ಪರಸ್ಪರ ಕೆಸೆರೆರೆಚಾಟದಲ್ಲಿ ನಿರತರಾದ ಪೇಸ್, ಸಾನಿಯಾ, ಬೋಪಣ್ಣ

Published : Sep 19, 2016, 04:32 PM ISTUpdated : Apr 11, 2018, 12:53 PM IST
ಪರಸ್ಪರ ಕೆಸೆರೆರೆಚಾಟದಲ್ಲಿ ನಿರತರಾದ ಪೇಸ್, ಸಾನಿಯಾ, ಬೋಪಣ್ಣ

ಸಾರಾಂಶ

ನವದೆಹಲಿ

ದೇಶದ ಹಿರಿಯ ಟೆನಿಸ್ ಆಟಗಾರರ ನಡುವಿನ ‘ವಿಷಮಯ’ ಭಿನ್ನಾಭಿಪ್ರಾಯಗಳು ಹೊರಬೀಳುತ್ತಲೇ ಇವೆ. ಜನಪ್ರಿಯ ಸಾಮಾಜಿಕ ಜಾಲತಾಣ ಟ್ವೀಟರ್ ಅನ್ನು ವೇದಿಕೆಯಾಗಿರಿಸಿಕೊಂಡು ಹಿರಿಯ ಆಟಗಾರರಾದ ಲಿಯಾಂಡರ್ ಪೇಸ್ ವಿರುದ್ಧ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಹರಿಹಾಯ್ದಿರುವುದಲ್ಲದೆ, ಈ ಮೂವರೂ ಪರಸ್ಪರ ಕೆಸರೆರೆಚಾಟದಲ್ಲಿ ನಿರತರಾಗಿರುವುದು ಭಾರತೀಯ ಟೆನಿಸ್ ರಂಗ ಸಾಗಿರುವ ದುರಂತದೆಡೆಗೆ ಸಾಕ್ಷ್ಯ ಒದಗಿಸಿದೆ.

ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದ ಸಾನಿಯಾ ಮಿರ್ಜಾ ಅವರು, ‘‘ವಿಷಕಾರಿ ವ್ಯಕ್ತಿಯ ಜತೆ ಆಡುವುದನ್ನು ತಪ್ಪಿಸಿಕೊಳ್ಳಬೇಕೆಂದರೆ ಅದಕ್ಕಿರುವ ಉತ್ತಮ ಉಪಾಯ ಆತನಿಂದ ದೂರ ಉಳಿಯುವುದು’’ ಎಂದು ಹೇಳಿದ್ದು ಪರೋಕ್ಷವಾಗಿ ಪೇಸ್ ಅವರಿಗೇ ಹೇಳಿದಂತಿತ್ತು. ಅದು ಆ ಹೊತ್ತಿಗೆ ಕೆಲವಾರು ಅಂತರ್ಜಾಲ ಮಾಧ್ಯಮಗಳಲ್ಲಿ ಚರ್ಚೆಯೂ ಆಗಿತ್ತು.

ಇದರ ಬೆನ್ನಲ್ಲೇ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದ ಲಿಯಾಂಡರ್ ಪೇಸ್, ಸಾನಿಯಾ ಹೆಸರನ್ನು ಹೇಳದೇ ‘‘ನನ್ನ ಏಳ್ಗೆಯನ್ನು ಸಹಿಸದ ಕೆಲವರು ನನ್ನನ್ನು ಕೆಟ್ಟ ಮನುಷ್ಯನೆಂದು ಬಿಂಬಿಸುತ್ತಿದ್ದಾರೆ. ನನ್ನ ಇಷ್ಟು ವರ್ಷದ ವೃತ್ತಿಜೀವನದಲ್ಲಿ ನನ್ನೊಂದಿಗೆ ಆಡಿದ ಬಹುತೇಕರು ನನ್ನ ಏಳ್ಗೆಯ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಾರೆ. 10 ಜನ್ಮ ಎತ್ತಿದರೂ ನನ್ನೊಂದಿಗೆ ಆಡಿದ ಆಟಗಾರರು ನಾನು ಏರಿರುವ ಎತ್ತರಕ್ಕೆ ಏರಲಾರರು. ಇದು ಅಹಂಕಾರದ ಮಾತಲ್ಲ. ಆದರೆ ಆಟಗಾರನಿಗೆ ಸ್ವಪ್ರತಿಷ್ಠೆಗಿಂತ ದೇಶಕ್ಕಾಗಿ ಆಡುವ ಮನಸ್ಸಿರಬೇಕು. ಸಾಧನೆಗಾಗಿ ಪರಿಶ್ರಮಪಡಬೇಕು. ಆದರೆ, ಕೆಲವು ಆಟಗಾರರಿಗೆ ಅದು ಬೇಕಿಲ್ಲ. ಸುಮ್ಮನೇ ನನ್ನ ಕಡೆಗೆ ಬೆರಳು ತೋರುವ ಮೂಲಕ ಆತ್ಮತೃಪ್ತಿ ಪಡುತ್ತಿದ್ದಾರಷ್ಟೇ’’ ಎಂದು ತಿಳಿಸಿದ್ದಾರೆ.

