
ಭಾರತೀಯ ಕ್ರಿಕೆಟ್'ನ ‘ಸೂಪರ್‌ಸ್ಟಾರ್ ಸಂಪ್ರದಾಯ', ಹಿತಾಸಕ್ತಿ ಸಂಘರ್ಷ ಹಾಗೂ ಕೋಚ್ ಅನಿಲ್ ಕುಂಬ್ಳೆ ಯನ್ನು ಬಿಸಿಸಿಐ ನಡೆಸಿಕೊಳ್ಳುತ್ತಿರುವ ರೀತಿಯನ್ನು ಬಿಸಿಸಿಐ ಆಡಳಿತ ಸಮಿತಿ ಮಾಜಿ ಸದಸ್ಯ ರಾಮಚಂದ್ರ ಗುಹಾ ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಗುರುವಾರ ವೈಯಕ್ತಿಕ ಕಾರಣವಿತ್ತು. ರಾಜೀನಾಮೆ ನೀಡಿದ್ದ ಅವರು, ಶುಕ್ರವಾರ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್‌ಗೆ 7 ಪುಟಗಳ ಪತ್ರಕಳಿಸಿದ್ದಾರೆ.
ಬಿಸಿಸಿಐ ಆಡಳಿತ ವ್ಯವಸ್ಥೆಗೂ ಹಾಗೂ ತಮಗೂ ಇರುವ ವ್ಯತ್ಯಾಸವೇ ರಾಜೀನಾಮೆಗೆ ಕಾರಣ ಎಂದು ಸ್ಪಷ್ಟಪಡಿಸಿರುವ ಗುಹಾ, ಕೋಚ್ ಆಯ್ಕೆಯಲ್ಲಿ ವಿರಾಟ್ ಕೊಹ್ಲಿಯ ಪಾತ್ರ, ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಅವರ ವಿರುದ್ಧ ಪರೋಕ್ಷವಾಗಿ ಸ್ವಹಿತಾಸಕ್ತಿ ಆರೋಪ ಮಾಡಿದ್ದಾರೆ. ಇದಲ್ಲದೇ ಮಾಜಿ ನಾಯಕ ಎಂ.ಎಸ್.ಧೋನಿಗೆ ಬಿಸಿಸಿಐ ನೀಡುತ್ತಿರುವ ಸವಲತ್ತುಗಳನ್ನೂ ಗುಹಾ ಟೀಕಿಸಿದ್ದಾರೆ. ಅವರ ರಾಜೀನಾಮೆ ಪತ್ರದಲ್ಲಿರುವ 8 ಅಂಶಗಳು ಈ ರೀತಿ ಇವೆ.
1) ಹಿತಾಸಕ್ತಿ ಸಂಘರ್ಷ: ನಾನು ಆಡಳಿತ ಸಮಿತಿ ಸೇರಿದಾಗಿ ನಿಂದಲೂ ಕೆಲ ಪ್ರಮುಖರ ಹಿತಾಸಕ್ತಿ ಸಂಘರ್ಷವನ್ನು ಪ್ರಶ್ನಿಸುತ್ತಲೇ ಇದ್ದೇನೆ. ಆದರೆ ಆಡಳಿತ ಸಮಿತಿ ಈ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಬಿಸಿಸಿಐನೊಂದಿಗೆ ಒಪ್ಪಂದದಲ್ಲಿರುವ ಕೆಲ ಕೋಚ್‌ಗಳು ಕೇವಲ 10 ತಿಂಗಳು ಗುತ್ತಿಗೆ ಅವಧಿಗೆ ಮಾತ್ರ ಸಹಿ ಹಾಕಿ, ಐಪಿಎಲ್ ತಂಡಗಳಿಗೂ ಮಾರ್ಗದರ್ಶಕರಾಗಿದ್ದಾರೆ. ಒಬ್ಬರು ಎರಡೆರಡು ಹುದ್ದೆಗಳನ್ನು ಹೊಂದಲು ಹೇಗೆ ಸಾಧ್ಯ? ರಾಷ್ಟ್ರೀಯ ತಂಡಕ್ಕೆ ಪ್ರಾಧಾನ್ಯತೆ ನೀಡಬೇಕೇ ಹೊರತು ಕ್ಲಬ್‌ಗಳಿಗಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಿರಿಯ ಆಟಗಾರರ ಶಿಬಿರ ನಡೆಯುವಾಗ ಒಬ್ಬ ರಾಷ್ಟ್ರೀಯ ತಂಡದ ಕೋಚ್ ಐಪಿಎಲ್ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಾರೆ (ಭಾರತ ಕಿರಿಯರ ತಂಡದ ಕೋಚ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್‌ನ ಮೆಂಟರ್ ಆಗಿರುವ ರಾಹುಲ್ ದ್ರಾವಿಡ್ ಎಂದರೆ ಇದನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಲೋಧಾ ಸಮಿತಿ ಶಿಫಾರಸಿನ ಪ್ರಕಾರ, ಈ ರೀತಿಯ ಕಾರ್ಯವೈಖರಿಗೆ ಖಂಡಿತ ವಾಗಿಯೂ ಅವಕಾಶವಿಲ್ಲ.
2) ಬೇಕಾದವರ ಪರ ಕಾಮೆಂಟ್ರಿ: ಬಿಸಿಸಿಐನೊಂದಿಗೆ ಒಪ್ಪಂದದಲ್ಲಿರುವ ವೀಕ್ಷಕ ವಿವರಣೆಗಾರರು ಆಟಗಾರರ ನಿರ್ವಹಣೆ ಸಂಸ್ಥೆಯನ್ನು ನಡೆಸಲು ಹೇಗೆ ಸಾಧ್ಯ? ಈ ರೀತಿಯ ಸಂಸ್ಥೆಯ ಮುಖ್ಯಸ್ಥರಾಗಿದ್ದುಕೊಂಡು, ಸುನಿಲ್ ಗವಾಸ್ಕರ್ ವೀಕ್ಷಕ ವಿವರಣೆ ವೇಳೆ ತಮ್ಮೊಂದಿಗೆ ಒಪ್ಪಂದದಲ್ಲಿರುವ ಆಟಗಾರರ ಬಗ್ಗೆಯೇ ಹೆಚ್ಚು ಹೊಗಳಿಕೆಯ ಮಾತು ಗಳನ್ನಾಡುವುದು ಎಷ್ಟುಸರಿ? ಹಾಗೇ, ರಾಜ್ಯ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿರುವ ಒಬ್ಬರು, ಟೀವಿ ಮಾಧ್ಯಮಗಳಲ್ಲಿ ಪಂದ್ಯಗಳ ವಿಶ್ಲೇಷಣೆ ಮಾಡುವುದಕ್ಕೂ (ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ?) ಅವಕಾಶವಿರುವುದು ಒಪ್ಪಲಸಾಧ್ಯವಾದ ಸಂಗತಿ. ದಿಗ್ಗಜ ಆಟಗಾರರು ನಿಯಮ ಉಲ್ಲಂಘನೆ ಮಾಡಿದಾಗ ಅವರನ್ನು ಪ್ರಶ್ನಿಸುವ ಅಥವಾ ತಡೆಯುವ ಧೈರ್ಯ ಬಿಸಿಸಿಐಗೇಕ್ಕಿಲ್ಲ? ಅದೇ ರೀತಿ ಒಂದು ರಾಜ್ಯ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದುಕೊಂಡು ಮತ್ತೊಂದು ರಾಜ್ಯ ತಂಡದ ಕೋಚ್ ಆಗುವುದು, ತಮ್ಮ ಸ್ನೇಹಿತರು, ಸಂಬಂಧಿಕರಿಗೆ ವ್ಯವಹಾರ ಗುತ್ತಿಗೆಗಳನ್ನು ನೀಡುವುದು ಬಿಸಿಸಿಐನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.
