
ಕೊಚ್ಚಿ(ಮಾ.22): ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಸೇರಿ ಅನೇಕ ಗಣ್ಯರಿಂದ ಒತ್ತಡ ಬಿದ್ದ ನಂತರ ಕೊಚ್ಚಿಯಲ್ಲಿ ನಡೆಯಬೇಕಿದ್ದ ಭಾರತ-ವೆಸ್ಟ್'ಇಂಡೀಸ್ ಏಕದಿನ ಪಂದ್ಯವನ್ನು ಸ್ಥಳಾಂತರಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗೆಂದು ಕೇರಳ ಕ್ರಿಕೆಟ್ ಸಂಸ್ಥೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಪಂದ್ಯವನ್ನು ಕೊಚ್ಚಿ ಬದಲು ತಿರುವನಂತಪುರಂನಲ್ಲಿ ನಡೆಸಲು ತೀರ್ಮಾನಿಸಿದ್ದು, ಶೀಘ್ರ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ.
ಕೊಚ್ಚಿಯ ಜವಹಾರ್'ಲಾಲ್ ನೆಹರೂ ಕ್ರೀಡಾಂಗಣಕ್ಕೆ ಅಂಡರ್-17 ವಿಶ್ವಕಪ್ ಆಯೋಜನೆಗೆ ಫಿಫಾ ಮಾನ್ಯತೆ ನೀಡಿತ್ತು. ದೇಶದ 6 ಅತ್ಯುತ್ತಮ ಫುಟ್ಬಾಲ್ ಕ್ರೀಡಾಂಗಣಗಳಲ್ಲಿ ಇದೂ ಸಹ ಒಂದೆನಿಸಿಕೊಂಡಿದೆ. ಆದರೆ ಗ್ರೇಟರ್ ಕೊಚ್ಚಿ ಅಭಿವೃದ್ಧಿ ಪ್ರಾಧಿಕಾರದ ಜತೆಗಿನ ಒಪ್ಪಂದದ ಅನುಸಾರ, ಕ್ರಿಕೆಟ್ ಪಂದ್ಯವನ್ನು ಇದೇ ಕ್ರೀಡಾಂಗಣದಲ್ಲಿ ಆಯೋಜಿಸಲು ಕೇರಳ ಕ್ರಿಕೆಟ್ ಸಂಸ್ಥೆ ಮುಂದಾಗಿತ್ತು. ಆದರೆ, ಫುಟ್ಬಾಲ್ ಕ್ರೀಡಾಂಗಣವನ್ನು, ಕ್ರಿಕೆಟ್‌ಗಾಗಿ ಹಾಳು ಮಾಡದಂತೆ ತಿರುವನಂತಪುರಂ ಸಂಸದ ಶಶಿ ತರೂರ್ ಸೇರಿದಂತೆ ಅನೇಕರು ಬಿಸಿಸಿಐಗೆ ಮನವಿ ಸಲ್ಲಿಸಿದ್ದರು.
‘ಅಂ.ರಾಷ್ಟೀಯ ಗುಣಮಟ್ಟದ ಫುಟ್ಬಾಲ್ ಕ್ರೀಡಾಂಗಣವನ್ನು ಅಗೆದು ಕ್ರಿಕೆಟ್ ಪಿಚ್ ನಿರ್ಮಿಸಲು ನಿರ್ಧರಿಸಲಾಗಿದೆ. ತಿರುವನಂತಪುರಂನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವೇ ಇರುವಾಗ ಫುಟ್ಬಾಲ್ ಅಂಗಳವನ್ನೇಕೆ ಹಾಳು ಮಾಡಬೇಕು. ಇದರಿಂದ ಯಾರಿಗೆ ಲಾಭ, ಕೆಸಿಎಯ ಈ ನಡೆ ಶಂಕಾಸ್ಪದ’ ಎಂದು ತರೂರ್ ಟ್ವೀಟ್ ಮಾಡಿದ್ದರು. ಕೊಚ್ಚಿ ಮೂಲದ ಐಎಸ್‌ಎಲ್ ತಂಡ ಕೇರಳ ಬ್ಲಾಸ್ಟರ್ಸ್'ನ ಸಹ ಮಾಲೀಕ ಸಹ ಆಗಿರುವ ಸಚಿನ್, ಮಂಗಳವಾರ ಸರಣಿ ಟ್ವೀಟ್'ಗಳನ್ನು ಮಾಡಿದ್ದರು. ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಕ್ರಿಕೆಟ್ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಬಳಿ ತಾವು ಮಾತನಾಡಿದ್ದು, ಪಂದ್ಯವನ್ನು ಕೊಚ್ಚಿಯಿಂದ ಸ್ಥಳಾಂತರಗೊಳಿಸುವಂತೆ ಆಗ್ರಹಿಸಿದ್ದಾಗಿ ಸಚಿನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದರು.
ತಿರುವನಂತಪುರಂನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುವ ಮುನ್ನ, ಕೊಚ್ಚಿಯಲ್ಲಿನ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲಾಗುತ್ತಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.