ಬಿಸಿಸಿಐ ರೆಕ್ಕೆಗಳನ್ನು ಕತ್ತರಿಸಿದ ಸುಪ್ರೀಂ

By Web DeskFirst Published Oct 21, 2016, 2:40 PM IST
Highlights

ದೇಶದ ಕ್ರಿಕೆಟ್ ಚಟುವಟಿಕೆ ಪಾರದರ್ಶಕವಾಗಿರಲು ಒಬ್ಬ ಸ್ವತಂತ್ರ ಲೆಕ್ಕ ಪರಿಶೋಧಕರನ್ನು (ಆಡಿಟರ್) ನೇಮಿಸುವಂತೆ ನ್ಯಾ. ಲೋಧಾ ಸಮಿತಿಗೆ ಆದೇಶಿಸಿ ಇಂದು ಮಹತ್ವದ ತೀರ್ಪಿತ್ತಿದ್ದು, ಸ್ವಚ್ಛಂದವಾಗಿ ಹಾರಾಡುತ್ತಿದ್ದ ಬಿಸಿಸಿಐ ರೆಕ್ಕೆಗಳನ್ನು ಕತ್ತರಿಸಿದಂತಾಗಿದೆ.

ನವದೆಹಲಿ(ಅ.21): ಹಲವಾರು ಬಾರಿ ಸ್ಪಷ್ಟ ಎಚ್ಚರಿಕೆಗಳನ್ನು ನೀಡಿದರೂ, ಅದಕ್ಕೆ ಓಗೊಡದೆ ಹಟ ಹಿಡಿದ ಮಗುವಿನಂತೆ ಮಾಡುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಮತ್ತೊಮ್ಮೆ ಕಠೋರವಾಗಿರುವ ಸರ್ವೋಚ್ಚ ನ್ಯಾಯಾಲಯ, ದೇಶದ ಕ್ರಿಕೆಟ್ ಚಟುವಟಿಕೆ ಪಾರದರ್ಶಕವಾಗಿರಲು ಒಬ್ಬ ಸ್ವತಂತ್ರ ಲೆಕ್ಕ ಪರಿಶೋಧಕರನ್ನು (ಆಡಿಟರ್) ನೇಮಿಸುವಂತೆ ನ್ಯಾ. ಲೋಧಾ ಸಮಿತಿಗೆ ಆದೇಶಿಸಿ ಇಂದು ಮಹತ್ವದ ತೀರ್ಪಿತ್ತಿದ್ದು, ಸ್ವಚ್ಛಂದವಾಗಿ ಹಾರಾಡುತ್ತಿದ್ದ ಬಿಸಿಸಿಐ ರೆಕ್ಕೆಗಳನ್ನು ಕತ್ತರಿಸಿದಂತಾಗಿದೆ.

ಲೋಧಾ ಸಮಿತಿಯ ವರದಿಯನುಸಾರ ಜುಲೈ 18ರಂದು ನ್ಯಾಯಾಲಯ ನೀಡಿರುವ ತೀರ್ಪಿಗೆ ಬಿಸಿಸಿಐ ಬೇಷರತ್ ಬದ್ಧವಾಗಿರಬೇಕೆಂದು ಮುಖ್ಯ ನ್ಯಾ. ಟಿ.ಎಸ್. ಠಾಕೂರ್, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಎಲ್. ನಾಗೇಶ್ವರ ರಾವ್ ಅವರಿದ್ದ ತ್ರಿಸದಸ್ಯ ಪೀಠ ಪುನರುಚ್ಚರಿಸಿದೆ. ನ್ಯಾ. ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಲು ಎಷ್ಟು ಕಾಲಾವಕಾಶ ಬೇಕಾಗುತ್ತದೆ ಎಂಬುದನ್ನು ಡಿಸೆಂಬರ್ 3ರೊಳಗೆ ಲೋಧಾ ಸಮಿತಿಗೆ ಹಾಗೂ ನ್ಯಾಯಾಲಯಕ್ಕೆ ಖುದ್ದು ಅಫಿಡವಿಟ್ ಸಲ್ಲಿಸಬೇಕೆಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ‌್ಯದರ್ಶಿ ಅಜಯ್ ಶಿರ್ಕೆ ಅವರಿಗೆ ಸೂಚಿಸಿತಲ್ಲದೆ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.