3) ಧೋನಿಗೇಕೆ ಸ್ಪೆಷಲ್: ಟೆಸ್ಟ್‌ನಿಂದ ನಿವೃತ್ತಿ ಪಡೆದು ವರ್ಷಗಳೇ ಕಳೆದರೂ, ಎಂ.ಎಸ್.ಧೋನಿಗೆ ‘ಎ' ದರ್ಜೆ ಗುತ್ತಿಗೆ ನೀಡಲಾಗುತ್ತಿದೆ. ಉಳಿದ ಆಟಗಾರರಿಗೆ ಇಲ್ಲದ ಸವಲತ್ತು ಅವರಿಗೆ ಮಾತ್ರ ಏಕೆ? ‘ಸೂಪರ್‌ಸ್ಟಾರ್' ಎನ್ನುವ ಕಾರಣಕ್ಕೆ ಅವರಿಗೆ ವಿಶೇಷ ಸೌಲಭ್ಯ ನೀಡುವುದು ಪಾರದರ್ಶಕ ಆಡಳಿತದ ಮಾದರಿಯಲ್ಲ. ಇದು ತಪ್ಪು ಸಂದೇಶವನ್ನು ರವಾನಿಸುತ್ತಿದೆ.
4) ಕುಂಬ್ಳೆ ಬಗ್ಗೆ ನಿರ್ಲಕ್ಷ್ಯ: ಹಾಲಿ ಕೋಚ್ ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ ನಡೆಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಬೇಸರ ಮೂಡಿಸುತ್ತಿದ್ದು, ಅವರ ಅವಧಿಯಲ್ಲಿ ತಂಡದ ಪ್ರದರ್ಶನವೇ ಕೋಚ್ ಆಗಿ ಅವರೆಷ್ಟುಸಮರ್ಥರು ಎನ್ನುವುದನ್ನು ತೋರಿಸುತ್ತದೆ. ನಿಸ್ಸಂದೇಹವಾಗಿ ಅವರ ಅವಧಿಯನ್ನು ಬಿಸಿಸಿಐ ವಿಸ್ತರಿಸಬೇಕಿತ್ತು. ತಂಡ ಸಾಧಿಸುತ್ತಿರುವ ಯಶಸ್ಸಿನಲ್ಲಿ ಆಟಗಾರರ ಪಾತ್ರ ಎಷ್ಟಿದೆಯೋ, ಕುಂಬ್ಳೆ ಪಾತ್ರವೂ ಅಷ್ಟೇ ಇದೆ. ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಬಿಸಿಸಿಐ ಸಂವೇದನಾರಹಿತ ರೀತಿಯಲ್ಲಿ ನಿರ್ವಹಿಸುತ್ತಿದೆ. ಕುಂಬ್ಳೆ ಅವರ ಗುತ್ತಿಗೆ ಅವಧಿ 1 ವರ್ಷಕ್ಕೆ ಮಾತ್ರ ಎಂದು ತಿಳಿದಿದ್ದರೂ, ಏಕೆ ಹೊಸ ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಐಪಿಎಲ್ ನಡೆಯುವಾಗಲೇ ಆರಂಭಿಸಲಿಲ್ಲ? ಹಾಗೇ, ಕೋಚ್ ಹಾಗೂ ನಾಯಕನ ನಡುವೆ ಮನಸ್ತಾಪ ಇರುವುದೇ ಆದರೆ ಅದನ್ನು ಆಸ್ಪ್ರೇಲಿಯಾ ಸರಣಿ ಮುಗಿದ ಕೂಡಲೇ ಪರಿಹರಿಸದೆ ಕೊನೆ ಕ್ಷಣದ ವರೆಗೂ ಸುಮ್ಮನಿದ್ದಿದ್ದು ಏಕೆ? ಹಿರಿಯ ಆಟಗಾರರು ತಾವು ಕೋಚ್‌ಗಿಂತ ಹೆಚ್ಚು ಪ್ರಭಾವಿಗಳು ಎಂದು ಬೀಗಲು ಯಾವುದೇ ದೇಶದ, ಯಾವುದೇ ಕ್ರೀಡೆಯಲ್ಲೂ ಅವಕಾಶ ನೀಡುವುದಿಲ್ಲ.
