ರಣಜಿ ಟ್ರೋಫಿ: ರಾಜ್ಯದ ಗೆಲುವಿಗೆ ಬೇಕು 139 ರನ್

By Web DeskFirst Published Jan 18, 2019, 9:48 AM IST
Highlights

ಗೆಲುವಿಗೆ ರಾಜಸ್ಥಾನ ನೀಡಿರುವ 184 ರನ್ ಗುರಿ ಬೆನ್ನಟ್ಟಿರುವ ಕರ್ನಾಟಕ 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ. ಕರುಣ್ ನಾಯರ್ (18*) ಅಜೇಯರಾಗಿದ್ದು, ತಂಡದ ಭರವಸೆಯಾಗಿದ್ದಾರೆ.

ಬೆಂಗಳೂರು[ಜ.18]: 2018-19ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ಗೇರುವ ಸನಿಹದಲ್ಲಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ ವಿರುದ್ಧ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದು ಅಂತಿಮ 4ರ ಸುತ್ತಿಗೆ ಪ್ರವೇಶಿಸಲು ರಾಜ್ಯ ತಂಡಕ್ಕೆ ಇನ್ನೂ 139 ರನ್‌ಗಳ ಅವಕಶ್ಯಕತೆ ಇದೆ. ಗೆಲುವಿಗೆ ರಾಜಸ್ಥಾನ ನೀಡಿರುವ 184 ರನ್ ಗುರಿ ಬೆನ್ನಟ್ಟಿರುವ ಕರ್ನಾಟಕ 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ. ಕರುಣ್ ನಾಯರ್ (18*) ಅಜೇಯರಾಗಿದ್ದು, ತಂಡದ ಭರವಸೆಯಾಗಿದ್ದಾರೆ.

3ನೇ ದಿನ ವಿಕೆಟ್ ನಷ್ಟವಿಲ್ಲದೆ 11 ರನ್‌ಗಳಿಂದ 2ನೇ ಇನ್ನಿಂಗ್ಸ್ ಮುಂದುವರಿಸಿದ ರಾಜಸ್ಥಾನ 222 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಬಿಗುವಿನ ದಾಳಿ ಎದುರು ಸುಲಭವಾಗಿ ರನ್ ಗಳಿಸಲು ಸಾಧ್ಯವಾಗದೆ ಇದ್ದಾಗ ದೊಡ್ಡ ಹೊಡೆತಕ್ಕೆ ಯತ್ನಿಸಿ ಆರಂಭಿಕ ಗೌತಮ್ (24) ಔಟಾದರು. ಬಳಿಕ 2ನೇ ವಿಕೆಟ್‌ಗೆ ಚೇತನ್ ಬಿಶ್ತ್ ಹಾಗೂ ನಾಯಕ ಮಹಿಪಾಲ್ ಲಾಮ್ರೊರ್ ನಡುವೆ 72 ರನ್ ಜೊತೆಯಾಟ ಮೂಡಿಬಂತು. ಪಂದ್ಯ ಕರ್ನಾಟಕದ ಕೈಜಾರುತ್ತಿದೆ ಎನ್ನುವಾಗ ಚೇತನ್ (33)ಗೆ ಕೆ.ಗೌತಮ್ ಪೆವಿಲಿಯನ್ ದಾರಿ ತೋರಿಸಿದರು. ಆಕರ್ಷಕ ಬ್ಯಾಟಿಂಗ್ ನಡೆಸಿದ 19 ವರ್ಷದ ಮಹಿಪಾಲ್ (42) ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಹಿರಿಯ ಬ್ಯಾಟ್ಸ್‌ಮನ್ ಅಶೋಕ್ ಮೆನಾರಿಯಾ (04) ವಿಕೆಟ್ ಉರುಳಿಸಿದ ವೇಗಿ ರೋನಿತ್ ಮೋರೆ, ಭೋಜನ ವಿರಾಮದ ವೇಳೆಗೆ ರಾಜಸ್ಥಾನ 123 ರನ್‌ಗೆ 4 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು.

