
ಚೆನ್ನೈ(ಡಿ.15): ತವರಿನಲ್ಲಿನ ಜೈತ್ರಯಾತ್ರೆಯನ್ನು ಮುಂದುವರೆಸುವ ಇರಾದೆಯಿಂದ ಕೂಡಿರುವ ಆತಿಥೇಯ ಭಾರತ ತಂಡ, ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದ್ದರೆ, ಪುಟಿದೇಳಲು ಅಲಸ್ಟೇರ್ ಕುಕ್ ಸಾರಥ್ಯದ ಇಂಗ್ಲೆಂಡ್ ತಂಡಕ್ಕಿರುವುದು ಕಟ್ಟ ಕಡೆಯ ಅವಕಾಶವಷ್ಟೆ.
ವಾರ್ದ ಚಂಡಮಾರುತದ ಸುಳಿಗಾಳಿಗೆ ಸಿಕ್ಕಿ ನಲುಗಿದ ತಮಿಳುನಾಡಿನ ನೆಲದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಇತ್ತಂಡಗಳ ಆಟಗಾರರೂ ಅಭ್ಯಾಸವಿಲ್ಲದೆ ಪಂದ್ಯಕ್ಕೆ ಸಜ್ಜಾಗಿರುವುದು ವಿಶೇಷ. ಕಳೆದ ನಾಲ್ಕೂ ಪಂದ್ಯಗಳಲ್ಲಿ ಶಕ್ತಿಮೀರಿ ಹೋರಾಟ ನಡೆಸುತ್ತಾ ಬಂದಿರುವ ಅಲಸ್ಟೇರ್ ಕುಕ್ ಸಾರಥ್ಯದ ಇಂಗ್ಲೆಂಡ್ ತಂಡ, ವಾಂಖೆಡೆ ಮೈದಾನದಲ್ಲಿ ಅನುಭವಿಸಿದ ಇನ್ನಿಂಗ್ಸ್ ಹಾಗೂ 36 ರನ್‌ಗಳ ಸೋಲಿನೊಂದಿಗೆ ಸರಣಿಯನ್ನು ಈಗಾಗಲೇ ಕೈಚೆಲ್ಲಿದ್ದು, ಸದ್ಯ ನಡೆಯುತ್ತಿರುವ ಪಂದ್ಯ ಅದಕ್ಕೆ ತನ್ನ ಗೌರವ ಕಾಯ್ದುಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ. ತವರಿನಲ್ಲಿ ವಿಜೃಂಭಿಸುತ್ತಾ ಸಾಗಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡವಂತೂ ಅತೀವ ಹುಮ್ಮಸ್ಸಿನಲ್ಲಿದ್ದು ಆಂಗ್ಲರ ವಿರುದ್ಧ ಮತ್ತೊಂದು ಗೆಲುವು ಪಡೆಯಲು ರಣತಂತ್ರ ಹೆಣೆದಿದೆ.
ದಾಖಲೆಯ ಹೊಸ್ತಿಲಲ್ಲಿ ಭಾರತ
ನಾಯಕನಾಗಿ ಅದ್ಭುತ ಪ್ರದರ್ಶನದೊಂದಿಗೆ ವಿಜೃಂಭಿಸುತ್ತಾ ಸಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಚೆನ್ನೈ ಟೆಸ್ಟ್'ನಲ್ಲಿ ಮತ್ತೊಂದು ದಾಖಲೆಯ ಬರೆಯಲು ಸಜ್ಜಾಗಿದ್ದಾರೆ. ಒಂದೊಮ್ಮೆ ಈ ಪಂದ್ಯವನ್ನು ಗೆದ್ದದ್ದೇ ಆದಲ್ಲಿ ಸರಣಿಯೊಂದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಕೊಹ್ಲಿ ಪಡೆ ಸರಿಗಟ್ಟಲಿದೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದಿತ್ತು. ಇನ್ನು, ಈ ಪಂದ್ಯವನ್ನು ಗೆಲ್ಲಲಾಗದೆ ಹೋದರೂ, ಕನಿಷ್ಠ ಡ್ರಾ ಮಾಡಿಕೊಂಡರೂ ತವರಿನಲ್ಲಿ ಸತತ 18 ಪಂದ್ಯಗಳಲ್ಲಿ ಸೋಲರಿಯದ ತಂಡವೆಂಬ ಅಭಿದಾನವೂ ಕೊಹ್ಲಿ ಪಡೆ ಮುಡಿಗೇರಲಿದೆ. 84 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತದ ಯಾವೊಂದು ತಂಡವೂ ಈ ಸಾಧನೆ ಮಾಡಿಲ್ಲ ಎಂಬುದಿಲ್ಲಿ ಗಮನೀಯ.
