ರೇಡಿಂಗ್ ಹಾಗೂ ಡಿಫೆಂಡಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಯು ಮುಂಬಾ ಅನಾಯಾಸವಾಗಿ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕೋಲ್ಕತಾ[ಸೆ.10]: ಅರ್ಜುನ್ ದೇಶ್ವಾಲ್ ಸೂಪರ್ 10 ಅಂಕಗಳ ನೆರವಿನಿಂದ ಯು ಮುಂಬಾ ತಂಡವು 41-27 ಅಂಕಗಳಿಂದ ತೆಲುಗು ಟೈಟಾನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಏಳನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ಯು.ಪಿ. ಯೋಧ ತಂಡವನ್ನು ಹಿಂದಿಕ್ಕಿ ಯು ಮುಂಬಾ 5ನೇ ಸ್ಥಾನಕ್ಕೇರಿದೆ.
ಪ್ರೊ ಕಬಡ್ಡಿಯಲ್ಲಿ ಪ್ರದೀಪ್ 1000 ಅಂಕ!
ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧ ರೋಚಕತೆಯಿಂದ ಕೂಡಿತ್ತು. ಮೊದಲ ರೇಡ್’ನಲ್ಲೇ ಯು ಮುಂಬಾದ ಅರ್ಜುನ್ ದೇಶ್ವಾಲ್ 2 ಅಂಕ ಹೆಕ್ಕುವ ಮೂಲಕ ಅಂಕದ ಖಾತೆ ತೆರೆದರು. ಇದರ ಬೆನ್ನಲ್ಲೇ ಸಿದ್ದಾರ್ಥ್ ಅವರನ್ನು ಟ್ಯಾಕಲ್ ಮಾಡವ ಮೂಲಕ ಯು ಮುಂಬಾ 3-0 ಮುನ್ನಡೆ ಗಳಿಸಿತು. ಟೈಟಾನ್ಸ್ ಪರ ರಾಕೇಶ್ ಗೌಡ ಮೊದಲ ಅಂಕ ತಂದಿತ್ತರು. ಮೂರನೇ ನಿಮಿಷದಲ್ಲಿ 3-3, ಎಂಟನೇ ನಿಮಿಷದಲ್ಲಿ 6-6, 10ನೇ ನಿಮಿಷದಲ್ಲಿ ಉಭಯ ತಂಡಗಳು 7-7ರ ಸಮಬಲ ಸಾಧಿಸಿದ್ದವು. ಇನ್ನು 13ನೇ ನಿಮಿಷದಲ್ಲಿ ರೋಹಿತ್ ಬುಲಿಯಾನ್’ರನ್ನು ಆಲೌಟ್ ಮಾಡಿದ ಟೈಟಾನ್ಸ್ 13-9 ಅಂಕಗಳ ಮುನ್ನಡೆ ಸಾಧಿಸಿತು. ಆದರೆ ಮತ್ತೆ ಕಮ್ ಬ್ಯಾಕ್ ಮಾಡಿದ ಮುಂಬಾ ಮೊದಲಾರ್ಧ ಮುಕ್ತಾಯದ ವೇಳೆಗೆ 15-15 ಅಂಕಗಳ ಸಮಬಲ ಸಾಧಿಸುವಂತೆ ಮಾಡುವಲ್ಲಿ ಸಫಲವಾಯಿತು.
ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!
ಮೊದಲಾರ್ಧದಲ್ಲಿ ಕಂಡುಬಂದ ಜಿದ್ದಾಜಿದ್ದಿನ ಹೋರಾಟ, ದ್ವಿತಿಯಾರ್ಧದಲ್ಲೂ ಮುಂದುವರೆಯಬಹುದು ಎನ್ನುವ ನಿರೀಕ್ಷೆ ಹುಸಿಯಾಯಿತು. ದ್ವಿತಿಯಾರ್ಧದ ಎರಡನೇ ನಿಮಿಷದಲ್ಲೇ ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿದ ಯು ಮುಂಬಾ ಹಿಂತಿರುಗಿ ನೋಡಲೇ ಇಲ್ಲ. ಫಜಲ್ ಅಟ್ರಾಚಲಿ ಹಾಗೂ ಸಂದೀಪ್ ನರ್ವಾಲ್ ಅದ್ಭುತ ಟ್ಯಾಕಲ್’ಗಳಿಗೆ ಟೈಟಾನ್ಸ್ ಪಡೆ ತಬ್ಬಿಬ್ಬಾಗಿ ಹೋಯಿತು. ಇನ್ನು ರೇಡಿಂಗ್’ನಲ್ಲಿ ಅರ್ಜುನ್ ದೇಶ್ವಾಲ್ ತಂಡಕ್ಕೆ ಅಂಕ ತಂದುಕೊಡುವಲ್ಲಿ ಸಫಲರಾದರು. ಒಟ್ಟಾರೆ ದ್ವಿತಿಯಾರ್ಧದಲ್ಲಿ ಮೂರು ಬಾರಿ ಆಲೌಟ್ ಆಗುವ ಮೂಲಕ ಟೈಟಾನ್ಸ್ ತಂಡವು ಅನಾಯಾಸವಾಗಿ ಮುಂಬಾಗೆ ಶರಣಾಯಿತು.