ಇದು ಕೆಲವು ಅಂತರ್ಜಾಲ ಮಾಧ್ಯಮಗಳಲ್ಲಿ ಕೆಲವು ಗಂಟೆಗಳಲ್ಲೇ ಪ್ರಕಟಗೊಂಡಿದೆ. ಇದಾದ ನಂತರ, ಬೋಪಣ್ಣ ಕೂಡ ಲಿಯಾಂಡರ್ ಪೇಸ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಲು ಮುಂದಾಗಿದ್ದಾರೆ. ಸಾನಿಯಾ ಅವರ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ ಬೋಪಣ್ಣ, ಅದರ ಜತೆಗೆ ತಮ್ಮದೂ ಒಂದು ಅಭಿಪ್ರಾಯ ಹಾಕಿ, ‘‘ಇದು ಮತ್ತೆ ಮರುಕಳಿಸಿದೆ. ಮಾಧ್ಯಮಗಳ ಮುಂದೆ ಸಹ ಆಟಗಾರರನ್ನು ಟೀಕಿಸುವ ಮೂಲಕ ಆ ವ್ಯಕ್ತಿಯು ಹೆಡ್‌ಲೈನ್‌ಗಳಲ್ಲಿ ಮಿಂಚುವ ತಮ್ಮ ಹವ್ಯಾಸವನ್ನು ಮುಂದುವರಿಸಿದ್ದಾರೆ’’ ಎಂದು ಹೇಳಿದ್ದಲ್ಲದೆ, ಹ್ಯಾಷ್‌ಟ್ಯಾಗ್ ಹಾಕಿ ಪ್ಯಾಟ್ರಿಯಾಟಿಸಂ (ದೇಶಭಕ್ತಿ) ಎಂದು ಉಲ್ಲೇಖಿಸಿದ್ದಾರೆ.

ಟ್ವೀಟ್ ಸಮರಕ್ಕೆ ಕಾರಣವಾಯಿತು ಪೇಸ್ ಹೇಳಿಕೆ

ಇತ್ತೀಚೆಗೆ ನಡೆದ ಡೇವಿಸ್ ಕಪ್ ವಿಶ್ವ ಗುಂಪು ಪ್ಲೇ ಆಫ್ ಸುತ್ತಿನ ಪಂದ್ಯದ ವೇಳೆ, ಲಿಯಾಂಡರ್ ಪೇಸ್ ನೀಡಿದ್ದ ಹೇಳಿಕೆಯೊಂದು ಈ ಎಲ್ಲಾ ವಿವಾದಕ್ಕೆ ಮೂಲಕಾರಣವಾಗಿದೆ. ಡೇವಿಸ್ ಕಪ್ ಪಂದ್ಯವೊಂದರ ನಂತರ ಮಾತನಾಡಿದ್ದ ಪೇಸ್, ‘‘ಈ ಬಾರಿಯ ರಿಯೊ ಒಲಿಂಪಿಕ್ಸ್ ಹಾಗೂ ಕಳೆದ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟಗಳಿಗೆ ಸಮರ್ಥವಾದ ಟೆನಿಸ್ ತಂಡವನ್ನು ಭಾರತ ಕಳುಹಿಸಲಿಲ್ಲ. ಹಾಗಾಗಿ, ಈ ಎರಡೂ ಕ್ರೀಡಾಕೂಟಗಳಲ್ಲಿ ಭಾರತ ಹಿನ್ನಡೆ ಕಾಣಬೇಕಾಯಿತು. ಇತ್ತೀಚೆಗೆ ಮುಕ್ತಾಯವಾದ ರಿಯೊ ಒಲಿಂಪಿಕ್ಸ್‌ನ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಜೋಡಿಗೆ ಪದಕ ಗೆಲ್ಲುವ ಎಲ್ಲಾ ಅವಕಾಶಗಳಿದ್ದರೂ ಆ ಜೋಡಿ ಅದನ್ನು ಉಪಯೋಗಿಸಿಕೊಳ್ಳಲಿಲ್ಲ’’ ಎಂಬರ್ಥದ ಮಾತುಗಳನ್ನಾಡಿದ್ದರು. ಇದು, ರಿಯೊ ಒಲಿಂಪಿಕ್ಸ್ ಮಿಶ್ರ ಡಬಲ್ಸ್‌ನಲ್ಲಿ ಪೇಸ್ ಬದಲಿಗೆ ಬೋಪಣ್ಣ ಅವರನ್ನು ಆಯ್ದುಕೊಂಡಿದ್ದ ಸಾನಿಯಾ ಮಿರ್ಜಾ ಅವರಿಗೆ ನೇರವಾಗಿ ಟೀಕಿಸಿದಂತಿತ್ತು. ಇದೇ ಮುಂದಿನ ಎಲ್ಲಾ ಕೆಸರೆರೆಚಾಟಕ್ಕೆ ನಾಂದಿ ಹಾಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?