
ರಾಜ್ಯ ರಣಜಿ ಆಟಗಾರರಾದ ಆರಂಭಿಕ ಆಟಗಾರ ಆರ್. ಸಮರ್ಥ್, ನಾಯಕ ರಾಬಿನ್ ಉತ್ತಪ್ಪ ಅವರ ಸಿಡಿಲಬ್ಬರದ ಅರ್ಧ ಶತಕದ ನೆರವಿನಿಂದ ಬಿಜಾಪುರ ಬುಲ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್ ನೀಡಿದ್ದ 188 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಕೆಪಿಎಲ್‌ನ ಐದನೇ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿತು.
ಇಲ್ಲಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಸೋಮವಾರ ನಡೆದ ಕೆಪಿಎಲ್ 5ನೇ ಆವೃತ್ತಿಯ ಮೂರನೇ ದಿನದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದರೂ ಫಿಲ್ಡಿಂಗ್ ಆಯ್ದುಕೊಂಡ ಬಿಜಾಪುರ ಬುಲ್ಸ್ ತಂಡ, ಉತ್ತಮ ಕ್ಷೇತ್ರ ರಕ್ಷಣೆ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 188 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.
ಹುಬ್ಬಳ್ಳಿ ಟೈಗರ್ಸ್ ನೀಡಿದ 189 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಬಿಜಾಪುರ ಬುಲ್ಸ್ ತಂಡ, 19.4 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 191 ರನ್ ಪೇರಿಸುವ ಮೂಲಕ ಜಯದ ಮಾಲೆ ಧರಿಸಿತು. ಆರಂಭಿಕ ಬ್ಯಾಟ್ಸಮನ್ ಆರ್. ಸಮರ್ಥ್ ಅವರ ಭರ್ಜರಿ ಬ್ಯಾಟಿಂಗ್ (7 ಬೌಂಡರಿ ಹಾಗೂ 3 ಸಿಕ್ಸ್‌ಗಳೊಂದಿಗೆ 87 ರನ್) ನೆರವಿನೊಂದಿಗೆ ಇನ್ನೂ 2 ಎಸೆತ ಇರುವಾಗಲೇ ಬಿಜಾಪುರ ಬುಲ್ಸ್ ತಂಡ ಗೆಲುವಿನ ನಗೆ ಬೀರಿತು. ಪ್ರಾರಂಭದಲ್ಲಿ ವೇಗವಾಗಿ ರನ್ ಗಳಿಕೆಗೆ ಮುಂದಾಗಿದ್ದ ಎಂ.ಜಿ. ನವೀನ್ 20 ರನ್ ಗಳಿಸಿದಾಗ ಹೂವರ್ ಎಸೆತದಲ್ಲಿ ಭರತ್‌ಗೆ ಕ್ಯಾಚ್ ನೀಡಿದರು. ನಂತರ ಮೈದಾನಕ್ಕಿಳಿದ ನಾಯಕ ರಾಬಿನ್ ಉತಪ್ಪ ಅವರ ಅರ್ಧಶತಕ (1 ಸಿಕ್ಸ್ 6 ಬೌಂಡರಿಗಳ ನೆರವಿನ 51 ರನ್) ತಂಡದ ಗೆಲುವಿಗೆ ಸಹಾಯವಾಯಿತು.
ಹುಬ್ಬಳ್ಳಿ ಟೈಗರ್ಸ್‌ನ ಎಸ್. ಅರವಿಂದ 1 ವಿಕೆಟ್ ಪಡೆದರೆ, ಸ್ಟಾಲಿನ್ ಹೂವರ್ 32 ರನ್ ನೀಡಿ 2 ವಿಕೆಟ್ ಪಡೆದರು.
ಮೊಹಮ್ಮದ್ ಸ್ಫೋಟಕ ಬ್ಯಾಟಿಂಗ್
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ನ ಲಾಭ ಪಡೆದ ಹುಬ್ಬಳ್ಳಿ ಟೈಗರ್ಸ್ ತಂಡ ಮೊಹ್ಮದ್ ತಹಾ ಅವರ ಸ್ಪೋಟಕ ಬ್ಯಾಟಿಂಗ್ (7 ಸಿಕ್ಸ್ ಹಾಗೂ 5 ಬೌಂಡರಿಗಳ ನೆರವಿನ 89ರನ್) ನೆರವಿನಿಂದ ಬಿಜಾಪುರ ಬುಲ್ಸ್ ತಂಡದಲ್ಲಿ ನಡುಕ ಹುಟ್ಟಿಸಿದ್ದರು. ಮೊಹ್ಮದ್ ತಹಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ ರೆಡ್ಡಿ ಮೊದಲ ವಿಕೆಟ್‌ಗೆ ಕೇವಲ 12.1 ಓವರ್‌ಗಳಲ್ಲಿ ಭರ್ಜರಿ 118 ರನ್ ಸೇರಿಸಿದ್ದರು.
ನಾಯಕ ಕುನಾಲ್ ಕಪೂರ (ಅಜೇಯ 14), ಕೆ.ಬಿ. ಭರತ (ಔಟಾಗದೇ 4 ) ಕೊನೆಯ ತನಕ ಕ್ರೀಸಿನಲ್ಲಿದ್ದು, ತಂಡ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಲು ಮಾತ್ರ ಶಕ್ತವಾಯಿತು. ಮೊಹ್ಮದ ತಹಾ, ಅಭಿಷೇಕ ರೆಡ್ಡಿ ಕ್ರೀಸಿನಲ್ಲಿದ್ದಾಗ ಹುಬ್ಬಳ್ಳಿ ಟೈಗರ್ಸ್ ವೇಗವಾಗಿ ರನ್ ಗಳಿಸುತ್ತಿತ್ತಲ್ಲದೇ 200 ರ ಗಡಿ ದಾಟುವ ನಿರೀಕ್ಷೆ ಇತ್ತು.
ಬಿಜಾಪೂರ ಬುಲ್ಸ್‌ನ ಎಸ್.ಎ. ಖಾದರ, ಎಂ.ಜಿ. ನವೀನ ಹಾಗೂ ಎ. ಮಿಥುನ ತಲಾ 2 ವಿಕೆಟ್ ಪಡೆದರೆ, ಝಡ್. ಫಾರುಖ್ ಅವರು 1 ವಿಕೆಟ್ ಕಬಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.