ಮಹಿಳಾ ಅಥ್ಲೀಟ್‌ಗಳ ಜೊತೆ ಮಹಿಳಾ ಕೋಚ್‌ ಕಡ್ಡಾಯ: SAI ಮಹತ್ವದ ತೀರ್ಮಾನ

By Kannadaprabha News  |  First Published Jun 16, 2022, 10:03 AM IST

* ಮಹಿಳಾ ಅಥ್ಲೀಟ್‌ಗಳ ಜೊತೆ ಮಹಿಳಾ ಕೋಚ್‌ಗಳು ಪ್ರಯಾಣಿಸುವುದನ್ನು ಕಡ್ಡಾಯ
*  ರಾಷ್ಟ್ರೀಯ ಕೋಚ್‌ಗಳ ವಿರುದ್ಧ ಅನುಚಿತ ವರ್ತನೆ ಬಗ್ಗೆ ಗಂಭೀರ ಆರೋಪ
* 15ಕ್ಕೂ ಹೆಚ್ಚು ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಅಧಿಕಾರಿಗಳ ಜೊತೆ SAI ಮಾತುಕತೆ
 


ನವದೆಹಲಿ(ಜೂ.16): ಇತ್ತೀಚೆಗೆ ಸೈಕ್ಲಿಸ್ಟ್‌ ಹಾಗೂ ಹಾಯಿದೋಣಿ ಪಟುಗಳಿಬ್ಬರು ತಮ್ಮ ತಮ್ಮ ರಾಷ್ಟ್ರೀಯ ಕೋಚ್‌ಗಳ ವಿರುದ್ಧ ಅನುಚಿತ ವರ್ತನೆ ಬಗ್ಗೆ ಗಂಭೀರ ಆರೋಪ ಮಾಡಿದ ಬಳಿಕ ಎಚ್ಚೆತ್ತುಕೊಂಡಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌) ಇನ್ನು ಮುಂದೆ ಮಹಿಳಾ ಅಥ್ಲೀಟ್‌ಗಳ ಜೊತೆ ಮಹಿಳಾ ಕೋಚ್‌ಗಳು ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಿದೆ. ಈ ಬಗ್ಗೆ ಸಾಯ್‌ ನಿರ್ದೇಶಕ ಸಂದೀಪ್‌ ಪ್ರಧಾನ್‌ ಸೋಮವಾರ 15ಕ್ಕೂ ಹೆಚ್ಚು ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಕೆಲ ನಿರ್ದೇಶನಗಳನ್ನು ನೀಡಿದ್ದಾರೆ. ‘ದೇಶ ಹಾಗೂ ವಿದೇಶದಲ್ಲಿ ನಡೆಯುವ ಯಾವುದೇ ಕೂಟಗಳಲ್ಲಿ ಮಹಿಳಾ ಅಥ್ಲೀಟ್‌ಗಳು ಪಾಲ್ಗೊಳ್ಳುವಾಗ ಅವರ ಜೊತೆ ಮಹಿಳಾ ಕೋಚ್‌ಗಳು ಕಡ್ಡಾಯವಾಗಿ ಇರಬೇಕು’ ಎಂದು ಅವರು ಹೇಳಿದ್ದಾರೆ. ಅಲ್ಲದೇ, ರಾಷ್ಟ್ರೀಯ ತರಬೇತಿ ಶಿಬಿರಗಳು, ವಿದೇಶಿ ಪ್ರವಾಸದಲ್ಲಿ ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಿಸಬೇಕು. ಅಥ್ಲೀಟ್‌ಗಳಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಸೈಕ್ಲಿಸ್ಟ್‌ ಪಟುವೊಬ್ಬರು ತಾವು ಸ್ಲೊವೇನಿಯಾಕ್ಕೆ ತರಬೇತಿಗೆ ತೆರಳಿದ್ದಾಗ ಕೋಚ್‌ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿ, ತನ್ನೊಂದಿಗೆ ಮಲಗಲು ಒತ್ತಾಯಿಸಿದ್ದಾಗಿ ದೂರು ನೀಡಿದ್ದರು. ಬಳಿಕ ಹಾಯಿದೋಣಿ ಪಟು ತಮ್ಮ ಕೋಚ್‌ ಜರ್ಮನಿಯಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದರು.

Tap to resize

Latest Videos

ಇಂಡೋನೇಷ್ಯಾ ಓಪನ್‌: ಸೆನ್‌, ಶ್ರೀಕಾಂತ್‌ ಹೊರಕ್ಕೆ

ಜಕಾರ್ತ: ಭಾರತದ ತಾರಾ ಶಟ್ಲರ್‌ಗಳಾದ 20ರ ಲಕ್ಷ್ಯ ಸೆನ್‌ (Lakshya Sen) ಹಾಗೂ ಕಿದಂಬಿ ಶ್ರೀಕಾಂತ್‌ (Kidambi Srikanth) ಅವರ ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅಭಿಯಾನ ಮೊದಲ ಸುತ್ತಲ್ಲೇ ಕೊನೆಗೊಂಡಿದೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಸೆನ್‌, ಭಾರತದವರೇ ಆದ ಎಚ್‌.ಎಸ್‌.ಪ್ರಣಯ್‌ ವಿರುದ್ಧ ನೇರ ಗೇಮ್‌ಗಳಿಂದ ಪರಾಭವಗೊಂಡರು. ವಿಶ್ವ ನಂ.11 ಶ್ರೀಕಾಂತ್‌, ಫ್ರಾನ್ಸ್‌ನ ಬ್ರೈಸ್‌ ಲೆವೆರ್ಡೆಜ್‌ ವಿರುದ್ಧ ಸೋತು ಹೊರಬಿದ್ದರು. ಈ ಮೂವರೂ ಥಾಮಸ್‌ ಕಪ್‌ ಗೆದ್ದ ಭಾರತ ತಂಡದಲ್ಲಿದ್ದರು. ಇನ್ನು, ಪುರುಷರ ಡಬಲ್ಸ್‌ನಲ್ಲಿ ಅರ್ಜುನ್‌-ಧ್ರುವ ಕಪಿಲಾ ಜೋಡಿ 2ನೇ ಸುತ್ತು ಪ್ರವೇಶಿಸಿತು.