2ನೇ ಅವಧಿಯಲ್ಲಿ ರಾಬಿನ್ ಬಿಶ್ತ್ ಹಾಗೂ ಸಲ್ಮಾನ್ ಖಾನ್, ಕರ್ನಾಟಕವನ್ನು ಆತಂಕಕ್ಕೆ ದೂಡಿದರು. ಇವರಿಬ್ಬರ ನಡುವೆ 63 ರನ್ ಜೊತೆಯಾಟ ಮೂಡಿಬಂತು. ಆತ್ಮವಿಶ್ವಾಸದೊಂದಿಗೆ ಸಾಗುತ್ತಿದ್ದ ರಾಜಸ್ಥಾನಕ್ಕೆ ಶ್ರೇಯಸ್ ಗೋಪಾಲ್ ಒಂದೇ ಓವರ್‌ನಲ್ಲಿ ಎರಡೆರೆಡು ಆಘಾತ ನೀಡಿದರು. ಮೊದಲು ರಾಬಿನ್ (44)ರನ್ನು ಔಟ್ ಮಾಡಿದ ಶ್ರೇಯಸ್ ಬಳಿಕ ಸಲ್ಮಾನ್(25)ರ ವಿಕೆಟ್ ಸಹ ಕೆಡವಿದರು. ಮೊದಲ ಇನ್ನಿಂಗ್ಸ್ ಉತ್ತಮ ಬ್ಯಾಟಿಂಗ್ ನಡೆಸಿದ್ದ ವೇಗಿ ದೀಪಕ್ ಚಾಹರ್ (0) ಸಹ ಶ್ರೇಯಸ್‌ಗೆ ಬಲಿಯಾದರು. 187 ರನ್‌ಗೆ ರಾಜಸ್ಥಾನ 7 ವಿಕೆಟ್ ಕಳೆದುಕೊಂಡಿತು. ರಾಹುಲ್ ಚಾಹರ್ (22) ಹಾಗೂ ರಾಜೇಶ್ ಬಿಷ್ಣೋಯಿ (12) ಹೋರಾಟದ ನೆರವಿನಿಂದ ರಾಜಸ್ಥಾನ 200ರ ಗಡಿ ದಾಟಿತು. 222 ರನ್‌ಗೆ ಆಲೌಟ್ ಆಗುವ ಮೂಲಕ 2ನೇ ಇನ್ನಿಂಗ್ಸ್‌ನಲ್ಲಿ 183 ರನ್ ಮುನ್ನಡೆ ಪಡೆದುಕೊಂಡಿತು. ಕರ್ನಾಟಕದ ಪರ ಕೆ. ಗೌತಮ್ 4, ಶ್ರೇಯಸ್ ಗೋಪಾಲ್ 3 ವಿಕೆಟ್ ಕಿತ್ತರು.

ಆರಂಭಿಕ ಆಘಾತ: ದಿನದಾಟದಲ್ಲಿ 20 ಓವರ್‌ಗೂ ಹೆಚ್ಚು ಆಟ ಬಾಕಿ ಇರುವಂತೆ ಕರ್ನಾಟಕಕ್ಕೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ದೊರೆಯಿತು. 2ನೇ ಓವರ್ ನಲ್ಲೇ ಡಿ.ನಿಶ್ಚಲ್ (01) ವಿಕೆಟ್ ಕಳೆದುಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಕೆ.ವಿ.ಸಿದ್ಧಾರ್ಥ್ (05) ನಿರಾಸೆ ಅನುಭವಿಸಿದರೆ, ಲಯ ಕಂಡುಕೊಳ್ಳಲು ಪರದಾಡುತ್ತಿರುವ ಆರ್. ಸಮರ್ಥ್(16) ಮತ್ತೊಮ್ಮೆ ತಂಡದ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲರಾದರು. ರಾತ್ರಿ ಕಾವಲುಗಾರ ರೋನಿತ್ ಮೋರೆ (ಅಜೇಯ 5 ರನ್) ಜತೆ ಕರುಣ್, 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು ತಂಡವನ್ನು ಗೆಲುವಿನ ದಡ ಮುಟ್ಟಿಸುವ ಜವಾಬ್ದಾರಿ ಹೊತ್ತಿದ್ದಾರೆ. ಶುಕ್ರವಾರದ ಮೊದಲ ಅವಧಿ ಪಂದ್ಯದ ಫಲಿತಾಂಶ ನಿರ್ಧರಿಸಲಿದೆ.

ಸ್ಕೋರ್:

ರಾಜಸ್ಥಾನ 224 ಹಾಗೂ 222, 
ಕರ್ನಾಟಕ 263 ಹಾಗೂ 45/3

click me!