19 ಬಾರಿಯ ಇಪಿಎಲ್‌ ಚಾಂಪಿಯನ್‌ ಲಿವರ್‌ಪೂಲ್‌ ಖರೀದಿ ರೇಸ್‌ನಲ್ಲಿ ಮುಖೇಶ್‌ ಅಂಬಾನಿ!

By Santosh Naik  |  First Published Nov 13, 2022, 4:55 PM IST

ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್‌ ಮುಖೇಶ್‌ ಅಂಬಾನಿ, ಕೇವಲ ವಾಣಿಜ್ಯ ಕ್ಷೇತ್ರದಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತಾರ ಮಾಡುತ್ತಿಲ್ಲ. ಕ್ರೀಡಾ ಕ್ಷೇತ್ರ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ತಮ್ಮ ವ್ಯಾಪ್ತಿ ವಿಸ್ತಾರ ಮಾಡುತ್ತಿದ್ದಾರೆ. ರಿಟೇಲ್‌ ಹಾಗೂ ಹೆಲ್ತ್‌ ಸೆಕ್ಟರ್‌ನಲ್ಲಿ ದೊಡ್ಡ ದೊಡ್ಡ ಡೀಲ್‌ಗಳನ್ನು ಮಾಡುತ್ತಿರುವ ಮುಖೇಶ್‌ ಅಂಬಾನಿ ಈಗ ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಲಿವರ್‌ಪೂಲ್‌ ಕ್ಲಬ್‌ನ ಖರೀದಿಗೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಬಂದಿದೆ.


ನವದೆಹಲಿ (ನ.13): ಏಷ್ಯಾದ 2ನೇ ಶ್ರೀಮಂತ ವ್ಯಕ್ತಿ ಹಾಗೂ ವಿಶ್ವದ 8ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಖೇಶ್‌ ಅಂಬಾನಿ ಇನ್ನೊಂದು ದೊಡ್ಡ ಡೀಲ್‌ನ ಹಾದಿಯಲ್ಲಿದ್ದಾರೆ. ಎಲ್ಲಾ ಅಂದುಕೊಂಡಂತೆಯೇ ಆದಲ್ಲಿ, ಶೀಘ್ರದಲ್ಲಿಯೇ ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ನ ಅತ್ಯಂತ ಯಶಸ್ವಿ ಕ್ಲಬ್‌, ದಿ ರೆಡ್ಸ್‌ ಖ್ಯಾತಿಯ ಲಿವರ್‌ಪೂಲ್‌ಗೆ ಮುಖೇಶ್‌ ಅಂಬಾನಿ ಮಾಲೀಕರಾಗಿದ್ದಾರೆ. ರಿಯಲನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಖೇಶ್‌ ಅಂಬಾನಿ, ಪ್ರಸ್ತುತ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್‌ನ ಮಾಲೀಕರಾಗಿದ್ದಾರೆ. ಸೀಗ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರಭುತ್ವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಲಿವರ್‌ಪೂಲ್‌ ಕ್ಲಬ್‌ ಅಥವಾ ಎಲ್‌ಎಫ್‌ಸಿ ಖರೀದಿಯ ರೇಸ್‌ನಲ್ಲಿ ಮುಖೇಶ್‌ ಅಂಬಾನಿ ಕೂಡ ಇದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ನ ಪತ್ರಿಕೆ ಮಿರರ್‌ ಈ ಕುರಿತಾಗಿ ವರದಿ ಮಾಡಿದೆ.

