ರಣಜಿ ಟ್ರೋಫಿ: ಬೆಳಗಾವಿಯಲ್ಲಿ ಕರ್ನಾಟಕ- ಮುಂಬೈ ರಣಜಿ ಪಂದ್ಯ!

By Web DeskFirst Published Nov 20, 2018, 9:23 AM IST
Highlights

ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಕರ್ನಾಟಕ ಹಾಗೂ ಮುಂಬೈ ಇದೀಗ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.  ಕರ್ನಾಟಕದ ಸ್ಟಾರ್ ಆಟಗಾರರು ಟೀಂ ಇಂಡಿಯಾ ಹಾಗೂ ಭಾರತ ಎ ಪರ ಆಡುತ್ತಿರುವುದರಿಂದ ಪ್ಲೇಯಿಂಗ್ ಇಲೆವೆನ್ ಆಯ್ಕೆ ತಲೆನೋವಾಗಿದೆ.
 

ಬೆಳಗಾವಿ(ನ.20): ಮಾಜಿ ಚಾಂಪಿಯನ್‌ಗಳಾದ ಕರ್ನಾಟಕ ಹಾಗೂ ಮುಂಬೈ, 2018-19ರ ರಣಜಿ ಟ್ರೋಫಿಯಲ್ಲಿ ಮೊದಲ ಬಾರಿಗೆ ಗೆಲುವಿನ ಸಿಹಿ ಸವಿಯಲು ಕಾಯುತ್ತಿವೆ. ಮಂಗಳವಾರದಿಂದ ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಬಲಿಷ್ಠ ತಂಡಗಳು ಮುಖಾಮುಖಿಯಾಗಲಿದ್ದು, ಪಂದ್ಯ ಭಾರೀ ನಿರೀಕ್ಷೆ ಹುಟ್ಟಿಹಾಕಿದೆ.

ಉಭಯ ತಂಡಗಳು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದವು. ಕರ್ನಾಟಕ ನಾಗ್ಪುರದಲ್ಲಿ ನಡೆದ ವಿದರ್ಭ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಮುಂಬೈ ತಂಡ ರೈಲ್ವೇಸ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಆದರೆ ಎರಡೂ ತಂಡಗಳು ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದ ಮೇಲೆ 3 ಅಂಕ ಗಳಿಸಿದ್ದವು. ಅಂಕಪಟ್ಟಿಯಲ್ಲಿ ಮುಂಬೈ ಹಾಗೂ ಕರ್ನಾಟಕ ಕ್ರಮವಾಗಿ 5 ಹಾಗೂ 6ನೇ ಸ್ಥಾನದಲ್ಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಮೇಲೇಳಲು ಎದುರು ನೋಡುತ್ತಿವೆ.

ರಾಜ್ಯಕ್ಕಿಲ್ಲ ತಾರೆಯರ ಬಲ: ಕಳೆದ ಕೆಲ ಋುತುಗಳಲ್ಲಿ ತನ್ನ ಬ್ಯಾಟಿಂಗ್‌ ಪಡೆಯಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಕರ್ನಾಟಕ ತಂಡದಲ್ಲೀಗ ಭಾರೀ ಬದಲಾವಣೆಯಾಗಿದೆ. ಬಲಿಷ್ಠ ಮುಂಬೈ ತಂಡವನ್ನು ಎದುರಿಸಲು ರಾಜ್ಯ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಎದುರಾಗಿದೆ. ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಭಾರತ ‘ಎ’ ತಂಡದಲ್ಲಿ ರಾಜ್ಯದ ಮಯಾಂಕ್‌ ಅಗರ್‌ವಾಲ್‌, ಕರುಣ್‌ ನಾಯರ್‌, ಆರ್‌.ಸಮಥ್‌ರ್‍, ಕೆ.ಗೌತಮ್‌ ಸ್ಥಾನ ಪಡೆದಿದ್ದಾರೆ. ಕೆ.ಎಲ್‌.ರಾಹುಲ್‌ ಹಾಗೂ ಮನೀಶ್‌ ಪಾಂಡೆ ಆಸ್ಪ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಆಡಲು ಭಾರತ ತಂಡದೊಂದಿಗಿದ್ದಾರೆ. ಹೀಗಾಗಿ 6 ಪ್ರಮುಖ ಆಟಗಾರರಿಲ್ಲದೆ ಕರ್ನಾಟಕ, ಈ ಪಂದ್ಯವನ್ನು ಆಡಬೇಕಿದೆ. ವಿದರ್ಭ ವಿರುದ್ಧ ಯುವ ಬ್ಯಾಟ್ಸ್‌ಮನ್‌ಗಳಾದ ಡಿ.ನಿಶ್ಚಲ್‌ ಹಾಗೂ ಬಿ.ಆರ್‌.ಶರತ್‌ ಶತಕ ಬಾರಿಸಿ ಭರವಸೆ ಮೂಡಿಸಿದ್ದರೂ, ಸ್ಥಿರತೆ ಕಾಯ್ದುಕೊಳ್ಳಬೇಕಾದ ಒತ್ತಡ ಅವರ ಮೇಲಿದೆ.

