ಇಂದಿನಿಂದ ಪ್ರೊ ಕಬಡ್ಡಿ 7ನೇ ಆವೃತ್ತಿ ಆರಂಭ

By Web Desk  |  First Published Jul 20, 2019, 10:55 AM IST

7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಶನಿವಾರ ಹೈದರಾಬಾದ್‌ನಲ್ಲಿ ಚಾಲನೆ ಸಿಗಲಿದ್ದು, ಈ ಬಾರಿಯೂ ಟ್ರೋಫಿಗಾಗಿ 12 ತಂಡಗಳು ಸೆಣಸಲಿವೆ. ಈ ಆವೃತ್ತಿಯ ಕಬಡ್ಡಿಯ ವಿಶೇಷತೆಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.


ಹೈದರಾಬಾದ್[ಜು.20]: 2 ತಿಂಗಳು ಏಕದಿನ ಕ್ರಿಕೆಟ್ ವಿಶ್ವಕಪ್‌ನ ರಸದೌತಣ ಸವಿದ ಕ್ರೀಡಾಭಿಮಾನಿಗಳಿಗೆ ಮುಂದಿನ 3 ತಿಂಗಳ ಕಾಲ ಕಬಡ್ಡಿ ಮನರಂಜನೆ ಸಿಗಲಿದೆ. ಹವಾನಿಯಂತ್ರಿತ ಅಂಕಣದಲ್ಲಿ ನಡೆಯುವ 40 ನಿಮಿಷಗಳ ಸಮರ ಆಟಗಾರರನ್ನಷ್ಟೇ ಅಲ್ಲ, ನೋಡುಗರಲ್ಲೂ ಬೆವರಿಳಿಸಲಿದೆ. ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಚಾಂಪಿಯನ್ ಆಗಿ ಕೆಲವೇ ತಿಂಗಳುಗಳು ಆಗಿವೆ. ಅಷ್ಟರಲ್ಲಿ ಮತ್ತೊಂದು ಆವೃತ್ತಿ ಬಂದಿದೆ. 7ನೇ ಆವೃತ್ತಿಗೆ ಶನಿವಾರ ಹೈದರಾ ಬಾದ್‌ನಲ್ಲಿ ಚಾಲನೆ ಸಿಗಲಿದ್ದು, ಈ ಬಾರಿಯೂ ಟ್ರೋಫಿಗಾಗಿ 12 ತಂಡಗಳು ಸೆಣಸಲಿವೆ. ಅಕ್ಟೋಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ. 

7ನೇ ಆವೃತ್ತಿಯ ಕಬಡ್ಡಿಯ ಸಂಪೂರ್ಣ ವೇಳಾಪಟ್ಟಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ....

Tap to resize

Latest Videos

ಹೊಸದೇನಿದೆ? ಈ ಬಾರಿ ಕೆಲ ಪ್ರಮುಖ ಆಟಗಾರರು ಪ್ರತಿನಿಧಿಸುವ ತಂಡಗಳು ಬದಲಾಗಿವೆ. ಕಳೆದ ಆವೃತ್ತಿಯಲ್ಲಿ ಪ್ರೊ ಕಬಡ್ಡಿಗೆ ಪದಾರ್ಪಣೆ ಮಾಡಿ, ಚೊಚ್ಚಲ ಆವೃತ್ತಿಯಲ್ಲೇ 200 ಅಂಕ ಹೆಕ್ಕಿದ ಸಿದ್ಧಾರ್ಥ್ ದೇಸಾಯಿ, ಯು ಮುಂಬಾ ಬದಲು ಈ ಬಾರಿ ತೆಲುಗು ಟೈಟಾನ್ಸ್ ಪರ ಆಡಲಿದ್ದಾರೆ. ಇಷ್ಟು ಆವೃತ್ತಿಗಳಲ್ಲಿ ತೆಲುಗು ತಂಡದ ಪೋಸ್ಟರ್ ಬಾಯ್ ಆಗಿದ್ದ ರಾಹುಲ್ ಚೌಧರಿ, ಈ ವರ್ಷ ತಮಿಳ್ ತಲೈವಾಸ್ ಪರ ರೈಡ್ ಮಾಡಲಿದ್ದಾರೆ. ಈ ರೀತಿ ಹಲವು ಆಟಗಾರರು ಅದಲು ಬದಲಾಗಿದ್ದಾರೆ. ದೇಶದ ದಿಗ್ಗಜ ಕಬಡ್ಡಿ ಆಟಗಾರರಾದ ಅನೂಪ್ ಕುಮಾರ್ ಹಾಗೂ ರಾಕೇಶ್ ಕುಮಾರ್ ಮೊದಲ ಬಾರಿಗೆ ಕೋಚ್ ಆಗಿದ್ದಾರೆ. ಈ ಬಾರಿ ಕೆಲ ತಂಡಗಳ ನಾಯಕರು ಸಹ ಬದಲಾಗಿ ದ್ದಾರೆ. 6ನೇ ಆವೃತ್ತಿಯಲ್ಲಿ ನಾಯಕರಾಗಿದ್ದ ಬೆಂಗಳೂರಿನ ರೋಹಿತ್ ಕುಮಾರ್, ಪಾಟ್ನಾದ ಪ್ರದೀಪ್ ನರ್ವಾಲ್, ಯು ಮುಂಬಾದ ಫಜಲ್ ಅತ್ರಾಚೆಲಿ, ತಮಿಳ್ ತಲೈವಾಸ್‌ನ ಅಜಯ್ ಠಾಕೂರ್, ಡೆಲ್ಲಿಯ ಜೋಗಿಂದರ್ ನರ್ವಾಲ್, ಗುಜರಾತ್‌ನ ಸುನಿಲ್, ಜೈಪುರದ ದೀಪಕ್ ಹೂಡಾ ನಾಯಕತ್ವ ಉಳಿಸಿಕೊಂಡಿದ್ದಾರೆ. ಬೆಂಗಾಲ್‌ಗೆ ಮಣೀಂದರ್, ಪುಣೆಗೆ ಸುರ್ಜೀತ್, ಯು.ಪಿ.ಯೋಧಾಗೆ ನಿತೇಶ್, ಹರ್ಯಾಣಕ್ಕೆ ಧರ್ಮರಾಜ್, ಟೈಟಾನ್ಸ್‌ಗೆ ಅಬೋಜರ್ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ. 

