ಎಎಫ್'ಸಿ ಕಪ್: ಇಸ್ತಿಕ್ಲೋಲ್ ವಿರುದ್ಧ ಬೆಂಗಳೂರು ಎಫ್'ಸಿಗೆ ಸೋಲು

By Suvarna Web DeskFirst Published Sep 27, 2017, 9:17 PM IST
Highlights

ದ್ವಿತೀಯಾರ್ಧದಲ್ಲಿ ಬಿಎಫ್'ಸಿ ಹೆಚ್ಚು ಸಂಘಟಿತ ದಾಳಿ ಸಂಯೋಜಿಸಿತು. ಕೋಚ್ ಆಲ್ಬರ್ಟ್ ರೋಕಾ ಅವರು ಸಾಕಷ್ಟು ಸಬ್ಸ್'ಟಿಟ್ಯೂಷನ್ಸ್ ತಂದು ಆಟದ ರಣತಂತ್ರ ಬದಲಿಸುವ ಪ್ರಯತ್ನ ಮಾಡಿತು. ಈ ಮೂಲಕ ಬೆಂಗಳೂರು ಎಫ್'ಸಿ ಹೊಸ ಉತ್ಸಾಹದೊಂದಿಗೆ ಎರಡನೇ ಭಾಗದಲ್ಲಿ ದಾಳಿ ಮಾಡಿತು.

ತಜಿಕಿಸ್ತಾನ(ಸೆ. 27): ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ಎಎಫ್'ಸಿ ಕಪ್ ಇಂಟರ್'ಝೋನಲ್ ಫೈನಲ್'ನ ಮೊದಲ ಲೆಗ್ ಪಂದ್ಯದಲ್ಲಿ ಮುಗ್ಗರಿಸಿದೆ. ತಜಿಕಿಸ್ತಾನದ ಹಿಸೋರ್ ನಗರದಲ್ಲಿ ಇಂದು ನಡೆದ ಮೊದಲ ಲೆಗ್'ನಲ್ಲಿ ಇಸ್ತಿಕ್ಲೋಲ್ ತಂಡವು 1-0 ಗೋಲಿನಿಂದ ಬಿಎಫ್'ಸಿಯನ್ನು ಸೋಲಿಸಿದೆ. ತಕಿಸ್ತಾನದ ಹಾಲಿ ಲೀಗ್ ಚಾಂಪಿಯನ್ ಇಸ್ತಿಕ್ಲೋಲ್ ಈ ಪಂದ್ಯ ಗೆಲ್ಲಲು ಸಾಕಷ್ಟು ಹರಸಾಹಸ ಮಾಡಬೇಕಾಯಿತು. ಬೆಂಗಳೂರು ಎಫ್'ಸಿ ತಂಡ ಪಂದ್ಯದ ಆರಂಭದಿಂದಲೂ ನಿಯಂತ್ರಣ ಸಾಧಿಸಿತ್ತಾದರೂ ಗೋಲು ಗಳಿಸುವ ಅವಕಾಶಗಳನ್ನು ನಿರ್ಮಿಸಿಕೊಳ್ಳಲು ವಿಫಲವಾಯಿತು. ಬೆಂಗಳೂರಿಗರು ತಪ್ಪೆಸೆದಾಗೆಲ್ಲಾ ತಜಿಕಿಸ್ತಾನದ ಕ್ಲಬ್ ತಂಡವು ಸರಿಯಾಗಿ ತಿರುಗಿಬಿದ್ದು ಗೋಲು ಗಳಿಸುವ ಪ್ರಯತ್ನ ಮಾಡಿತು. ಬಿಎಫ್'ಸಿ ಪಡೆ ತನ್ನ ಎದುರಾಳಿಯ ಪ್ರತ್ಯಾಕ್ರಮಣ ತಂತ್ರದಿಂದ ಸ್ವಲ್ಪ ಕಂಗೆಟ್ಟಿತಾದರೂ ಹೆಚ್ಚು ಅಪಾಯವಾಗದಂತೆ ಎಚ್ಚರ ವಹಿಸಿತು. 27ನೇ ನಿಮಿಷದಲ್ಲಿ ಇಸ್ತಿಕ್ಲೋಲ್'ನ ಸ್ಟ್ರೈಕರ್ ಡಿಮಿಟ್ರಿ ಬಾರ್ಕೋವ್ ತಮ್ಮ ತಂಡಕ್ಕೆ ಮೊದಲ ಗೋಲಿನ ಮುನ್ನಡೆ ತಂದುಕೊಟ್ಟರು. ಬಿಎಫ್'ಸಿಯ ಡಿಫೆಂಡರ್'ಗಳು ಅಜಾಗರೂಕತೆಯಿಂದ ಇದ್ದದ್ದು ಇಸ್ತಿಕ್ಲೋಲ್ ಮುನ್ನಡೆಗೆ ಕಾರಣವಾಯಿತು. ಈ ಗೋಲಿನ ಬಳಿಕ ಬಿಎಫ್'ಸಿ ರಕ್ಷಣಾ ಪಡೆ ಇನ್ನಷ್ಟು ಕಂಗಾಲಾಯಿತು. ಆದರೆ, ಮತ್ಯಾವುದೇ ಅವಘಡವಾಗದಂತೆ ಮೊದಲಾರ್ಧ ಮುಗಿಸಿತು.

