
ನವದೆಹಲಿ (ಆ. 07): ‘ಕ್ರಿಕೆಟ್ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ನಿದ್ದೆಯಲ್ಲಿ ನಡೆಯುತ್ತಿದ್ದರಂತೆ. ಅವರ ಮಾಜಿ ಸಹ ಆಟಗಾರ ಹಾಗೂ ಆಪ್ತ ಸ್ನೇಹಿತ ಸೌರವ್ ಗಂಗೂಲಿ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಸಚಿನ್ ಜತೆಗಿನ ರೋಚಕ ಸನ್ನಿವೇಶಗಳು, ಅವರ ಗುಣ, ಆಟದತ್ತ ಅವರಿಗಿದ್ದ ಬದ್ಧತೆ ಬಗ್ಗೆಯೂ ಗಂಗೂಲಿ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಸಚಿನ್ ಜತೆ ಕಳೆದ ಅಮೂಲ್ಯ ಕ್ಷಣಗಳನ್ನು ನೆನಪು ಮಾಡಿಕೊಂಡಿರುವ ಗಂಗೂಲಿ, ‘ನಮ್ಮಿಬ್ಬರ ವೃತ್ತಿಬದುಕಿನ ಆರಂಭದ ದಿನಗಳವು. ಇಂಗ್ಲೆಂಡ್‌ನಲ್ಲಿ ನಾವು ರೂಂಮೇಟ್ಸ್ ಆಗಿದ್ದೆವು.
ಒಂದು ದಿನ ರಾತ್ರಿ ಸಚಿನ್ ಕೊಠಡಿಯಲ್ಲಿ ಓಡಾಡುವುದನ್ನು ನೋಡಿದೆ. ಬಹುಶಃ ಶೌಚಾಲಯಕ್ಕೆ ಹೋಗಲು ಎದ್ದಿದ್ದಾರೆ ಎಂದುಕೊಂಡು ಮಲಗಿದೆ. ಮರು ದಿನ ರಾತ್ರಿಯೂ ಸಚಿನ್ ರೂಂನಲ್ಲಿ ಓಡಾಡಲು ಆರಂಭಿಸಿದರು. ಕುರ್ಚಿಯ ಮೇಲೆ ಸ್ವಲ್ಪ ಹೊತ್ತು ಕೂತು ಬಳಿಕ ಬಂದು ಮಲಗುತ್ತಿದ್ದರು. ಮಧ್ಯರಾತ್ರಿ 1.30 ರಲ್ಲಿ ಓಡಾಡಲು ಏನಾಗಿದೆ ಎಂದುಕೊಂಡೆ’ ಎಂದು ಎಂದಿದ್ದಾರೆ.
‘ಮುಂದಿನ ದಿನ ಸಚಿನ್‌ಗೆ ಹೇಳಿದೆ, ನನಗೆ ಭಯವಾಗುತ್ತಿದೆ. ನೀನು ರಾತ್ರಿ ಏನು ಮಾಡುತ್ತಿದ್ದೆ ಎಂದು ಕೇಳಿದಾಗ ಅವರು ನನಗೆ ರಾತ್ರಿ ಓಡಾಡುವ ಅಭ್ಯಾಸವಿದೆ ಎಂದಿದ್ದರು’ ಎಂದು ಗಂಗೂಲಿ ಹೇಳಿದ್ದಾರೆ.
ಸಚಿನ್ ಸದಾ ಕ್ರಿಕೆಟ್ ಬಗ್ಗೆಯೇ ಯೋಚನೆ ಮಾಡುತ್ತಿದ್ದರು ಎಂದು ಗಂಗೂಲಿ ಹೇಳಿದ್ದಾರೆ.
‘ಸಚಿನ್ ಕ್ರಿಕೆಟ್ ಆಟದಲ್ಲಿ ಲಯ ಕಳೆದುಕೊಂಡಾಗ, ಮಧ್ಯರಾತ್ರಿ 2 ಗಂಟೆಗೆ ಎದ್ದು ಅಭ್ಯಾಸ ನಡೆಸಲು ಆರಂಭಿಸುತ್ತಿದ್ದರು. ನಾನು ತಂಡದಿಂದ ಹೊರಬಿದ್ದಾಗ ನನ್ನ ಬ್ಯಾಟ್‌ಗಳನ್ನು ಬಳಸಿ ಆಡುತ್ತಿದ್ದರು’ ಎಂದಿದ್ದಾರೆ ಗಂಗೂಲಿ. ‘1992 ರಲ್ಲಿ ನಾನು ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದೆ. ವಿಶ್ವಕಪ್‌ಗೂ ಆಯ್ಕೆಯಾಗಲಿಲ್ಲ. ಎಲ್ಲಾ ಆಟಗಾರರು ನನ್ನನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರು. ಸಚಿನ್ ಮಾತ್ರ ನನ್ನ ಬಳಿ ಬಂದು ನಿನ್ನ ಬ್ಯಾಟ್ ಕೊಡುತ್ತೀಯಾ? ಎಂದು ಕೇಳಿದ್ದರು. ಅವರ ಕ್ರಿಕೆಟ್ ಬದ್ಧತೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ’ ಎಂದು ಗಂಗೂಲಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.