ಬ್ಯಾಟಿಂಗ್‌ಗೆ ಹೋಲಿಸಿದರೆ ಬೌಲಿಂಗ್‌ ಪಡೆ ಸದೃಢವಾಗಿದೆ. ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಪ್ರಸಿದ್‌್ಧ ಕೃಷ್ಣ ವೇಗಿಗಳಾಗಿ ಕಣಕ್ಕಿಳಿದರೆ ಸ್ಟುವರ್ಟ್‌ ಬಿನ್ನಿ ಆಲ್ರೌಂಡರ್‌ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೇಯಸ್‌ ಗೋಪಾಲ್‌ ಹಾಗೂ ಜೆ.ಸುಚಿತ್‌ ಸ್ಪಿನ್‌ ಬಲ ತಂಡಕ್ಕೆ ದೊರೆಯಲಿದೆ.

ಮುಂಬೈ ತಂಡದಲ್ಲೂ ಸ್ಟಾರ್‌ಗಳಿಲ್ಲ!: ಕರ್ನಾಟಕ ತಂಡದಂತೆ ಮುಂಬೈ ಸಹ ತನ್ನ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಈ ಪಂದ್ಯಕ್ಕೆ ಕಾಲಿಡಲಿದೆ. ಪೃಥ್ವಿ ಶಾ, ರೋಹಿತ್‌ ಶರ್ಮಾ, ಅಜಿಂಕ್ಯ ರಹಾನೆ ರಾಷ್ಟ್ರೀಯ ತಂಡದಲ್ಲಿದ್ದಾರೆ. ಹೀಗಾಗಿ ಆಪದ್ಭಾಂದವ ಸಿದ್ದೇಶ್‌ ಲಾಡ್‌ ಮೇಲೆ ಭಾರೀ ನಿರೀಕ್ಷೆ ಇದೆ. ಇವರ ಜತೆ ಅಖಿಲ್‌ ಹೆರ್ವಾಡ್‌ಕರ್‌, ಸೂರ್ಯಕುಮಾರ್‌ ಯಾದವ್‌, ಜೇ ಬಿಸ್ತಾ ಹಾಗೂ ಮಾಜಿ ನಾಯಕ ಆದಿತ್ಯ ತರೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಬೇಕಿದೆ. ವೇಗಿ ಧವಳ್‌ ಕುಲ್ಕರ್ಣಿ ತಂಡವನ್ನು ಮುನ್ನಡೆಸಲಿದ್ದಾರೆ. ಬೌಲಿಂಗ್‌ನಲ್ಲಿ ಕುಲ್ಕರ್ಣಿಗೆ ವೇಗಿ ತುಷಾರ್‌ ದೇಶಪಾಂಡೆ, ಸ್ಪಿನ್ನರ್‌ಗಳಾದ ಕಷ್‌ರ್‍ ಕೊಠಾರಿ ಹಾಗೂ ಶಮ್ಸ್‌ ಮುಲಾನಿ ಬೆಂಬಲ ನೀಡಲಿದ್ದಾರೆ.