ಲೇ ಪಂಗಾ: ಐನಾಕ್ಸ್‌ನಲ್ಲಿ ಪ್ರೊ ಕಬ್ಬಡ್ಡಿ ಲೈವ್‌ಗಿಲ್ಲ ಭಂಗ!

ಬದಲಾದ ಮಾದರಿ: ಪ್ರೊ ಕಬಡ್ಡಿಯಲ್ಲಿ ತಂಡಗಳ ಸಂಖ್ಯೆ 12ಕ್ಕೇರಿದ ಬಳಿಕ ತಂಡಗಳನ್ನು 2 ವಲಯಗಳನ್ನಾಗಿ ವಿಂಗಡಿಸಿ ಆಡಿಸಲಾಗುತ್ತಿತ್ತು. ಅಂತರ ವಲಯ, ಅಂತರ ವಲಯ ವೈಲ್ಡ್‌ಕಾರ್ಡ್ ಪಂದ್ಯಗಳನ್ನು ಆಡಿಸಲಾಗುತ್ತಿತ್ತು. ಈ ಮಾದರಿ ನೋಡುಗರಲ್ಲಿ ಗೊಂದಲ ಸೃಷ್ಟಿಸುತ್ತಿದ್ದ ಕಾರಣ, ಈ ಬಾರಿ ಮಾದರಿ ಬದಲಿಸಲಾಗಿದೆ. ಡಬಲ್ ರೌಂಡ್ ರಾಬಿನ್ ಎನ್ನುವ ಸರಳ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಪ್ರತಿ ತಂಡ ಲೀಗ್ ಹಂತದಲ್ಲಿ ಇನ್ನುಳಿದ 11 ತಂಡಗಳ ವಿರುದ್ಧ 2 ಬಾರಿ ಸೆಣಸಲಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ-ಆಫ್ ಪ್ರವೇಶಿಸಲಿವೆ. 

ಪ್ಲೇ-ಆಫ್ ಮಾದರಿ ಹೇಗೆ? ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಕ್ವಾಲಿಫೈಯರ್ 1ರಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. 3, 4ನೇ ಹಾಗೂ 5, 6ನೇ ಸ್ಥಾನಗಳನ್ನು ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯಗಳಲ್ಲಿ ಆಡಲಿವೆ. ಈ ಪಂದ್ಯಗಳಲ್ಲಿ ಸೋಲುವ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡಗಳು ಕ್ವಾಲಿಫೈಯರ್ 2 ಪಂದ್ಯದಲ್ಲಿ ಆಡಲಿವೆ. ಇದರಲ್ಲಿ ಸೋಲುವ ತಂಡ ಹೊರಬಿದ್ದರೆ, ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದ ವಿರುದ್ಧ 3ನೇ ಎಲಿಮಿನೇಟರ್‌ನಲ್ಲಿ ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೇರಲಿದೆ. 

ಡಿಫೆಂಡರ್‌ಗಳಿಗೆ ಹೆಚ್ಚಿನ ಬೇಡಿಕೆ! ಈ ಬಾರಿ 12 ತಂಡಗಳ ಪೈಕಿ 7 ತಂಡಗಳಿಗೆ ಡಿಫೆಂಡರ್'ಗಳು ನಾಯಕರಾಗಿದ್ದಾರೆ. ನಾಯಕರನ್ನು ಬದಲಿಸಿರುವ 5 ತಂಡಗಳ ಪೈಕಿ 4 ತಂಡಗಳು ಡಿಫೆಂಡರ್‌ಗಳಿಗೆ ಚುಕ್ಕಾಣಿ ನೀಡಿವೆ ಎನ್ನುವುದು ಗಮನಿಸಬೇಕಾದ ಅಂಶ.

ವರದಿ: ಸ್ಪಂದನ್ ಕಣಿಯಾರ್, ಕನ್ನಡಪ್ರಭ

click me!