
ಮುಂಬೈ(ಆ.18): 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಡಿಸೆಂಬರ್ 2ರಂದು ಚಾಲನೆ ಸಿಗಲಿದೆ. ಟೂರ್ನಿಯು ಹಳೆಯ ಮಾದರಿಗೆ ಮರಳಿದ್ದು, ಎಲ್ಲಾ 12 ತಂಡಗಳ ತವರಿನಲ್ಲಿ ಪಂದ್ಯಗಳು ನಡೆಯಲಿವೆ ಎಂದು ಆಯೋಜಕರು ಗುರುವಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 2021ರಲ್ಲಿ ಇಡೀ ಟೂರ್ನಿಯನ್ನು ಬೆಂಗಳೂರಿನ ಹೋಟೆಲ್‌ನಲ್ಲಿ ನಡೆಸಲಾಗಿತ್ತು.
ಇನ್ನು ಇದಾದ ಬಳಿಕ 2022ರಲ್ಲಿ ಬೆಂಗಳೂರು ಸೇರಿ 4 ನಗರಗಳಲ್ಲಿ ಪಂದ್ಯಗಳು ನಡೆದಿದ್ದವು. ಈ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 8 ಮತ್ತು 9ರಂದು ಮುಂಬೈನಲ್ಲಿ ನಡೆಯಲಿದ್ದು, ಆ ನಂತರ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಆರ್ಚರಿ ವಿಶ್ವಕಪ್: ಎರಡು ಕಂಚು ಜಯಿಸಿದ ಭಾರತ
ಪ್ಯಾರಿಸ್: ಆರ್ಚರಿ ವಿಶ್ವಕಪ್ 4ನೇ ಹಂತದ ಟೂರ್ನಿಯಲ್ಲಿ ಭಾರತ ಪುರುಷ ಹಾಗೂ ಮಹಿಳಾ ರೀಕರ್ವ್ ತಂಡಗಳು ಪದಕ ಗೆದ್ದಿವೆ. ಇಲ್ಲಿ ನಡೆಯುತ್ತಿರುವ ಕೂಟದಲ್ಲಿ ಗುರುವಾರ ಪುರುಷರ ತಂಡ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಅತನು ದಾಸ್, ಧೀರಜ್ ಬೊಮ್ಮದೇವರ ಹಾಗೂ ತುಷಾರ್ ಶೆಲ್ಕೆ ಅವರನ್ನೊಳಗೊಂಡ ತಂಡ ಸ್ಪೇನ್ ವಿರುದ್ಧ 6-2ರಿಂದ ಜಯಿಸಿತು. ಅಂಕಿತಾ ಭಕತ್, ಭಜನ್ ಕೌರ್, ಸಿಮ್ರನ್‌ಜೀತ್ ಕೌರ್ ಅವರನ್ನೊಳಗೊಂಡ ಮಹಿಳಾ ತಂಡ ಮೆಕ್ಸಿಕೋ ವಿರುದ್ಧ 5-4ರಿಂದ ಗೆದ್ದು ಕಂಚು ಪಡೆಯಿತು.
ಮಹಾರಾಜ ಟ್ರೋಫಿ: ಕನ್ನಡ ಬಳಸದ ಕೆಎಸ್‌ಸಿಎಗೆ ಪ್ರಾಧಿಕಾರ ನೋಟಿಸ್; 7 ದಿನದಲ್ಲಿ ಉತ್ತರಿಸಲು ಸೂಚನೆ
ಡುರಾಂಡ್ ಕಪ್: ಇಂದು ಬಿಎಫ್‌ಸಿ-ಕೇರಳ ಫೈಟ್
ಕೋಲ್ಕತಾ: ಪ್ರತಿಷ್ಠಿತ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ ಶುಕ್ರವಾರ ಬದ್ಧವೈರಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಲಿದೆ. ‘ಸಿ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಏರ್ ಫೋರ್ಸ್ ಎಫ್‌ಟಿ ತಂಡದ ವಿರುದ್ಧ 1-1 ಡ್ರಾಗೆ ತೃಪ್ತಪಟ್ಟಿದ್ದ ಬಿಎಫ್‌ಸಿ ಈ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ಅತ್ತ ಕೇರಳ ಕೂಡಾ ಮೊದಲ ಜಯಕ್ಕಾಗಿ ಕಾತರಿಸುತ್ತಿದೆ. ಕೇರಳ ಮೊದಲ ಪಂದ್ಯದಲ್ಲಿ ಗೋಕುಲಂ ಎಫ್‌ಸಿ ವಿರುದ್ಧ 3-4ರಿಂದ ಸೋತಿತ್ತು.