ವಿಶ್ವದ ಅತ್ಯಂತ ಪ್ರಖ್ಯಾತ ಫುಟ್‌ಬಾಲ್‌ ಕ್ಲಬ್‌ಗಳಲ್ಲಿ ಒಂದಾದ ಲಿವರ್‌ಪೂಲ್‌ನ ಖರೀದಿ ಪ್ರಕ್ರಿಯೆಯ ಡೀಲ್‌ ಶೀಘ್ರದಲ್ಲಿಯೇ ಅಂತ್ಯಗೊಳ್ಳಲಿದೆ ಎಂದು ಮಿರರ್‌ ವರದಿ ಮಾಡಿದೆ. ಹಾಗೇನಾದರೂ ಆದಲ್ಲಿ, ಇಡೀ ಕ್ಲಬ್‌ನ ಮಾಲೀಕತ್ವ ಹೊಸ ವ್ಯಕ್ತಿಯ ಕೈಸೇರಲಿದೆ ಎನ್ನಲಾಗಿದೆ. ವರದಿಗಳನ್ನು ನಂಬುವುದಾದರೆ, ಮುಖೇಶ್ ಅಂಬಾನಿ ಲಿವರ್‌ಪೂಲ್ ಕ್ಲಬ್ ಬಗ್ಗೆ ಹಾಗೂ ಅದರ ಖರೀದಿಯ ನಿಯಮಗಳ ಬಗ್ಗೆ ತನಿಖೆ ಮಾಡಿದ್ದಾರೆ. ಅದಲ್ಲದೆ, ಕ್ಲಬ್‌ಅನ್ನು ಖರೀದಿಸಲು  ಉತ್ಸುಕರಾಗಿ ಈ ಬಗ್ಗೆ ತಯಾರಿ ನಡೆಸುತ್ತಿದ್ದಾರೆ ಎಂಬ ವರದಿಗಳಿವೆ. ಗಮನಾರ್ಹವೆಂದರೆ, ಸುಮಾರು ಒಂದು ದಶಕದ ಹಿಂದೆ, ಅವರು ಪಾಲುದಾರಿಕೆಯಲ್ಲಿ ಇದೇ ಕ್ಲಬ್‌ಅನ್ನು ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ವರದಿಯ ಪ್ರಕಾರ ಪ್ರಸ್ತುತ ಲಿವರ್‌ಪೂಲ್‌ ಕ್ಲಬ್‌ನ ಮಾಲೀಕರಾಗಿರುವ ಸಂಸ್ಥೆ ಫೆನ್‌ವೇ ಸ್ಪೋಟ್ಸ್‌ ಗ್ರೂಪ್‌ (ಎಫ್‌ಎಸ್‌ಜಿ), ಈ ಸಂಸ್ಥೆ ಕ್ಲಬ್‌ಅನ್ನು ಅಂದಾಜು 4 ಬಿಲಿಯನ್‌ ಪೌಂಡ್‌ಗೆ (381 ಬಿಲಿಯನ್‌ ರೂಪಾಯಿ ಅಂದರೆ, 38,118 ಕೋಟಿ ರೂ.) ಮಾರಾಟ ಮಾಡಲು ನಿರ್ಧಾರ ಮಾಡಿದೆ. ಈ ಮೊತ್ತದಲ್ಲಿ ಹೆಚ್ಚೂ ಕಡಿಮೆ ಬೇಕಾದರೂ ಆಗಬಹುದು. ಆದರೆ, ಕ್ಲಬ್‌ಅನ್ನು ಖರೀದಿ ಮಾಡಿಯೇ ಸಿದ್ದ ಎನ್ನುವ ಹಠದಲ್ಲಿ ಅಂಬಾನಿ ಇದ್ದಾರೆ ಎನ್ನಲಾಗಿದೆ. ಲಿವರ್‌ಪೂಲ್‌ ಕ್ಲಬ್‌ ಖರೀದಿ ಮಾಡಲುವ ನಿಟ್ಟಿನಲ್ಲಿ ಯುಎಇ ಹಾಗೂ ಅಮೆರಿಕದ ಇಬ್ಬರು ಉದ್ಯಮಿಗಳು ಕೂಡ ರೇಸ್‌ನಲ್ಲಿದ್ದಾರೆ. ಅವರ ಹೆಸರು ಬಹಿರಂಗವಾಗಿಲ್ಲ. ಮುಕೇಶ್ ಅಂಬಾನಿ ಈ ಒಪ್ಪಂದವನ್ನು ಪೂರ್ಣಗೊಳಿಸಿದರೆ ದೊಡ್ಡ ಸಾಧನೆಯಾಗಲಿದ್ದು, ಇಂಗ್ಲೆಂಡ್‌ ಮತ್ತೊಮ್ಮೆ ಭಾರತೀಯನ ಸಾಧನೆಗೆ ಅಚ್ಚರಿ ಪಡಲಿದೆ.

ರೇಂಜ್‌ ರೋವರ್‌ನಿಂದ ಜಾಗ್ವಾರ್‌: ಭಾರತೀಯ ಉದ್ಯಮಿಗಳ ಒಡೆತನದ ಪ್ರಸಿದ್ಧ ವಿದೇಶಿ ಬ್ರ್ಯಾಂಡ್‌ಗಳು!

