IPL 2018 ರಾಜಸ್ಥಾನಕ್ಕಿಂದು ಬಲಿಷ್ಠ ಚೆನ್ನೈ ಸವಾಲು

First Published May 11, 2018, 4:26 PM IST
Highlights

ಇಂದಿನ ಪಂದ್ಯ ಜೈಪುರದಲ್ಲಿ ನಡೆಯಲಿರುವುದರಿಂದ ರಾಯಲ್ಸ್ ಆತ್ಮವಿಶ್ವಾಸ ಹೆಚ್ಚಿದೆ. ಕಾರಣ ಇಲ್ಲಿ ಆಡಿರುವ 5 ಪಂದ್ಯಗಳಲ್ಲಿ ತಂಡ 3ರಲ್ಲಿ ಗೆದ್ದಿದೆ. ನಿರ್ಣಾಯಕ ಹಂತದಲ್ಲಿ ಹೆಚ್ಚು ಪಂದ್ಯಗಳನ್ನು ತವರಿನಲ್ಲೇ ಆಡುವುದರಿಂದ ರಾಯಲ್ಸ್‌ಗೆ ಅನುಕೂಲವಾಗಲಿದೆ.

ಜೈಪುರ[ಮೇ.11]: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ರಾಜಸ್ಥಾನ ರಾಯಲ್ಸ್, ಶುಕ್ರವಾರ ಇಲ್ಲಿನ ಸವಾಯ್ ಮಾನ್‌'ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ. 

ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ರಾಯಲ್ಸ್‌ಗಿದು ಗೆಲ್ಲಲೇಬೇಕಾದ ಪಂದ್ಯವಾದರೆ, ಚೆನ್ನೈ ತನ್ನ ಅಂಕ ಗಳಿಕೆಯನ್ನು 14ರಿಂದ 16ಕ್ಕೇರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಈ ಪಂದ್ಯವನ್ನು ಚೆನ್ನೈ ಜಯಿಸಿದಲ್ಲಿ, ಪ್ಲೇ-ಆಫ್‌ನಲ್ಲಿ ಸ್ಥಾನ ಬಹುತೇಕ ಖಚಿತಗೊಳ್ಳಲಿದೆ. ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ರಾಯಲ್ಸ್, ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದ್ದು ಪಂದ್ಯದಿಂದ ಪಂದ್ಯಕ್ಕೆ ಆಟದ ಗುಣಮಟ್ಟ ಸುಧಾರಿಸಬೇಕಿದೆ. ಇದರೊಂದಿಗೆ ಹಿಂದಿನ ಮುಖಾಮುಖಿಯಲ್ಲಿ ಅನುಭವಿಸಿದ 64 ರನ್ ಸೋಲಿಗೂ ರಾಯಲ್ಸ್ ಸೇಡು ತೀರಿಸಿಕೊಳ್ಳಲು ಅವಕಾಶವಿದೆ.

ಇಂದಿನ ಪಂದ್ಯ ಜೈಪುರದಲ್ಲಿ ನಡೆಯಲಿರುವುದರಿಂದ ರಾಯಲ್ಸ್ ಆತ್ಮವಿಶ್ವಾಸ ಹೆಚ್ಚಿದೆ. ಕಾರಣ ಇಲ್ಲಿ ಆಡಿರುವ 5 ಪಂದ್ಯಗಳಲ್ಲಿ ತಂಡ 3ರಲ್ಲಿ ಗೆದ್ದಿದೆ. ನಿರ್ಣಾಯಕ ಹಂತದಲ್ಲಿ ಹೆಚ್ಚು ಪಂದ್ಯಗಳನ್ನು ತವರಿನಲ್ಲೇ ಆಡುವುದರಿಂದ ರಾಯಲ್ಸ್‌ಗೆ ಅನುಕೂಲವಾಗಲಿದೆ. ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ ಹೊರತುಪಡಿಸಿ ಬ್ಯಾಟಿಂಗ್‌ನಲ್ಲಿ ಉಳಿದ್ಯಾರಿಂದಲೂ ತಂಡಕ್ಕೆ ಹೆಚ್ಚಿನ ಕೊಡುಗೆ ದೊರೆಯುತ್ತಿಲ್ಲ. ರಾಯಲ್ಸ್‌ನ ಈ ಪರಿಸ್ಥಿತಿಗೆ ಇದೇ ಪ್ರಮುಖ ಕಾರಣ. ದುಬಾರಿ ಆಲ್ರೌಂಡರ್ ಬೆನ್ ಸ್ಟೋಕ್ಸ್, ರಾಹುಲ್ ತ್ರಿಪಾಠಿ, ವೇಗಿ ಜೈದೇವ್ ಉನಾದ್ಕತ್ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕೆ.ಗೌತಮ್ ಹಾಗೂ ಜೋಫ್ರಾ ಆರ್ಚರ್ ಲಯದಲ್ಲಿರುವುದು ತಂಡ ಆತ್ವವಿಶ್ವಾಸ ಉಳಿಸಿಕೊಳ್ಳಲು ನೆರವಾಗಿದೆ.

ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಅತ್ಯುತ್ತಮ ಲಯದಲ್ಲಿದೆ. ಬಹುತೇಕ ಪಂದ್ಯಗಳಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದರೂ, ಬೌಲರ್‌ಗಳು ವಿಫಲರಾಗುತ್ತಿದ್ದರು. ಆದರೆ ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಕೇವಲ 127 ರನ್'ಗಳಿಗೆ ನಿಯಂತ್ರಿಸುವ ಮೂಲಕ, ಚೆನ್ನೈ ಬೌಲರ್'ಗಳು ಲಯ ಕಂಡುಕೊಂಡಿದ್ದರು. ಎಂ.ಎಸ್. ಧೋನಿ ನೇತೃತ್ವದ ತಂಡ ಸಂಘಟಿತ ಹೋರಾಟದಿಂದ, ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಅಗ್ರ 2ರಲ್ಲಿ ಸ್ಥಾನ ಖಚಿತಪಡಿಸಿ ಕೊಳ್ಳುವ ಲೆಕ್ಕಾಚಾರದಲ್ಲಿದೆ.

click me!