ಮುಂಬೈನಲ್ಲಿ ಫಿಫಾ ಅ-17 ಮಹಿಳಾ ವಿಶ್ವಕಪ್‌ ಫೈನಲ್‌

ನವದೆಹಲಿ: ಮುಂಬರುವ 7ನೇ ಅವೃತ್ತಿಯ ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣ ಮುಂಬರುವ ಆತಿಥ್ಯ ವಹಿಸಲಿದೆ ಎಂದು ಫಿಫಾ ಹಾಗೂ ಟೂರ್ನಿಯ ಸ್ಥಳೀಯ ಆಯೋಜಕರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಬುಧವಾರ ಪ್ರಕಟಣೆ ಹೊರಡಿಸಲಾಗಿದ್ದು, ‘16 ತಂಡಗಳ ನಡುವಿನ ಟೂರ್ನಿಯ ಗುಂಪು ಹಂತದ 24 ಪಂದ್ಯಗಳು ಅಕ್ಟೋಬರ್‌ 18ರಿಂದ ಒಡಿಶಾ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಆರಂಭವಾಗಲಿವೆ. ಈ ಪೈಕಿ ಆತಿಥೇಯ ಭಾರತದ ಗುಂಪು ಹಂತದ ಎಲ್ಲಾ 3 ಪಂದ್ಯಗಳು ಒಡಿಶಾದ ಭುವನೇಶ್ವರದಲ್ಲಿ ನಿಗದಿಯಾಗಿವೆ. 

ಸತತ 2 ಬಾರಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದ ಭಾರತ !

ಪಂದ್ಯಗಳು ಆಗಸ್ಟ್‌ 11, 14 ಮತ್ತು 17ಕ್ಕೆ ನಡೆಯಲಿವೆ. ಅಕ್ಟೋಬರ್ 21, 22ಕ್ಕೆ ನಡೆಯಲಿರುವ ಕ್ವಾರ್ಟರ್‌ ಫೈನಲ್‌ ಪಂದ್ಯಗಳಿಗೆ ಡಿ.ವೈ.ಪಾಟೀಲ್‌ ಕ್ರೀಡಾಂಗಣ ಹಾಗೂ ಫಟೋರ್ಡಾದ ನೆಹರೂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಅಕ್ಟೋಬರ್ 26ಕ್ಕೆ ಸೆಮಿಫೈನಲ್‌ ಪಂದ್ಯ ನಡೆಯಲಿದೆ’ ಎಂದು ಮಾಹಿತಿ ನೀಡಿದೆ. ಟೂರ್ನಿಯ ಡ್ರಾ ಜೂನ್‌ 24ಕ್ಕೆ ನಡೆಯಲಿದೆ.

ಯು.ಎಸ್‌.ಓಪನ್‌ ಆಡಲು ರಷ್ಯಾ ಟೆನಿಸಿಗರಿಗೆ ಅವಕಾಶ

ನ್ಯೂಯಾರ್ಕ್: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಮಧ್ಯೆಯೂ ರಷ್ಯಾ ಹಾಗೂ ಬೆಲಾರಸ್‌ನ ಟೆನಿಸಿಗರಿಗೆ ಯು.ಎಸ್‌.ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ ಪಾಲ್ಗೊಳ್ಳು ಅವಕಾಶ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಯೋಜಕರು, ಸರ್ಕಾರದ ಕಾರ‍್ಯ, ನಿರ್ಧಾರಗಳು ಅಥ್ಲೀಟ್‌ಗಳಿಗೆ ವೈಯಕ್ತಿಕವಾಗಿ ನಷ್ಟಉಂಟುಮಾಡಬಾರದು. ಹೀಗಾಗಿ ಅವರಿಗೆ ಯು.ಎಸ್‌.ಓಪನ್‌ನಲ್ಲಿ ಪಾಲ್ಗೊಳ್ಳಬಹುದು. ಅವರು ತಮ್ಮ ದೇಶದ ಧ್ವಜ ಬಳಸದೆ ತಟಸ್ಥ ಧ್ವಜದಲ್ಲಿ ಆಡಲು ಅವಕಾಶ ನೀಡಲಾಗಿದೆ’ ಎಂದಿದೆ. 

ಯು.ಎಸ್‌.ಓಪನ್‌ ಟೂರ್ನಿ ಆಗಸ್ಟ್‌ 29 ರಿಂದ ಆರಂಭವಾಗಲಿದೆ. ರಷ್ಯಾ ಯುದ್ಧ ಆರಂಭವಾದ ಬಳಿಕ ಜಾಗತಿಕ ಮಟ್ಟದಲ್ಲಿ ರಷ್ಯಾ, ಬೆಲಾರಸ್‌ನ ಕ್ರೀಡಾಪಟುಗಳಿಗೆ ವಿವಿಧ ಕ್ರೀಡೆಗಳಿಂದ ನಿಷೇಧ ಹೇರಲಾಗಿದೆ. ವಿಂಬಲ್ಡನ್‌ನಿಂದಲೂ ಅವರನ್ನು ಬಹಿಷ್ಕರಿಸಲಾಗಿದೆ.

click me!