ಗೆಲುವಿನೊಂದಿಗೆ ಐಪಿಎಲ್'ಗೆ ವಿದಾಯ ಹೇಳಿದ ಆರ್'ಸಿಬಿ

By Suvarna Web DeskFirst Published May 14, 2017, 6:41 PM IST
Highlights

ಆರ್'ಸಿಬಿ ಪರ ಪವನ್ ನೇಗಿ 10/3 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ದುಬಾರಿ ಎನಿಸಿದರೂ(43/3) ಪ್ರಮುಖ ವಿಕೆಟ್ ಪಡೆಯುವಲ್ಲಿ ಸಫಲರಾದರು.  

ನವದೆಹಲಿ(ಮೇ.14): ವಿರಾಟ್ ಕೊಹ್ಲಿ(58) ಸಮಯೋಚಿತ ಬ್ಯಾಟಿಂಗ್, ಪವನ್ ನೇಗಿ ಹಾಗೂ ಹರ್ಷಲ್ ಪಟೇಲ್ ಚುರುಕಿನ ಬೌಲಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 10 ರನ್'ಗಳ ರೋಚಕ ಜಯ ದಾಖಲಿಸಿದೆ.

ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್'ಸಿಬಿ ನಿಗದಿತ 20 ಓವರ್'ಗಳಲ್ಲಿ 6 ವಿಕೆಟ್ ಕಳೆದುಕೊಂಡು 161ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಸವಾಲಿನ ಮೊತ್ತ ಬೆನ್ನತ್ತಿದ ಜಹೀರ್ ಖಾನ್ ನೇತೃತ್ವದ ಡೆಲ್ಲಿ ಡೇರ್'ಡೆವಿಲ್ಸ್ ತಂಡ ಕೇವಲ 151ರನ್'ಗಳಿಗೆ ಸರ್ವಪತನ ಕಂಡಿತು.

ಉಭಯ ತಂಡಗಳಿಗೂ ಅಷ್ಟೇನೂ ಮಹತ್ವವಲ್ಲದ ಈ ಪಂದ್ಯದಲ್ಲಿ ಆರ್'ಸಿಬಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದ ಕ್ರಿಸ್ ಗೇಲ್ ತಂಡಕ್ಕೆ ನೆರವಾದರು. ಸ್ಪೋಟಕ ಆಟವಾಡಿದ ಗೇಲ್ ತಲಾ ಮೂರು ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 48ರನ್ ಬಾರಿಸಿದರು. ಇನ್ನು ನಾಯಕನ ಆಟವಾಡಿದ ವಿರಾಟ್ ಕೊಹ್ಲಿ 58ರನ್ ಸಿಡಿಸಿದರು. ಕೊಹ್ಲಿ ಇನಿಂಗ್ಸ್'ನಲ್ಲೂ ಮೂರು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ ಸೇರಿದ್ದು ವಿಶೇಷ. ಆದರೆ ಮಧ್ಯಮ ಕ್ರಮಾಂಕದಲ್ಲಿ ಆರ್'ಸಿಬಿ ಬ್ಯಾಟ್ಸ್'ಮನ್'ಗಳು ಕೈಕೊಟ್ಟಿದ್ದರಿಂದ ತಂಡ 161ರನ್ ಬಾರಿಸಲಷ್ಟೇ ಶಕ್ತವಾಯಿತು.

ತವರಿನಲ್ಲಿ ಗೆಲ್ಲುವ ಉಮೇದಿನೊಂದಿಗೆ ಸವಾಲಿನ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಮೊದಲ ಓವರ್'ನಲ್ಲೇ ಆಘಾತ ಅನುಭವಿಸಿತು. ಸಂಜು ಸ್ಯಾಮ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಡೆಲ್ಲಿ ಯುವ ಪ್ರತಿಭೆ ರಿಶಭ್ ಪಂತ್ 45 ಬಾರಿಸಿ ತಂಡಕ್ಕೆ ಗೆಲುವಿನ ಆಸೆ ತೋರಿಸಿದರು. ಆದರೆ ವಿದೇಶಿ ಆಟಗಾರರಾದ ಮರ್ಲಾನ್ ಸ್ಯಾಮ್ಯುಯಲ್ಸ್, ಕೋರಿ ಆ್ಯಂಡರ್'ಸನ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಡೆಲ್ಲಿ ಸೋಲೊಪ್ಪಿಕೊಳ್ಳಬೇಕಾಗಿ ಬಂತು.

ಆರ್'ಸಿಬಿ ಪರ ಪವನ್ ನೇಗಿ 10/3 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ದುಬಾರಿ ಎನಿಸಿದರೂ(43/3) ಪ್ರಮುಖ ವಿಕೆಟ್ ಪಡೆಯುವಲ್ಲಿ ಸಫಲರಾದರು.  

click me!