ಒಪ್ಪಂದಗಳ ಮೇಲೆ ನಿಗಾ

ಲೋಧಾ ಸಮಿತಿಯಿಂದ ನೇಮಕವಾಗುವ ಲೆಕ್ಕ ಪರಿಶೋಧಕರು ಬಿಸಿಸಿಐನ ಉನ್ನತ ಮಟ್ಟದ ಒಪ್ಪಂದಗಳ ಕುರಿತಾದ ಹಣಕಾಸು ವ್ಯವಹಾರಗಳನ್ನು ಆಮೂಲಾಗ್ರವಾಗಿ ಪರಿಶೋಧಿಸಲಿದೆ. ಲೋಧಾ ಸಮಿತಿ ಒಪ್ಪದ ಹೊರತು ಈ ಒಪ್ಪಂದಗಳು ಜರುಗುವಂತಿಲ್ಲ ಎಂಬುದನ್ನೂ ನ್ಯಾಯಾಲಯ ಸ್ಪಷ್ಟಪಡಿಸಿತು. ಲೋಧಾ ಶಿಫಾರಸಿಗೆ ಕಟ್ಟುಬೀಳದ ಯಾವುದೇ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಅನುದಾನ ನೀಡುವಂತಿಲ್ಲ, ಅಂತೆಯೇ ಪಂದ್ಯ ಆಯೋಜನೆಯ ಹೆಸರಿನಲ್ಲಿಯೂ ಹಣಕಾಸು ವಹಿವಾಟು ನಡೆಸುವಂತಿಲ್ಲ ಎಂದ ನ್ಯಾಯಾಲಯ, ಈ ಆದೇಶದ ಪ್ರತಿಯನ್ನು ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ಅವರಿಗೂ ರವಾನಿಸುವಂತೆಯೂ ಹೇಳಿತು.

ಮಹತ್ವದ ಘಟ್ಟ

ಅಂದಹಾಗೆ ಬಹುಕೋಟಿ ವಹಿವಾಟಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2018ರಿಂದ ಮುಂದಿನ ಹತ್ತು ವರ್ಷಗಳ ಮಾಧ್ಯಮ ಹಕ್ಕುಗಳ ಹರಾಜನ್ನು ಇದೇ 25ರಂದು ನಡೆಸಲು ಮುಂದಾಗಿದ್ದ ಬಿಸಿಸಿಐಗೆ ನ್ಯಾಯಾಲಯದ ಈ ಮಹತ್ವಪೂರ್ಣ ಆದೇಶ ದಿಗ್ಭ್ರಮೆ ತರಿಸಿದೆ. ಪ್ರಸಕ್ತ 1.6 ಬಿಲಿಯನ್ ಡಾಲರ್ (ಅಂದಾಜು 12 ಸಾವಿರ ಕೋಟಿ) ಗಳಿಗೆ 2017ರವರೆಗಿನ ಐಪಿಎಲ್ ಮಾಧ್ಯಮ ಹಕ್ಕನ್ನು ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್ ಪ್ರೈ.ಲಿ. ತನ್ನದಾಗಿಸಿಕೊಂಡಿದೆ. ಮುಂದಿನ ವಾರ ನಡೆಯಲಿರುವ ಹರಾಜಿನಲ್ಲಿ ಬಿಸಿಸಿಐ 4.5 ಬಿಲಿಯನ್ ಡಾಲರ್ ಗಳಿಸುವ ನಿರೀಕ್ಷೆಯಲ್ಲಿತ್ತು. ಸೋನಿಯಷ್ಟೇ ಅಲ್ಲದೆ, ಟ್ವಿಟರ್,ಫೇಸ್‌ಬುಕ್, ಸ್ಟಾರ್ ಇಂಡಿಯಾ ಪ್ರೈ.ಲಿ. ರಿಲಯೆನ್ಸ್ ಜಿಯೊ ಡಿಜಿಟಲ್ ಸರ್ವೀಸ್ ಪ್ರೈ.ಲಿ. ಅಲ್ಲದೆ ಇನ್ನೂ ಹಲವಾರು ಕಂಪೆನಿಗಳು ಐಪಿಎಲ್ ಮಾಧ್ಯಮ ಹಕ್ಕಿಗಾಗಿ ಮುಗಿಬಿದ್ದಿವೆ.

click me!