ಜೈಪುರ ಮಣಿಸಿದ ಟೈಟಾನ್ಸ್ : ಉತ್ತಮ ಪ್ರದರ್ಶನ ತೋರಿದ ರಾಹುಲ್ ಚೌಧರಿ

By Suvarna Web DeskFirst Published Sep 27, 2017, 10:17 PM IST
Highlights

ಒಂದು ಕಡೆ ತೆಲುಗು ಟೈಟಾನ್ಸ್ ನಾಯಕ ರೋಹಿತ್ ರಾಣಾ ತಪ್ಪುಗಳ ತಪ್ಪುಗಳನ್ನೆಸಗುತ್ತಾ ಅಂಕಣದ ಹೊರಗೆ ಹೋಗುತ್ತಿದ್ದರೂ, ಮತ್ತೊಂದೆಡೆ ತಾರಾ ರೈಡರ್ ರಾಹುಲ್ ಚೌಧರಿ ಮಿಂಚಿನ ದಾಳಿ ನಡೆಸುವ ಮೂಲಕ ಟೈಟಾನ್ಸ್ ಪಡೆಗೆ ಆಸರೆಯಾದರು.

ನವದೆಹಲಿ(ಸೆ.27): ತಾರಾ ಆಟಗಾರ ರಾಹುಲ್ ಚೌಧರಿ(17 ಅಂಕ) ಆಕರ್ಷಕ ಪ್ರದರ್ಶನದ ನೆರವಿನಿಂದ ತೆಲುಗು ಟೈಟಾನ್ಸ್ ಪಡೆಯು ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.  ಈ ಮೂಲಕ ಟೂರ್ನಿಯಲ್ಲಿ 5 ನೇ ಜಯ ದಾಖಲಿಸಿದರೆ, ಜೈಪುರ ಸತತ ಎರಡನೇ ಸೋಲು ಕಾಣುವ ಮೂಲಕ ಪ್ಲೇ ಆಫ್ ಪ್ರವೇಶದ ಹಾದಿ  ಮತ್ತಷ್ಟು ದುರ್ಗಮವಾಗಿದೆ.

ಇಲ್ಲಿನ ತ್ಯಾಗರಾಜ್ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 41-34 ಅಂಕಗಳಿಂದ ಜಯಭೇರಿ ಬಾರಿಸಿತು. ಮೊದಲಾರ್ಧದ 11ನೇ ನಿಮಿಷದಲ್ಲಿ ಜೈಪುರವನ್ನು ಆಲೌಟ್ ಮಾಡಿದ ತೆಲುಗು ಟೈಟಾನ್ಸ್ ಅಂಕವನ್ನು 15-5ಕ್ಕೆ ಹೆಚ್ಚಿಸಿಕೊಂಡಿತು.

ಒಂದು ಕಡೆ ತೆಲುಗು ಟೈಟಾನ್ಸ್ ನಾಯಕ ರೋಹಿತ್ ರಾಣಾ ತಪ್ಪುಗಳ ತಪ್ಪುಗಳನ್ನೆಸಗುತ್ತಾ ಅಂಕಣದ ಹೊರಗೆ ಹೋಗುತ್ತಿದ್ದರೂ, ಮತ್ತೊಂದೆಡೆ ತಾರಾ ರೈಡರ್ ರಾಹುಲ್ ಚೌಧರಿ ಮಿಂಚಿನ ದಾಳಿ ನಡೆಸುವ ಮೂಲಕ ಟೈಟಾನ್ಸ್ ಪಡೆಗೆ ಆಸರೆಯಾದರು.

ಮೊದಲಾರ್ಧ ಮುಕ್ತಾಯಕ್ಕೆ 3 ನಿಮಿಷಗಳು ಬಾಕಿಯಿದ್ದಾಗ ತೆಲುಗು ಟೈಟಾನ್ಸ್ 21-08 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಈ ವೇಳೆ ಜೈಪುರ ಪರ ಸೂಪರ್ ರೈಡ್ ಮಾಡಿದ ಪವನ್ ಕುಮಾರ್ ತಂಡಕ್ಕೆ 2 ಅಂಕಗಳ ಕೊಡುಗೆ ನೀಡಿದರು. ಮೊದಲಾರ್ಧ  ಮುಕ್ತಾಯದ ವೇಳೆಗೆ ತೆಲುಗು ಟೈಟಾನ್ಸ್ 23-11 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲಾರ್ಧ ಮುಕ್ತಾಯದ ವೇಳೆಗಾಗಲೇ ರಾಹುಲ್ ಚೌಧರಿ ಸೂಪರ್ 10 ಅಂಕ ಕಲೆ ಹಾಕಿದ್ದರು.

ದ್ವಿತಿಯಾರ್ಧದ ಆರಂಭದಿಂದಲೇ ಜೈಪುರ ಪಿಂಕ್ ಪ್ಯಾಂಥರ್ಸ್ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪವನ್ ಮಿಂಚಿನ ದಾಳಿಗೆ ತತ್ತರಿಸಿದ ತೆಲುಗು ಟೈಟಾನ್ಸ್ ದ್ವಿತಿಯಾರ್ಧದ 10ನೇ ನಿಮಿಷದಲ್ಲಿ ಆಲೌಟ್ ಆಯಿತು. ಆದರೂ ಟೈಟಾನ್ಸ್ ಪಡೆ 31-25 ಅಂಕಗಳ ಮುನ್ನಡೆ ಸಾಧಿಸಿತ್ತು. ಪಂದ್ಯ ಮುಕ್ತಾಯಕ್ಕೆ 2 ನಿಮಿಷಗಳಿದ್ದಾಗ ಟೈಟಾನ್ಸ್ 38-31 ಅಂಕಗಳಿಂದ ಮುಂದಿತ್ತು. ಅಂತಿಮವಾಗಿ ತೆಲುಗು ಟೈಟಾನ್ಸ್ 41-34 ಅಂತರದಿಂದ ಜಯಭೇರಿ ಬಾರಿಸಿತು.

ಟರ್ನಿಂಗ್ ಪಾಯಿಂಟ್

ಜಸ್ವೀರ್ ಸಿಂಗ್ ಹಾಗೂ ಮಂಜೀತ್ ಚಿಲ್ಲರ್ ನೀರಸ ಪ್ರದರ್ಶನ ಜೈಪುರಕ್ಕೆ ನುಂಗಲಾರದ ತುತ್ತಾಯಿತು. 17 ಅಂಕ ಕಲೆಹಾಕಿದ ರಾಹುಲ್ ಚೌಧರಿ ತೆಲುಗು ಟೈಟಾನ್ಸ್ ತಂಡದ ಗೆಲುವಿನ ರೂವಾರಿಯಾದರು.

ಶ್ರೇಷ್ಠ ರೈಡರ್: ರಾಹುಲ್ ಚೌಧರಿ& ಪವನ್ ಕುಮಾರ್(17 ಅಂಕ)

ಶ್ರೇಷ್ಠ ಡಿಫೆಂಡರ್: ವಿಶಾಲ್ ಭಾರಧ್ವಾಜ್

 

click me!