬೇಕಿದೆ. ಅಂದಹಾಗೆ ಮಿರ್ಜಾನ, ಮತ್ತೊಂದು ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕಿತ ಆಟಗಾರ್ತಿ ಜೆಕ್ ಆಟಗಾರ್ತಿ ಕೆರೊಲಿನಾ ಪ್ಲಿಸ್ಕೋವಾ ವಿರುದ್ಧ 6-4, 3-6, 6-4 ಸೆಟ್'ಗಳಲ್ಲಿ ಜಯ ಪಡೆದರು. 1999ರ ವಿಂಬಲ್ಡನ್'ನಲ್ಲಿ ಸೆಮಿಫೈನಲ್ ತಲುಪಿದ್ದ ಮಿರ್ಜಾನ ತನ್ನ ವೃತ್ತಿಬದುಕಿನಲ್ಲಿ ದಾಖಲಿಸಿದ ಮೊಟ್ಟಮೊದಲ ಶ್ರೇಷ್ಠ ಪ್ರದರ್ಶನವಿದು.
ನಡಾಲ್ ನಾಲ್ಕರ ಘಟ್ಟಕ್ಕೆ
ಇತ್ತ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್ ಆಟಗಾರ ರಾಫೇಲ್ ನಡಾಲ್ ಸೆಮಿಫೈನಲ್‌ಗೆ ಧಾವಿಸಿದ್ದಾರೆ. ಟೂರ್ನಿಯ ಹತ್ತನೇ ದಿನವಾದ ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಮಿಲಾಸ್ ರೋನಿಕ್ ಎದುರು 6-4, 7-6, 6-4 ನೇರ ಸೆಟ್'ಗಳಲ್ಲಿ ಗೆಲುವು ಪಡೆದು ನಾಲ್ಕರ ಘಟ್ಟಕ್ಕೆ ಧಾವಿಸಿದರು.
2014ರ ಫ್ರೆಂಚ್ ಓಪನ್'ನಲ್ಲಿ ಚಾಂಪಿಯನ್ ಆದ ಬಳಿಕ ನಡಾಲ್ ಅವರಿಂದ ಹೊಮ್ಮಿದ ಶ್ರೇಷ್ಠ ಪ್ರದರ್ಶನವಿದು. ಇತ್ತ, ಮತ್ತೊಂದು ಕ್ವಾರ್ಟರ್‌ಫೈನಲ್ ಕಾದಾಟದಲ್ಲಿ ಬೆಲ್ಜಿಯಂನ ಡೇವಿಡ್ ಗಫಿನ್ ವಿರುದ್ಧ 6-3, 6-2, 6-4 ನೇರ ಸೆಟ್'ಗಳಲ್ಲಿ ಗೆಲುವು ಪಡೆದ ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೊವ್ ವಿರುದ್ಧ ಕಾದಾಡಲಿರುವ ನಡಾಲ್, ಮತ್ತೊಮ್ಮೆ ರೋಜರ್ ಫೆಡರರ್ ಜತೆಗೆ ಸೆಣಸಾಡುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.