
ನವದೆಹಲಿ(ಸೆ.27): ಬಲಿಷ್ಠ ಯುಪಿ ಯೋಧಾ ಎದುರು ಯಾವುದೇ ಪ್ರತಿರೋಧ ತೋರದ ದಬಾಂಗ್ ಡೆಲ್ಲಿ ತವರಿನಲ್ಲಿ ಮತ್ತೊಮ್ಮೆ ಹೀನಾಯ ಸೋಲು ಕಂಡಿತು. ಇದು ಡೆಲ್ಲಿಗೆ ತವರಿನಲ್ಲಿ 5ನೇ ಹಾಗೂ ಒಟ್ಟಾರೆ ಸತತ 7ನೇ ಸೋಲು. ಮಿಂಚಿನ ದಾಳಿ ನಡೆಸಿದ ನಿತಿನ್ ತೋಮರ್(14 ಅಂಕ) ಗೆಲುವಿನ ರೂವಾರಿಯಾಗುವುದರ ಜೊತೆಗೆ ಪ್ಲೇ ಆಫ್ ಪ್ರವೇಶದ ಕನಸು ಜೀವಂತವಾಗಿರಿಸಿಕೊಂಡಿತು.
ಮೊದಲಾರ್ಧದಲ್ಲಿ ರಿಷಾಂಗ್ ದೇವಾಡಿಗ ರೈಡಿಂಗ್’ನಲ್ಲಿ ಯುಪಿ ಯೋಧಾ ಖಾತೆ ತೆರೆಯಿತು. ಬಲಿಷ್ಠ ಯುಪಿ ಯೋಧಾ ಎದುರು ರಕ್ಷಣಾತ್ಮಕ ಆಟಕ್ಕೆ ಮುಂದಾದ ದಬಾಂಗ್ ಡೆಲ್ಲಿ 5ನೇ ನಿಮಿಷದಲ್ಲಿ 1-5 ಅಂಕಗಳ ಹಿನ್ನಡೆ ಅನುಭವಿಸಿತ್ತು. ಇದರ ಲಾಭ ಪಡೆದುಕೊಂಡ ಯುಪಿ ಯೋಧಾ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೀಗಾಗಿ ಪಂದ್ಯದ 14ನೇ ನಿಮಿಷದಲ್ಲಿ ಡೆಲ್ಲಿ ಆಲೌಟ್ ಆಯಿತು. ಈ ವೇಳೆ ನಿತಿನ್ ತೋಮರ್ ಪಡೆ 15-6 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಅಂತಿಮವಾಗಿ ಮೊದಲಾರ್ಧ ಮುಕ್ತಾಯದ ವೇಳೆಗೆ ಯುಪಿ ಯೋಧಾ 20-10 ಅಂಕಗಳ ಮುನ್ನಡೆ ಸಾಧಿಸಿತ್ತು. ಮೊದಲಾರ್ಧದಲ್ಲೇ ನಾಯಕ ನಿತಿನ್ ತೋಮರ್ ಸೂಪರ್ 10 ಅಂಕ ಕಲೆಹಾಕಿಯಾಗಿತ್ತು.
ಇನ್ನು ದ್ವಿತಿಯಾರ್ಧದಲ್ಲಿ ಇನ್ನಷ್ಟು ಆಕ್ರಮಣಕಾರಿಯಾಟಕ್ಕೆ ಮುಂದಾದ ಯುಪಿ ಯೋಧಾ ಪಡೆ ಉತ್ತರಾರ್ಧದ 10 ನಿಮಿಷದವರೆಗೆ ಡೆಲ್ಲಿ ತಂಡಕ್ಕೆ ಬಿಟ್ಟುಕೊಟ್ಟಿದ್ದು ಕೇವಲ 1 ಅಂಕವಾದರೆ, ನಿತಿನ್ ಪಡೆ ಕಲೆ ಹಾಕಿದ್ದು ಮಾತ್ರ 12 ಅಂಕ. ದ್ವಿತಿಯಾರ್ಧದ 6ನೇ ಹಾಗೂ 12ನೇ ನಿಮಿಷದಲ್ಲಿ ಮತ್ತೆರಡು ಬಾರಿ ಡೆಲ್ಲಿಯನ್ನು ಆಲೌಟ್ ಮಾಡಿದ ಯುಪಿ ಯೋಧಾ ಪಂದ್ಯದ ಮೇಲೆ ಸ್ಪಷ್ಟ ಹಿಡಿತ ಸಾಧಿಸಿತು. ಅಂತಿಮವಾಗಿ ಯುಪಿ ಯೋಧಾ 45-16 ಅಂಕಗಳಿಂದ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಟರ್ನಿಂಗ್ ಪಾಯಿಂಟ್
ದ್ವಿತಿಯಾರ್ಧದಲ್ಲಿ ಡೆಲ್ಲಿ ಮತ್ತಷ್ಟು ರಕ್ಷಣಾತ್ಮಕವಾಗಿ ಸೋಲಿಗೆ ಪ್ರಮುಖ ಕಾರಣ. 30 ನಿಮಿಷದ ವರೆಗೂ ಡೆಲ್ಲಿ ನಾಯಕ ಮಿರಾಜ್ ಶೇಕ್ ಒಂದೇ ಒಂದು ಯಶಸ್ವಿ ರೈಡ್ ನಡೆಸಲಿಲ್ಲ. ಮಿರಾಜ್ ದಯಾನೀಯ ವೈಫಲ್ಯ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಶ್ರೇಷ್ಠ ರೈಡರ್: ನಿತಿನ್ ತೋಮರ್(14 ಅಂಕ)
ಶ್ರೇಷ್ಠ ಡಿಫೆಂಡರ್: ಸಾಗರ್(5 ಅಂಕ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.