5) ರಣಜಿ ಬಗ್ಗೆ ತಾರತಮ್ಯ: ದೇಸಿ ಪಂದ್ಯಾವಳಿಗಳು ಹಾಗೂ ಆಟಗಾರರ ಅಭಿವೃದ್ಧಿಗೆ ಬಿಸಿಸಿಐ ನಿರಾಸಕ್ತಿ ತೋರುತ್ತಿರುವುದು ಬೇಸರದ ಸಂಗತಿಯಲ್ಲದೆ ಮತ್ತೇನೂ ಅಲ್ಲ. ಐಪಿಎಲ್ ದೇಶದ ಪ್ರಮುಖ ಆಕರ್ಷಣೆ ಇರಬಹುದು. ಹಾಗೆಂದು, ಇತರೆ ಪಂದ್ಯಾವಳಿಗಳನ್ನು ಕಡೆಗಣಿಸುವುದು ಸರಿಯಲ್ಲ. ಐಪಿಎಲ್‌ನಿಂದ ಬರುವ ಹಣದಿಂದ ಇತರೆ ದೇಸಿ ಪಂದ್ಯಾವಳಿಗಳನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಬೇಕಿದೆ. ರಣಜಿ ಕ್ರಿಕೆಟನ್ನೇ ನಂಬಿಕೊಂಡು ಎಷ್ಟೋ ಆಟಗಾರರು ಜೀವನ ನಡೆಸುತ್ತಿದ್ದಾರೆ.ಅದಲ್ಲದೇ ಎಷ್ಟೋ ರಾಜ್ಯ ಸಂಸ್ಥೆಗಳು ಆಟಗಾರರಿಗೆ ಸಿಗಬೇಕಿರುವ ಚೆಕ್‌ಗಳನ್ನು ಸರಿಯಾದ ಸಮಯಕ್ಕೆ ವಿತರಿಸುತ್ತಿಲ್ಲ ಎನ್ನುವುದು ಸಹ ಬಿಸಿಸಿಐಗೆ ತಿಳಿದಿದೆ.
6) ಐಸಿಸಿ ಜತೆ ಸಂಘರ್ಷ: ಸುಪ್ರೀಂಕೋರ್ಟ್ ಆದೇಶವನ್ನೂ ಮೀರಿ ಅನರ್ಹ ಸದಸ್ಯರು ಬಿಸಿಸಿಐ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾಗ ಆಡಳಿತ ಸಮಿತಿ ಕೈಕಟ್ಟಿಕೂತಿದ್ದು ತಪ್ಪು. ಅಲ್ಲದೇ ಐಸಿಸಿಯೊಂದಿಗೆ ಹಣಕಾಸು ಹಗ್ಗಜಗ್ಗಾಟದ ಕಾರಣ, ಚಾಂಪಿಯನ್ಸ್ ಟ್ರೋಫಿ ಬಹಿಷ್ಕರಿಸುವುದಾಗಿ ಬಿಸಿಸಿಐ ಆಡಳಿತಗಾರರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾಗಲೂ ಯಾವುದೇ ಕ್ರಮ ಜಾರಿಯಾಗಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ವಿಸ್ತಾರವಾಗಿ ಸುದ್ದಿ ಪ್ರಕಟಗೊಳ್ಳುತ್ತಿದ್ದರೂ ಆಡಳಿತ ಸಮಿತಿ ನಿಯಮ ಉಲ್ಲಂಘಿಸುತ್ತಿದ್ದವರನ್ನು ತಡೆಯುವ ಪ್ರಯತ್ನ ನಡೆಸಲಿಲ್ಲವೇಕೆ?