ಹಾಕಿ ಫೈವ್ಸ್: ರಾಜ್ಯದ ರಾಹೀಲ್ ಉಪನಾಯಕ
ನವದೆಹಲಿ: ಆ.29ರಿಂದ ಸೆ.2 ರವರೆಗೆ ಒಮಾನ್‌ನಲ್ಲಿ ನಡೆಯಲಿರುವ ಏಷ್ಯನ್ ಹಾಕಿ ಫೈವ್ಸ್ ವಿಶ್ವಕಪ್ ಅರ್ಹತಾ ಟೂರ್ನಿಗೆ ಭಾರತ ತಂಡ ಆಯ್ಕೆಯಾಗಿದ್ದು, ಕರ್ನಾಟಕದ ಮೊಹಮದ್ ರಾಹೀಲ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಮಂದೀಪ್ ಮೋರ್ 9 ಮಂದಿಯ ತಂಡದ ನಾಯಕತ್ವ ವಹಿಸಲಿದ್ದಾರೆ. ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಸೇರಿ ಒಟ್ಟು 11 ತಂಡಗಳು ಪಾಲ್ಗೊಳ್ಳಲಿದ್ದು, ಅಗ್ರ 3 ತಂಡಗಳಿಗೆ 2024ರಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ವಿಶ್ವಕಪ್‌ಗೆ ಅರ್ಹತೆ ಸಿಗಲಿದೆ.
Chess World Cup 2023: ಐತಿಹಾಸಿಕ ಸೆಮೀಸ್‌ಗೆ ಲಗ್ಗೆ ಇಟ್ಟ ಪ್ರಜ್ಞಾನಂದ!
ವಿಶ್ವ ಅಥ್ಲೆಟಿಕ್ಸ್: ವೀಸಾಗೆ ಕಿಶೋರ್ ಜೆನಾ ಪರದಾಟ
ನವದೆಹಲಿ: ಭಾರತದ ಜಾವೆಲಿನ್ ಪಟು ಕಿಶೋರ್ ಜೆನಾ ಅವರ 1 ತಿಂಗಳ ವೀಸಾವನ್ನು ಹಂಗೇರಿ ದೂತಾವಾಸ ಕಚೇರಿ ರದ್ದುಗೊಳಿಸಿದ ಬಳಿಕವೂ, ಕಿಶೋರ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ ಬಳಿಕ ಕಿಶೋರ್‌ಗೆ ಶುಕ್ರವಾರ ಮತ್ತೊಮ್ಮೆ ವೀಸಾ ಸಂದರ್ಶನಕ್ಕೆ ಬರುವಂತೆ ತಿಳಿಸಿದೆ. ದೂಬುಡಾಪೆಸ್ಟ್‌ನಲ್ಲಿ ಶನಿವಾರದಿಂದ ಕೂಟ ಆರಂಭಗೊಳ್ಳಲಿದ್ದು, ಪುರುಷರ ಜಾವೆಲಿನ್ ಸ್ಪರ್ಧೆ ಆ.25ಕ್ಕೆ ನಡೆಯಲಿದೆ.
ಈಜು: ರಾಜ್ಯದಿಂದ ಮತ್ತೆ ಎರಡು ರಾಷ್ಟ್ರೀಯ ದಾಖಲೆ
ಭುವನೇಶ್ವರ: 39ನೇ ಸಬ್ ಜೂನಿಯರ್ ಹಾಗೂ 49ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಈಜುಪಟುಗಳ ಅಬ್ಬರ ಮುಂದುವರಿದಿದ್ದು, 2ನೇ ದಿನವಾದ ಗುರುವಾರ 2 ರಾಷ್ಟ್ರೀಯ ದಾಖಲೆ ಜೊತೆ 7 ಚಿನ್ನ ಸೇರಿದಂತೆ 18 ಪದಕ ಬಾಚಿಕೊಂಡಿದ್ದಾರೆ.
ಬಾಲಕಿಯರ ಗುಂಪು 2ರ 100 ಮೀ. ಫ್ರೀಸ್ಟೈಲ್‌ನಲ್ಲಿ ಧಿನಿಧಿ ದೇಸಿಂಘು 57.67 ಸೆಕೆಂಡ್‌ಗಳಲ್ಲಿ ಕ್ರಮಿಸಿ, ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು. ಬಾಲಕರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಇಶಾನ್ ಮೆಹ್ರಾ 1 ನಿಮಿಷ 00.64 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬಂಗಾರ ಜಯಿಸಿದರು. ಇದೇ ವೇಳೆ ಬಾಲಕರ 50 ಮೀ. ಬಟರ್‌ಫ್ಲೈನಲ್ಲಿ ಹರಿಕಾರ್ತಿಕ್ ವೇಲು, 100 ಮೀ. ಫ್ರೀಸ್ಟೈಲ್‌ನಲ್ಲಿ ಜಾಸ್ ಸಿಂಗ್ ಚಿನ್ನ ಗೆದ್ದರು. ಬಾಲಕಿಯರ 100 ಮೀ. ಫ್ರೀಸ್ಟೈಲ್‌ನಲ್ಲಿ ರುಜುಲಾ, 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಲಕ್ಷ್ಯ, 200 ಮೀ. ಫ್ರೀಸ್ಟೈಲ್‌ನಲ್ಲಿ ತಾನ್ಯಾ ಷಡಕ್ಷರಿ ಚಿನ್ನದ ಪದಕ ಜಯಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.