ಪಿಚ್ ಸ್ಥಿತಿಗತಿ
ಚಂಡಮಾರುತದ ಹಿನ್ನೆಲೆಯಲ್ಲಿ ಸುರಿದ ಮಳೆಯು ಇಲ್ಲಿನ ಚೇಪಕ್ ಕ್ರೀಡಾಂಗಣವನ್ನು ಹಸಿಹಸಿಯಾಗಿಸಿದ್ದರಿಂದ ಬುಧವಾರದಿಂದೀಚೆಗೆ ಪಿಚ್ ಅನ್ನು ಕೆಂಡದ ಸಹಾಯದಿಂದ ಒಣಗಿಸಲು ಇಲ್ಲಿನ ಸಿಬ್ಬಂದಿ ಶ್ರಮಿಸಿದೆ. ಅಂದಹಾಗೆ ಮೊದಲ ದಿನ ವೇಗದ ಬೌಲಿಂಗ್'ಗೆ ಪಿಚ್ ಸಹಕಾರಿಯಾದರೂ, ಕ್ರಮೇಣ ಮತ್ತದೇ ಸ್ಪಿನ್'ಮಯವಾಗಿ ಬದಲಾಗುವ ಸಾಧ್ಯತೆ ಇದೆ. ಇದು ಸ್ಥಳೀಯ ಆಟಗಾರ ಅಶ್ವಿನ್'ಗೆ ವರವಾಗಲಿದೆ. ಅಂದಹಾಗೆ ಈ ಮೈದಾನದಲ್ಲಿ 1934ರಿಂದ 2008ರವರೆಗಿನ ಅವಧಿಯಲ್ಲಿ ಎಂಟು ಟೆಸ್ಟ್ ಆಡಿರುವ ಇಂಗ್ಲೆಂಡ್ ಮೂರರಲ್ಲಿ ಗೆದ್ದಿದ್ದರೆ, ನಾಲ್ಕರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ಕಂಡಿದೆ. ಇನ್ನು ಭಾರತ 1934-203ರ ಅವಧಿಯಲ್ಲಿ ಆಡಿದ 31 ಪಂದ್ಯಗಳಲ್ಲಿ 13ರಲ್ಲಿ ಗೆದ್ದಿದ್ದರೆ, 6ರಲ್ಲಿ ಸೋತಿದೆ. 1 ಪಂದ್ಯ ಟೈ ಆಗಿದ್ದರೆ 11 ಪಂದ್ಯಗಳು ಡ್ರಾ ಕಂಡಿವೆ.
ಸಂಭವನೀಯರ ಪಟ್ಟಿ
ಭಾರತ
ಕೆ.ಎಲ್. ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಕರುಣ್ ನಾಯರ್, ಆರ್. ಅಶ್ವಿನ್, ಪಾರ್ಥೀವ್ ಪಟೇಲ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಜಯಂತ್ ಯಾದವ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್ / ಇಶಾಂತ್ ಶರ್ಮಾ.
ಇಂಗ್ಲೆಂಡ್
ಅಲಸ್ಟೇರ್ ಕುಕ್ (ನಾಯಕ), ಕೀಟನ್ ಜೆನಿಂಗ್ಸ್, ಜೋ ರೂಟ್, ಮೊಯೀನ್ ಅಲಿ, ಜಾನಿ ಬೇರ್‌ಸ್ಟೋ (ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಲಿಯಾಮ್ ಡಾಸನ್, ಸ್ಟುವರ್ಟ್ ಬ್ರಾಡ್ / ಕ್ರಿಸ್ ವೋಕ್ಸ್, ಆದಿಲ್ ರಶೀದ್ ಮತ್ತು ಜೇಕ್ ಬಾಲ್.
ಪಂದ್ಯ ಆರಂಭ: ಬೆಳಗ್ಗೆ 9.30 |
ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.