ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿ ಗೆದ್ದು ದಾಖಲೆ ಬರೆದ ಆಫ್ಘಾನಿಸ್ತಾನ

First Published Jun 6, 2018, 3:25 PM IST
Highlights

ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ಸರಣಿ ಗೆಲುವಿನ ಕನಸಿನಲ್ಲಿದ್ದ ಬಾಂಗ್ಲಾದೇಶ ತಂಡಕ್ಕೆ ನಿರಾಸೆಯಾಗಿದೆ. ಆರಂಭಿಕ 2 ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವಿನ ನಗೆ ಬೀರಿದೆ. ಈ ಮೂಲಕ ಜೂನ್ 14 ರಿಂದ ಆರಂಭವಾಗಲಿರು ಭಾರತದ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಎಚ್ಚರಿಕೆ ಸಂದೇಶ ರವಾನಿಸಿದೆ.

ಡೆಹ್ರಡೂನ್(ಜೂನ್.6): ಬಾಂಗ್ಲಾದೇಶ ವಿರುದ್ಧದ 2ನೇ ಟಿ-ಟ್ವೆಂಟಿ ಪಂದ್ಯದಲ್ಲಿ ಅಫ್ಘಾನಿಸ್ತಾನ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಅಫ್ಘಾನಿಸ್ತಾನ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡು ದಾಖಲೆ ಬರೆದಿದೆ.

ಭಾರತದ ಡೆಹ್ರಡೂನ್‌ನಲ್ಲಿ ಆಯೋಜಿಸಲಾಗಿರುವ ಟಿ-ಟ್ವೆಂಟಿ ಪಂದ್ಯದಲ್ಲಿ ಅಫ್ಘಾನಿಸ್ತಾನ ಸಂಪೂರ್ಣ ಮೇಲುಗೈ ಸಾಧಿಸಿದೆ. ಮೊದಲ ಪಂದ್ಯದಲ್ಲಿ 54ರನ್‌ಗಳ ಗೆಲುವು ಸಾಧಿಸಿದ್ದ ಅಫ್ಘಾನ್ , 2ನೇ ಪಂದ್ಯದಲ್ಲೂ ಬಾಂಗ್ಲಾ ತಂಡಕ್ಕೆ ಶಾಕ್ ನೀಡಿದೆ.

2ನೇ ಟಿ-ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಪೇರಿಸಿತು. ರಶೀದ್ ಖಾನ್ ದಾಳಿಗೆ ನಲುಗಿದೆ ಬಾಂಗ್ಲಾ ರನ್‌ಗಾಗಿ ಪರದಾಡಿತು.  ತಮೀಮ್ ಇಕ್ಬಾಲ್ 43 ರನ್ ಹೊರತು ಪಡಿಸಿದರೆ, ಇನ್ಯಾವ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ರಶೀದ್ ಖಾನ್ 4 ಓವರ್‌ಗಳಲ್ಲಿ 12 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಪಡೆದು ಬಾಂಗ್ಲಾ ತಂಡವನ್ನ ಕಟ್ಟಿಹಾಕಿದರು. 

135ರನ್‌ಗಳ ಸುಲುಭ ಟಾರ್ಗೆಟ್ ಪಡೆದ ಅಫ್ಘಾನಿಸ್ತಾನ, ದಿಟ್ಟ ಹೋರಾಟ ನೀಡಿತು. ಮೊಹಮ್ಮದ್ ಶೆಹಝಾದ್ 24 ರನ್ ಗಳಿಸಿದರೆ, ಉಸ್ಮಾನ್ ಘಾನಿ 21 ರನ್ ಸಿಡಿಸಿದರು. ಸಮೀಉಲ್ಲಾ ಶೆನ್ವಾರಿ ಸಿಡಿಸಿದ 49 ರನ್‌ ನೆರವಿನಿಂದ ಅಫ್ಘಾನಿಸ್ತಾನ ತಂಡದ ಗೆಲುವಿನ ಹಾದಿ ಸುಗಮವಾಯಿತು. ಇನ್ನು ಮೊಹಮ್ಮದ್ ನಬಿ ಅಜೇಯ 31 ರನ್ ಸಿಡಿಸೋ ಮೂಲಕ ಅಫ್ಘಾನಿಸ್ತಾನ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

ಸರಣಿ ಗೆಲುವಿಗೆ ಕಾರಣರಾದ ಅಫ್ಘಾನಿಸ್ತಾನ ತಂಡದ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. 2-0 ಅಂತರದಲ್ಲಿ ಸರಣಿ ಗೆದ್ದಿರುವ ಅಫ್ಘಾನಿಸ್ತಾನ, ಜೂನ್.7 ರಂದು ಬಾಂಗ್ಲಾ ವಿರುದ್ಧ ಅಂತಿಮ ಪಂದ್ಯ ಆಡಲಿದೆ. 
 

click me!