ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಕಬಡ್ಡಿ ಪಟು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ 5 ಆವೃತ್ತಿಗಳಲ್ಲಿ ರೈಡರ್ ಆಗಿದ್ದ ಕಾಶಿಲಿಂಗ್ ಅಡಕೆ ಇದೀಗ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾರೆ.
ಅಹಮ್ಮದಾಬಾದ್(ನ.20): ಪದೇ ಪದೆ ಗಾಯದ ಸಮಸ್ಯೆ, ಕಳಪೆ ಪ್ರದರ್ಶನ... ಪರಿಣಾಮ ಆಟಗಾರರ ಹರಾಜಿನ ವೇಳೆ ಕಳೆದೆಲ್ಲಾ ಆವೃತ್ತಿಗಳಿಗೆ ಹೋಲಿಕೆ ಮಾಡಿದರೆ, ಸಾಧಾರಣ ಮೊತ್ತಕ್ಕೆ ಬಿಕರಿ. ಇದನ್ನೇ ಸವಾಲಾಗಿ ಸ್ವೀಕರಿಸಿದ ಕಾಶಿಲಿಂಗ್ ಅಡಕೆ, ತಮ್ಮಲ್ಲಿ ಇನ್ನೂ ಕಬಡ್ಡಿ ಆಟ ಬಾಕಿ ಇದೆ ಎಂದು ಈ ಆವೃತ್ತಿಯಲ್ಲಿ ಸಾಬೀತು ಪಡಿಸಿದ್ದಾರೆ. ತಾರಾ ರೈಡರ್ ಆಗಿ ಪ್ರೊ ಕಬಡ್ಡಿಯನ್ನು ಆಳಿದ್ದ ಕಾಶಿ, ಈ ಬಾರಿ ಸಹಾಯಕ ರೈಡರ್ ಆಗಿ ಬುಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಬ್ಬ ಅಪ್ಪಟ ಆಲ್ರೌಂಡರ್ ಆಗಿ ರೂಪುಗೊಳ್ಳುವತ್ತ ಮೊದಲ ಹೆಜ್ಜೆ ಇರಿಸಿದ್ದಾರೆ. ಕಾಶಿ ಮಟ್ಟಿಗೆ 6ನೇ ಆವೃತ್ತಿಯ ಪ್ರೊ ಕಬಡ್ಡಿ ಪುರ್ನಜನ್ಮವಿದ್ದಂತೆ.
ಹೊಸ ಜವಾಬಾರಿ: ಮೊದಲ 4 ಆವೃತ್ತಿಗಳಲ್ಲಿ ದಬಾಂಗ್ ಡೆಲ್ಲಿ ಪರ ಆಡಿದ್ದ ಕಾಶಿ, ಕಳೆದ ಆವೃತ್ತಿಯಲ್ಲಿ ಯು ಮುಂಬಾ ತಂಡದಲ್ಲಿದ್ದರು. ಐದೂ ಆವೃತ್ತಿಗಳಲ್ಲಿ ಕಾಶಿ ತಮ್ಮ ತಂಡದ ಮೊದಲ ಆಯ್ಕೆಯ ರೈಡರ್. ಆದರೆ ಈ ಬಾರಿ ಬೆಂಗಳೂರು ಬುಲ್ಸ್ ಪಾಳಯದಲ್ಲಿರುವ ಅವರನ್ನು ತಂಡ ಹೊಸ ಅವತಾರದಲ್ಲಿ ತೋರಿಸುತ್ತಿದೆ.
2ನೇ ಆವೃತ್ತಿಯಲ್ಲಿ 114 ರೈಡಿಂಗ್ ಅಂಕಗಳಿಸುವ ಮೂಲಕ ಅತ್ಯುತ್ತಮ ರೈಡರ್ ಎಂಬ ಕೀರ್ತಿಗೆ ಪಾತ್ರರಾಗಿದ್ದ ಕಾಶಿ, ನಂತರದ ಆವೃತ್ತಿಗಳಲ್ಲಿ ಅಂಕ ಗಳಿಸಲು ಹೋರಾಟ ನಡೆಸಿದರು. ಗಾಯದ ಸಮಸ್ಯೆ ಅವರನ್ನು ಬಹುವಾಗಿ ಕಾಡಿತು. ಬೇಡಿಕೆ ಸಹ ಕಡಿಮೆಯಾಯಿತು. 5ನೇ ಆವೃತ್ತಿಯಲ್ಲಿ .48 ಲಕ್ಷಕ್ಕೆ ಬಿಕರಿಯಾಗಿದ್ದ ಕಾಶಿಗೆ, ಈ ಆವೃತ್ತಿಯಲ್ಲಿ ಲಭಿಸಿದ್ದು ಕೇವಲ .32 ಲಕ್ಷ.ಇದನ್ನೇ ಸವಾಲಾಗಿ ಸ್ವೀಕರಿಸಿದ ಕಾಶಿ, ತಮ್ಮ ಆಟದ ಶೈಲಿಯನ್ನೇ ಬದಲಿಸಿದರು. ತಾನೊಬ್ಬ ರೈಡರ್ ಆಗಿ ಉಳಿದರೆ ಮಾತ್ರ ಸಾಲದು ಅದರ ಜತೆಗೆ ಡಿಫೆನ್ಸ್‌ನಲ್ಲೂ ಪಳಗಬೇಕು. ಆಲೌಂಡ್ರರ್ ಆಗಬೇಕು ಎಂದು ನಿರ್ಧರಿಸಿದರು. ಇದಕ್ಕೆ ನೀರೆರದವರು ಬುಲ್ಸ್ ತಂಡದ ಸಹಾಯಕ ಕೋಚ್ ಬಿ.ಸಿ.ರಮೇಶ್.
