7 ಪಂದ್ಯಗಳಲ್ಲಿ 3 ಗೆಲುವು, 3 ಡ್ರಾ, 1 ಸೋಲಿನೊಂದಿಗೆ ಒಟ್ಟು 27 ಅಂಕ ಪಡೆದಿರುವ ಕರ್ನಾಟಕ, ‘ಎ’ ಹಾಗೂ ‘ಬಿ’ ಗುಂಪಿನ ಒಟ್ಟಾರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಅಗ್ರಸ್ಥಾನದಲ್ಲಿರುವ ವಿದರ್ಭಕ್ಕಿಂತ ಕೇವಲ 1 ಅಂಕ ಹಿಂದಿರುವ ಕರ್ನಾಟಕಕ್ಕೆ, ಇನ್ನೊಂದು ಪಂದ್ಯ ಬಾಕಿ ಇದ್ದು ಅದರಲ್ಲಿ ಡ್ರಾ ಸಾಧಿಸಿದರೂ ಸುಲಭವಾಗಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿದೆ.
ಬೆಂಗಳೂರು(ಜ.03): ನೂತನ ನಾಯಕ ಮನೀಶ್ ಪಾಂಡೆ ಶತಕ, ರೋನಿತ್ ಮೋರೆ ಹಾಗೂ ಶ್ರೇಯಸ್ ಗೋಪಾಲ್‌ರ ಅಮೋಘ ಬೌಲಿಂಗ್ ಪ್ರದರ್ಶನದ ನೆರವಿನಿಂದ ಛತ್ತೀಸ್‌ಗಢ ವಿರುದ್ಧದ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ 198 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಕರ್ನಾಟಕ, ಕ್ವಾರ್ಟರ್ ಫೈನಲ್ ಹೊಸ್ತಿಲು ತಲುಪಿದೆ.
7 ಪಂದ್ಯಗಳಲ್ಲಿ 3 ಗೆಲುವು, 3 ಡ್ರಾ, 1 ಸೋಲಿನೊಂದಿಗೆ ಒಟ್ಟು 27 ಅಂಕ ಪಡೆದಿರುವ ಕರ್ನಾಟಕ, ‘ಎ’ ಹಾಗೂ ‘ಬಿ’ ಗುಂಪಿನ ಒಟ್ಟಾರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಅಗ್ರಸ್ಥಾನದಲ್ಲಿರುವ ವಿದರ್ಭಕ್ಕಿಂತ ಕೇವಲ 1 ಅಂಕ ಹಿಂದಿರುವ ಕರ್ನಾಟಕಕ್ಕೆ, ಇನ್ನೊಂದು ಪಂದ್ಯ ಬಾಕಿ ಇದ್ದು ಅದರಲ್ಲಿ ಡ್ರಾ ಸಾಧಿಸಿದರೂ ಸುಲಭವಾಗಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿದೆ.
undefined
4 ವಿಕೆಟ್ ನಷ್ಟಕ್ಕೆ 113 ರನ್‌ಗಳಿಂದ ಪಂದ್ಯದ 4ನೇ ದಿನವಾದ ಬುಧವಾರ ತನ್ನ 2ನೇ ಇನ್ನಿಂಗ್ಸ್ ಮುಂದುವರಿಸಿದ ಕರ್ನಾಟಕಕ್ಕೆ ಮನೀಶ್ ಪಾಂಡೆ ಶತಕ ಆಸರೆಯಾಯಿತು. 102 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್‌ನೊಂದಿಗೆ 102 ರನ್ ಚಚ್ಚಿದ ಪಾಂಡೆ ಅಜೇಯರಾಗಿ ಉಳಿದರು. ಶ್ರೇಯಸ್ ಗೋಪಾಲ್ (22), ಕೆ.ಗೌತಮ್ (20) ಹಾಗೂ ಅಭಿಮನ್ಯು ಮಿಥುನ್ (17 ಎಸೆತಗಳಲ್ಲಿ 33 ರನ್) ನಾಯಕನಿಗೆ ಉತ್ತಮ ಬೆಂಬಲ ನೀಡಿದರು. 7 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ, ಕರ್ನಾಟಕ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಗೆಲುವಿಗೆ 355 ರನ್‌ಗಳ ಕಠಿಣ ಗುರಿ ಪಡೆದ ಛತ್ತೀಸ್‌ಗಢ, ಪಂದ್ಯವನ್ನು ಡ್ರಾ ಮಾಡಿಕೊಳ್ಳಲು 65ಕ್ಕೂ ಹೆಚ್ಚು ಓವರ್ ಬ್ಯಾಟ್ ಮಾಡಬೇಕಿತ್ತು. ಆರಂಭಿಕ ಅವ್ನಿಶ್ ಧಲಿವಾಲ್ (61) ಹಾಗೂ 4ನೇ ಕ್ರಮಾಂಕದಲ್ಲಿ ಆಡಿದ ಅಮನ್‌ದೀಪ್ ಖಾರೆ (35) ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಹೋರಾಟ ಕಂಡುಬರಲಿಲ್ಲ. 7 ಆಟಗಾರರು ಎರಡಂಕಿ ಮೊತ್ತ ದಾಖಲಿಸಲು ವಿಫಲರಾದರು. 