ದ್ವಿತೀಯಾರ್ಧದಲ್ಲಿ ಬಿಎಫ್'ಸಿ ಹೆಚ್ಚು ಸಂಘಟಿತ ದಾಳಿ ಸಂಯೋಜಿಸಿತು. ಕೋಚ್ ಆಲ್ಬರ್ಟ್ ರೋಕಾ ಅವರು ಸಾಕಷ್ಟು ಸಬ್ಸ್'ಟಿಟ್ಯೂಷನ್ಸ್ ತಂದು ಆಟದ ರಣತಂತ್ರ ಬದಲಿಸುವ ಪ್ರಯತ್ನ ಮಾಡಿತು. ಈ ಮೂಲಕ ಬೆಂಗಳೂರು ಎಫ್'ಸಿ ಹೊಸ ಉತ್ಸಾಹದೊಂದಿಗೆ ಎರಡನೇ ಭಾಗದಲ್ಲಿ ದಾಳಿ ಮಾಡಿತು. ಆದರೆ, ತಜಿಕಿಸ್ತಾನೀ ಚಾಂಪಿಯನ್ಸ್ ತಂಡದವರ ಡಿಫೆನ್ಸ್ ಬಹಳ ಗಟ್ಟಿಯಾಗಿತ್ತು. ಪಂದ್ಯದ ಕೊನೆಕೊನೆಯಲ್ಲಂತೂ ಬಿಎಫ್'ಸಿ ಆಟಗಾರರು ತಮ್ಮ ದಾಳಿಯ ತೀಕ್ಷ್ಣತೆಯನ್ನು ಹೆಚ್ಚಿಸಿದರೂ ಫಲ ಸಿಕ್ಕಲಿಲ್ಲ.

ಅ.18ರಂದು ಬೆಂಗಳೂರಲ್ಲಿ ಪಂದ್ಯ:
ಈ ಪಂದ್ಯವು ಇಂಟರ್'ಜೋನ್ ಫೈನಲ್ ಆಗಿದ್ದು, ಎರಡು ಲೆಗ್'ನಲ್ಲಿ ನಡೆಯುತ್ತದೆ. ಮುಂದಿನ ಲೆಗ್ ಅಕ್ಟೋಬರ್ 18ರಂದು ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡೂ ಲೆಗ್'ನಲ್ಲಿ ಬರುವ ಗೋಲುಗಳ ಆಧಾರದ ಮೇಲೆ ಗೆಲುವು ನಿರ್ಧಾರವಾಗಲಿದೆ. ಈ ಪಂದ್ಯದಲ್ಲಿ ಗೆದ್ದವರು ನವೆಂಬರ್ 4ರಂದು ಇರಾಕ್'ನ ಏರ್'ಫೋರ್ಸ್ ಕ್ಲಬ್ ವಿರುದ್ಧ ಎಎಫ್'ಸಿ ಕಪ್ ಪ್ರಶಸ್ತಿಗಾಗಿ ಸೆಣಸಲಾಡಲಿದ್ದಾರೆ. ಹೀಗಾಗಿ, ಬೆಂಗಳೂರು ಎಫ್'ಸಿ ಮತ್ತು ಇಸ್ತಿಕ್ಲೋಲ್ ಎಫ್'ಸಿ ನಡುವಿನ ಈ ಪಂದ್ಯವು ಎಎಫ್'ಸಿ ಕಪ್'ನ ಸೆಮಿಫೈನಲ್ ಎಂದೇ ಪರಿಗಣಿತವಾಗಿದೆ.

click me!