
ನವದೆಹಲಿ(ಮಾ.21): ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ತಮಿಳುನಾಡು ವಿರುದ್ಧ ನಡೆಯಲಿರುವ ದೇವಧಾರ್ ಟ್ರೋಫಿಗೆ ಬಿಸಿಸಿಐ ತಂಡಗಳನ್ನು ಪ್ರಕಟ ಮಾಡಿದ್ದು, ಭಾರತ ‘ಬ್ಲೂ’ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಭಾರತ ‘ರೆಡ್’ ತಂಡಕ್ಕೆ ಪಾರ್ಥೀವ್ ಪಟೇಲ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಮಾರ್ಚ್ 25ರಿಂದ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಟೂರ್ನಿಯು, ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆಯಲಿರುವ ಕೊನೆಯ ಏಕದಿನ ಸರಣಿಯಾಗಿದ್ದು, ಬಿಸಿಸಿಐ ಆಟಗಾರರ ಲಯ ಹಾಗೂ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲಿದೆ. ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಖಾಲಿ ಇರುವ ಒಂದೆರೆಡು ಜಾಗಗಳಿಗೆ ಭಾರೀ ಪೈಪೋಟಿ ಇದ್ದು, ಶಿಖರ್ ಧವನ್, ಅಂಬಟಿ ರಾಯುಡು, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ ಸೇರಿದಂತೆ ಹಲವರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಸುರೇಶ್ ರೈನಾಗೆ ಕೊಕ್ !
ಸಯ್ಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಭರ್ಜನ್ ಸಿಂಗ್'ಗೆ ಟೂರ್ನಿಯಲ್ಲಿ ಆಡುವ ಅವಕಾಶ ನೀಡಿದ್ದು, ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಅವರಿಗಿದು ಅತ್ಯುತ್ತಮ ವೇದಿಕೆಯಾಗಲಿದೆ. ಹಿರಿಯ ಆಟಗಾರರಾದ ಎಂ.ಎಸ್.ಧೋನಿ ಹಾಗೂ ಯುವರಾಜ್ ಸಿಂಗ್'ಗೆ ವಿಶ್ರಾಂತಿ ನೀಡಲಾಗಿದೆ. ಭಾರತ ಸೀಮಿತ ಓವರ್ ತಂಡದ ಅನುಭವಿ ಆಟಗಾರ ಸುರೇಶ್ ರೈನಾಗೆ ಎರಡೂ ತಂಡಗಳಲ್ಲಿ ಸ್ಥಾನ ನೀಡದೇ ಇರುವುದು, ಅವರ ಏಕದಿನ ವೃತ್ತಿಬದುಕಿನ ಭವಿಷ್ಯದ ಕುರಿತು ಅನುಮಾನಗಳು ಶುರುವಾಗಿವೆ.
ರಾಜ್ಯದ ಮೂವರಿಗೆ ಸ್ಥಾನ: ಸೀಮಿತ ಓವರ್ ಮಾದರಿಯಲ್ಲಿ ಗಮನ ಸೆಳೆದ ಕರ್ನಾಟಕದ ಯುವ ವೇಗಿ ಪ್ರಸಿದ್ಧ ಕೃಷ್ಣ ಭಾರತ ‘ಬ್ಲೂ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಭಾರತ ‘ರೆಡ್’ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ರಾಬಿನ್ ಉತ್ತಪ್ಪ ಸೇರಿದಂತೆ ರಾಜ್ಯದ ಹಲವು ಅನುಭವಿ ಆಟಗಾರರು ಆಯ್ಕೆಗಾರರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ.
ಭಾರತ ‘ಬ್ಲೂ’:
ರೋಹಿತ್ ಶರ್ಮಾ (ನಾಯಕ), ಮನ್'ದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಅಂಬಟಿ ರಾಯುಡು, ಮನೋಜ್ ತಿವಾರಿ, ರಿಶಬ್ ಪಂತ್(ಕೀಪರ್), ದೀಪಕ್ ಹೂಡಾ, ಹರ್ಭಜನ್ ಸಿಂಗ್, ಕ್ರುನಾಲ್ ಪಾಂಡ್ಯ, ಶಾಬಾಜ್ ನದೀಮ್, ಸಿದ್ಧಾರ್ಥ್ ಕೌಲ್, ಶಾರ್ದುಲ್ ಠಾಕೂರ್,ಪ್ರಸಿದ್ಧ್ ಕೃಷ್ಣ, ಪಂಕಜ್ ರಾವ್.
ಭಾರತ ‘ರೆಡ್’:
ಪಾರ್ಥೀವ್ ಪಟೇಲ್ (ನಾಯಕ), ಶಿಖರ್ ಧವನ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಕೇದಾರ್ ಜಾಧವ್, ಇಶಾಂಕ್ ಜಗ್ಗಿ, ಗುರ್‌ಕೀರತ್ ಸಿಂಗ್, ಅಕ್ಷರ್ ಪಟೇಲ್, ಅಕ್ಷಯ್ ಕರ್ನೆವಾರ್,ಆಶೋಕ್ ದಿಂಡಾ, ಕುಲ್ವಂತ್ ಖೆಜ್ರೊಲಿಯಾ, ಧವಲ್ ಕುಲ್ಕರ್ಣಿ, ಗೋವಿಂದ ಪೊದ್ದಾರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.