"ಲಿವರ್‌ಪೂಲ್‌ನಲ್ಲಿ ಷೇರುದಾರರಾಗಲು ಬಯಸುವ ಮೂರನೇ ವ್ಯಕ್ತಿಗಳಿಂದ ಎಫ್‌ಎಸ್‌ಜಿ ಆಗಾಗ್ಗೆ ಆಸಕ್ತಿಯ ಅಭಿವ್ಯಕ್ತಿಗಳನ್ನು ಸ್ವೀಕರಿಸಿದೆ. ಸರಿಯಾದ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ, ಕ್ಲಬ್‌ನಂತೆ ಲಿವರ್‌ಪೂಲ್‌ನ ಉತ್ತಮ ಹಿತಾಸಕ್ತಿಗಳಾಗಿದ್ದರೆ ನಾವು ಹೊಸ ಷೇರುದಾರರನ್ನು ಪರಿಗಣಿಸುತ್ತೇವೆ ಎಂದು ಎಫ್‌ಎಸ್‌ಜಿ ಹೇಳಿದೆ." ಎಫ್‌ಎಸ್‌ಜಿ ಅಡಿಯಲ್ಲಿ ಲಿವರ್‌ಪೂಲ್‌ ಅಪಾರ ಯಶಸ್ಸನ್ನು ಅನುಭವಿಸಿದೆ, ಜುರ್ಗೆನ್ ಕ್ಲೋಪ್ ತರಬೇತಿಯ ತಂಡವು ಕಳೆದ ಕೆಲವು ವರ್ಷಗಳಿಂದ ಪ್ರೀಮಿಯರ್ ಲೀಗ್ ಪ್ರಶಸ್ತಿ, ಚಾಂಪಿಯನ್ಸ್ ಲೀಗ್, ಎಫ್‌ಎ ಕಪ್, ಕ್ಯಾರಬಾವೊ ಕಪ್ ಮತ್ತು ಯುರೋಪಿಯನ್ ಸೂಪರ್ ಕಪ್ ಅನ್ನು ಗೆದ್ದಿದೆ.

Tap to resize

Latest Videos

ಮುಖೇಶ್‌ ಅಂಬಾನಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ, ರಿಲಯನ್ಸ್‌ ಆಸ್ಪತ್ರೆ ಸ್ಪೋಟಿಸುವ ಎಚ್ಚರಿಕೆ

ಮುಖೇಶ್‌ ಅಂಬಾನಿ ಕ್ರೀಡಾ ಪ್ರೇಮಿ: ರಿಲಯನ್ಸ್‌ ಚೇರ್ಮನ್‌ ಮುಖೇಶ್‌ ಅಂಬಾನಿ ಕ್ರೀಡಾ ಪ್ರೇಮಿ. ಈಗಾಗಲೇ ಹಲವು ಕ್ರೀಡೆಗಳಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ತಮ್ಮ ತಂಡಗಳನ್ನು ಹೊಂದಿದ್ದಾರೆ. ರಿಲಯನ್ಸ್‌ನ ಸಂಪುರ್ಣ ಸಹಯೋಗದಲ್ಲಿ ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿ ಕೂಡ ನಡೆಯುತ್ತಿದೆ. ಅದರೊಂದಿಗೆ ಕ್ರಿಕೆಟ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಹೊಂದಿದೆ. ಐಪಿಎಲ್‌ ನೇರಪ್ರಸಾರದ ಹಕ್ಕುಗಳು, ಬ್ರಾಡ್‌ಕಾಸ್ಟಿಂಗ್‌ ಸಹಯೋಗ ಸೇರಿದಂತೆ ವಿವಿಧ ಉದ್ಯಮಗಳನ್ನು ಹೊಂದಿದೆ.  ಭಾರತದಲ್ಲಿ ಕ್ರೀಡೆಗಳಲ್ಲಿ ಕ್ರಿಕೆಟ್ ಅಗ್ರಸ್ಥಾನದಲ್ಲಿರಬಹುದು, ಆದರೆ ಲಿವರ್‌ಪೂಲ್‌ನಂತಹ ದೊಡ್ಡ ಕ್ಲಬ್‌ನ ಮಾಲೀಕತ್ವವು ಭಾರತೀಯನ ಕೈಗೆ ಬಂದರೆ, ಫುಟ್‌ಬಾಲ್ ಆಟವೂ ಭಾರತದಲ್ಲಿ ಹೆಚ್ಚು ವೇಗವಾಗಿ ಹರಡುತ್ತದೆ.

click me!