7) ಶ್ರೀನಾಥ್ ನೇಮಿಸಿ: ಹಿರಿಯ ಹಾಗೂ ಗೌರವಾನ್ವಿತ ಕ್ರಿಕೆಟರ್ ಒಬ್ಬರು ಅನುಪಸ್ಥಿತಿಯಿಂದೇ ನಮಗೆ ಈ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಹೀಗಾಗಿ, ಆಡಳಿತ ಸಮಿತಿಗೆ ಜಾವಗಲ್ ಶ್ರೀನಾಥ್ ಅವರನ್ನು ಸೇರ್ಪಡೆಗೊಳಿಸಬೇಕು. ಶ್ರೀನಾಥ್ ಒಬ್ಬ ಕ್ರಿಕೆಟಿಗನಾಗಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಐಸಿಸಿ ಪಂದ್ಯ ರೆಫ್ರಿಯಾಗಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಡಯಾನ ಎಡುಲ್ಜಿ ಅವರೊಂದಿಗೆ ಕ್ರಿಕೆಟ್ ವಿಚಾರಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಶ್ರೀನಾಥ್ ಅವರಿಗಿದೆ. ಅವರನ್ನು ಆಡಳಿತ ಸಮಿತಿ ಸದಸ್ಯರಾಗಿ ನೇಮಿಸಲು ಇನ್ನೂ ಸಮಯ ಮೀರಿಲ್ಲ.
8) ಸಭೆಗಳು ಸರಿಯಿಲ್ಲ: ನಮ್ಮ ಎಲ್ಲಾ ಸಭೆಗಳು ಸೌಮ್ಯವಾದ ವಾತಾವರಣದಲ್ಲಿ ನಡೆದರೂ, ಸಭೆಗಳ ಮಧ್ಯೆ ಸರಿಯಾದ ಸಮಾಲೋಚನೆ ನಡೆದಿಲ್ಲ. ಹಾಗೇ, ಕೆಲ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಲ್ಲಾ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸುವಲ್ಲಿ ಆಡಳಿತ ಸಮಿತಿ ಎಡವಿದೆ. ಉದಾಹರಣೆಗೆ ಸುಪ್ರೀಂಕೋರ್ಟ್‌ನಲ್ಲಿ ಆಡಳಿತ ಸಮಿತಿ ಹಾಗೂ ಬಿಸಿಸಿಐಯನ್ನು ಪ್ರತಿನಿಧಿಸುತ್ತಿದ್ದ ಅರ್ಹ, ರಾಜಕೀಯೇತರ ಹಿರಿಯ ವಕೀಲರನ್ನು, ದಿಢೀರನೆ ಬದಲಿಸಿ ರಾಜಕೀಯದಲ್ಲಿ ಸಕ್ರಿಯರಾಗಿರುವ ಮತ್ತೊಬ್ಬ ಹಿರಿಯ ವಕೀಲರನ್ನು ನೇಮಿಸಲಾಯಿತು. ಈ ವಿಚಾರವಾಗಿ ಆಡಳಿತ ಸಮಿತಿಯ ಉಳಿದ ಸದಸ್ಯರ ಅಭಿಪ್ರಾಯಗಳನ್ನು ಕೇಳಬೇಕಿತ್ತು.
ಕೊನೆಯದಾಗಿ ನನ್ನಿಂದ ತೆರವುಗೊಂಡ ಜಾಗವನ್ನು ಅರ್ಹ, ಕ್ರಿಕೆಟ್'ನಲ್ಲಿ ಆಡಳಿತದಲ್ಲಿ ಅನುಭವವಿರುವ ಗೌರವಾನ್ವಿತ ಕ್ರಿಕೆಟಿಗನಿಗೆ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.