ಕರ್ನಾಟಕ ಹಾಗೂ ಮುಂಬೈ ಈ ಹಿಂದೆ ಅನೇಕ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದ್ದು, ಬೆಳಗಾವಿ ಅಭಿಮಾನಿಗಳು ಮತ್ತೊಂದು ಸ್ಮರಣೀಯ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಋುತುವಿನಲ್ಲಿ ತವರಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ವಿನಯ್‌ ಪಡೆ, ಗೆಲುವಿನ ಆರಂಭ ಪಡೆಯಲು ಕಾತರಿಸುತ್ತಿದೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ಸ್ಥಳ: ಕೆಎಸ್‌ಸಿಎ ಕ್ರೀಡಾಂಗಣ, ಬೆಳಗಾವಿ

ಪಿಚ್‌ ರಿಪೋರ್ಟ್‌
ಬೆಳಗಾವಿಯ ಕೆಎಸ್‌ಸಿಎ ಮೈದಾನದ ಪಿಚ್‌ ಸ್ಪರ್ಧಾತ್ಮಕ ಪಿಚ್‌ ಆಗಿದ್ದು ಬ್ಯಾಟ್ಸ್‌ಮನ್‌ ಹಾಗೂ ಬೌಲರ್‌ಗಳಿಗೆ ಸಮನಾದ ನೆರವು ದೊರೆಯಲಿದೆ. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳ ಪಾತ್ರ ಮಹತ್ವದೆನಿಸಲಿದ್ದು, ಉತ್ತಮ ಮೊತ್ತ ನಿರೀಕ್ಷೆ ಮಾಡಬಹುದು ಎಂದು ಕೆಎಸ್‌ಸಿಎ ಕ್ಯುರೇಟರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕೆಎಸ್‌ಸಿಎ ಮೈದಾನದಲ್ಲಿ ರಾಜ್ಯಕ್ಕೆ ಮೊದಲ ಪಂದ್ಯ
ಬೆಳಗಾವಿಯ ಆಟೋ ನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿ ಕರ್ನಾಟಕ ತಂಡಕ್ಕಿದು ಮೊದಲ ಪಂದ್ಯ. ಈ ಮೊದಲು ಇಲ್ಲಿ ಗುಜರಾತ್‌ ಹಾಗೂ ತಮಿಳುನಾಡು, ಗುಜರಾತ್‌ ಹಾಗೂ ಪಂಜಾಬ್‌ ನಡುವಿನ ಪಂದ್ಯಗಳು ನಡೆದಿದ್ದವು. ಗುಜರಾತ್‌ ತಂಡದ ಪ್ರಿಯಾಂಕ್‌ ಪಾಂಚಾಲ್‌, ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ತ್ರಿಶತಕ ಬಾರಿಸಿದ್ದು ಇಲ್ಲಿ ಈವರೆಗೂ ದಾಖಲಾಗಿರುವ ಶ್ರೇಷ್ಠ ವೈಯಕ್ತಿಕ ಮೊತ್ತ. ಕೆಲ ಮಹಿಳಾ ಪಂದ್ಯಗಳಿಗೂ ಈ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಕೆಎಸ್‌ಸಿಎ ಕ್ರೀಡಾಂಗಣ ನಿರ್ಮಾಣಗೊಳ್ಳುವ ಮೊದಲು ಬೆಳಗಾವಿಯ ಯೂನಿಯನ್‌ ಜಿಮ್ಖಾನ ಮೈದಾನ 2 ರಣಜಿ ಪಂದ್ಯಗಳಿಗೆ ಆತಿಥ್ಯ ನೀಡಿತ್ತು. 1970, 2000ರಲ್ಲಿ ಕರ್ನಾಟಕ-ಆಂಧ್ರ ಪ್ರದೇಶ ತಂಡಗಳು ಮುಖಾಮುಖಿಯಾಗಿದ್ದವು

click me!