ಬುಲ್ಸ್ ಲೆಕ್ಕಾಚಾರ ಪಕ್ಕಾ!: ಈ ಆವೃತ್ತಿಯಲ್ಲಿ ಬುಲ್ಸ್ ಹೊಸ ಹೊಸ ತಂತ್ರಗಳಿಗೆ ಮುಂದಾಗುತ್ತಿದೆ. 3ನೇ ರೈಡರ್ ಆಗಿ ಕಾಶಿಯನ್ನು ಬಳಸಿಕೊಳ್ಳುವುದು ತಂಡದ ಲೆಕ್ಕಾಚಾರ. ಅಬ್ಬಾಬ್ಬ ಎಂದರೆ ಕಾಶಿಗೆ ಮೂರು ನಿಮಿಷಕ್ಕೊಮ್ಮೆ ರೈಡಿಂಗ್‌ಗೆ ಅವಕಾಶ ಸಿಕ್ಕರೆ ಹೆಚ್ಚು. ಕಳೆದ ಆವೃತ್ತಿಗಳಲ್ಲಿ, ಅಭ್ಯಾಸ ಶಿಬಿರದ ವೇಳೆ ಕಾಶಿ ಟ್ಯಾಕಲ್ ಮಾಡುವಾಗ ಅವರಲ್ಲಿನ ಕೌಶಲ್ಯ ಗುರುತಿಸಿದ್ದ ಕೋಚ್ ರಮೇಶ್, ಕಾಶಿಗೆ ಹೊಸ ಜವಾಬ್ದಾರಿಕೊಡಲು ನಿರ್ಧರಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ರಮೇಶ್, ‘ಟ್ಯಾಕಲ್ ಮಾಡುವಾಗ ಇರಾನ್ ಆಟಗಾರರು ಬಳಸುವ ತಂತ್ರವನ್ನೇ ಕಾಶಿ ಬಳಸುವುದನ್ನು ಗಮನಿಸಿದ್ದೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ, ರಕ್ಷಣಾ ವಿಭಾಗದಲ್ಲೂ ಆತ ಮಿಂಚಬಲ್ಲ ಎಂಬುದು ನನಗೆ ಮನದಟ್ಟಾಗಿತ್ತು’ ಎಂದರು. ಕಾಶಿ ಈ ಆವೃತ್ತಿಯಲ್ಲಿ 45 ರೈಡಿಂಗ್ ಅಂಕಗಳ ಜತೆ 13 ಟ್ಯಾಕಲ್ ಅಂಕ ಸಹ ಗಳಿಸಿ, ಆಲ್ರೌಂಡರ್‌ಗಳ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಕೋಚ್ ಸಲಹೆಯಿಂದ ಯಶಸ್ಸು: ಹೊಸ ಹೊಸ ಪಟ್ಟುಗಳ ಮೂಲಕ ಈ ಬಾರಿ ಎಲ್ಲರ ಗಮನ ಸೆಳೆಯುತ್ತಿರುವ ಕಾಶಿಲಿಂಗ್, ತಮ್ಮ ನೂತನ ಅನುಭವ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡುತ್ತಾ, ‘ತಂಡದಲ್ಲಿ ಈ ಬಾರಿ ರೈಡಿಂಗ್‌ಗೆ ಅವಕಾಶಗಳು ಕಡಿಮೆಯಿದೆ. ಆದಕಾರಣ ನೀನು ರೈಡಿಂಗ್ ಜತೆಜತೆಗೆ ಡಿಫೆನ್ಸ್ ಕಡೆಗೂ ಹೆಚ್ಚು ಗಮನ ಹರಿಸಬೇಕು ಎಂದು ಕೋಚ್ ನನಗೆ ಆವೃತ್ತಿ ಆರಂಭಕ್ಕೂ ಮೊದಲೇ ತಿಳಿಸಿದ್ದರು. ಕಳೆದ ಆವೃತ್ತಿಯ ಕಹಿ ಅನುಭವವನ್ನು ಮರೆಯಲು ಇದು ಸೂಕ್ತ ಎಂದು ನನಗೂ ಅನಿಸಿತು. ಒಪ್ಪಿಗೆ ಸೂಚಿಸಿದೆ, ಅದಕ್ಕೆ ತಕ್ಕ ಫಲ ಸಿಗುತ್ತಿದೆ’ ಎಂದರು.
ಇರಾನ್ ಡಿಫೆಂಡರ್‌ಗಳಲ್ಲಿ ಇರುವ ಕೌಶಲ್ಯ ಕಾಶಿಯಲ್ಲೂ ಇರುವುದನ್ನು ಗಮನಿಸಿದ್ದೆ. ಈ ಬಾರಿ ರೈಡಿಂಗ್‌ನಲ್ಲಿ ಅವಕಾಶ ಕಡಿಮೆಯಿದ್ದ ಕಾರಣ, ಆಲ್ರೌಂಡರ್ ಪಾತ್ರ ನಿಭಾಯಿಸುವಂತೆ ಅವರಿಗೆ ಸೂಚಿಸಿದ್ದೆ. ಕಾಶಿ ತಂಡದ ನಿರೀಕ್ಷೆ ಉಳಿಸಿಕೊಳ್ಳುತ್ತಿದ್ದಾರೆ. ಎಂದು ಬೆಂಗಳೂರು ಬುಲ್ಸ್ ಸಹಾಯಕ ಕೋಚ್ ಬಿ.ಸಿ.ರಮೇಶ್ ಹೇಳಿದ್ದಾರೆ.
ವಿನಯ್ ಕುಮಾರ್ ಡಿ.ಬಿ.