57 ಓವರ್‌ಗಳಲ್ಲಿ 156 ರನ್‌ಗಳಿಗೆ ಛತ್ತೀಸ್‌ಗಢ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಿತ್ತಿದ್ದ ವೇಗಿ ರೋನಿತ್ 4 ವಿಕೆಟ್ ಕಬಳಿಸಿದರೆ, ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸಹ 4 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 418 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದ ಕರ್ನಾಟಕ, ಎದುರಾಳಿಯನ್ನು 283 ರನ್‌ಗಳಿಗೆ ಕಟ್ಟಿಹಾಕಿ ದೊಡ್ಡ ಮುನ್ನಡೆ ಪಡೆದುಕೊಂಡಿತ್ತು.
ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡಾವನ್ನು ಎದುರಿಸಲಿದೆ. ಜ.7ರಿಂದ ವಡೋದರಾದಲ್ಲಿ ಪಂದ್ಯ ನಡೆಯಲಿದೆ.
ಸ್ಕೋರ್: ಕರ್ನಾಟಕ 418 ಹಾಗೂ 219/7 ಡಿ., ಛತ್ತೀಸ್‌ಗಢ 283 ಹಾಗೂ 156
---
ರಾಜ್ಯದ ಕ್ವಾರ್ಟರ್ ಹಾದಿ ಹೇಗೆ?
‘ಎ’ ಹಾಗೂ ‘ಬಿ’ ಗುಂಪು ಸೇರಿ ಒಟ್ಟು 18 ತಂಡಗಳಿದ್ದು ಕೇವಲ 5 ತಂಡಗಳು ಮಾತ್ರ ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಬರೋಡಾ ವಿರುದ್ಧ ಅಂತಿಮ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಇಲ್ಲವೇ 2ನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್‌ಗೇರಲಿದೆ. ಇನ್ನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಮಾಡಿಕೊಂಡರೆ 2ನೇ ಇಲ್ಲವೇ 3ನೇ ಸ್ಥಾನದೊಂದಿಗೆ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ದೊರೆಯಲಿದೆ.
ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಪಂದ್ಯ ಡ್ರಾ ಮಾಡಿಕೊಂಡು 1 ಅಂಕ ಗಳಿಸಿದರೆ, ಮಧ್ಯಪ್ರದೇಶ-ಆಂಧ್ರ, ಬೆಂಗಾಲ್-ಪಂಜಾಬ್, ಹಿಮಾಚಲ-ಕೇರಳ ಪಂದ್ಯಗಳಲ್ಲಿ ಒಂದು ಡ್ರಾಗೊಂಡರೆ ಇಲ್ಲವೇ ಸೌರಾಷ್ಟ್ರವನ್ನು ವಿದರ್ಭ ಸೋಲಿಸಿದರೆ, ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. ಒಂದೊಮ್ಮೆ ಕರ್ನಾಟಕ ಸೋಲುಂಡರೆ, ಇನ್ನುಳಿದ ಯಾವುದರಾದರೂ ಪಂದ್ಯ ಡ್ರಾಗೊಂಡರೆ ಸಾಕು ಕ್ವಾರ್ಟರ್ ಹಾದಿ ಸುಗಮಗೊಳ್ಳಲಿದೆ.