ಪ್ರೋ ಕಬಡ್ಡಿ 2018: ಬುಲ್ಸ್‌ ರೈಡ್‌ಗೆ ಬೆಂಡಾದ ತಲೈವಾಸ್‌!

By Web DeskFirst Published Oct 18, 2018, 10:49 AM IST
Highlights

ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಬದ್ಧವೈರಿ ತಮಿಳ್ ತಲೈವಾಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ರೈಡಿಂಗ್‌ನಲ್ಲಿ ಅತೀ ಹೆಚ್ಚು ಅಂಕಗಳಿಸಿದ  ಬುಲ್ಸ್, ತಮಿಳ್ ತಲೈವಾಸ್ ವಿರುದ್ದ ಸತತ 2 ನೇ ಗೆಲವಿನ ಸಂಭ್ರಮ ಆಚರಿಸಿದೆ.

ಸೋನೆಪತ್(ಅ.18):  ಬೆಂಗಳೂರು ಬುಲ್ಸ್‌, ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಸತತ 2ನೇ ಗೆಲುವು ಸಾಧಿಸಿತು. ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ಗೆದ್ದಿದ್ದ ಬುಲ್ಸ್‌, ತನ್ನ 2ನೇ ಪಂದ್ಯವನ್ನು ಇಲ್ಲಿ ಮತ್ತೆ ತಲೈವಾಸ್‌ ವಿರುದ್ಧವೇ ಆಡಿತು. ರೈಡ್‌ ಮಷಿನ್‌ಗಳಾದ ಪವನ್‌ ಶೆರಾವತ್‌(16 ಅಂಕ) ಹಾಗೂ ಕಾಶಿಲಿಂಗ್‌ ಅಡಕೆ (12 ಅಂಕ) ಅತ್ಯಮೋಘ ಪ್ರದರ್ಶನದ ನೆರವಿನಿಂದ ತಲೈವಾಸ್‌ ವಿರುದ್ಧ 44-35 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಬುಲ್ಸ್‌ ರೈಡಿಂಗ್‌ ವಿಭಾಗ 26 ಅಂಕ ಕೊಳ್ಳೆ ಹೊಡೆದು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಈ ಆವೃತ್ತಿಯ ಉದ್ಘಾಟನಾ ದಿನದಂದು ಗೆದ್ದಿದ್ದು ಬಿಟ್ಟರೆ, ತಲೈವಾಸ್‌ಗೆ ಮತ್ತೆ ಜಯದ ರುಚಿ ನೋಡಲು ಸಾಧ್ಯವಾಗಿಲ್ಲ. ತಂಡಕ್ಕಿದು ಸತತ 5ನೇ ಸೋಲು. ನಾಯಕ ಅಜಯ್‌ ಠಾಕೂರ್‌ (09 ಅಂಕ) ಮತ್ತೊಮ್ಮೆ ಹೋರಾಟ ಪ್ರದರ್ಶಿಸಿದರೂ, ಉಳಿದ ಆಟಗಾರರಿಂದ ಸರಿಯಾದ ಬೆಂಬಲ ಸಿಗದ ಕಾರಣ ತಲೈವಾಸ್‌ ಸೋಲಿಗೆ ಶರಣಾಗಬೇಕಾಯಿತು.

2ನೇ ನಿಮಿಷದಲ್ಲೇ ಸೂಪರ್‌ ರೈಡ್‌: ಕಾಶಿಲಿಂಗ್‌ ಅಡಕೆ 2ನೇ ನಿಮಿಷದಲ್ಲೇ ಸೂಪರ್‌ ರೈಡ್‌ ನಡೆಸಿ ಬೆಂಗಳೂರಿಗೆ 4-1ರ ಆರಂಭಿಕ ಮುನ್ನಡೆ ಒದಗಿಸಿದರು. ಅಜಯ್‌ ಠಾಕೂರ್‌ 4ನೇ ನಿಮಿಷದಲ್ಲಿ ತಮ್ಮ ಮೊದಲ ಅಂಕ ಗಳಿಸಿದರು. 5ನೇ ನಿಮಿಷದಲ್ಲೇ ತಲೈವಾಸ್‌ ಆಲೌಟ್‌ ಮಾಡಿದ ಬುಲ್ಸ್‌ 9-2ರ ಮುನ್ನಡೆ ಪಡೆದಿಯಿತು.

ಬೆಂಗಳೂರು ತಂಡದ ರೈಡರ್‌ಗಳನ್ನು ಕಟ್ಟಿಹಾಕಲು ತಲೈವಾಸ್‌ ಪರದಾಡಿತು. 6ನೇ ನಿಮಿಷದಲ್ಲಿ ಪವನ್‌ 4 ಅಂಕಗಳ ರೈಡ್‌ ನಡೆಸಿ ಮುನ್ನಡೆಯನ್ನು 14-3ಕ್ಕೇರಿಸಿದರು. ಮೊದಲಾರ್ಧದಲ್ಲೇ ತಲೈವಾಸ್‌ 2ನೇ ಬಾರಿಗೆ ಆಲೌಟ್‌ ಆಯಿತು. 20 ನಿಮಿಷಗಳಲ್ಲಿ ಕೇವಲ 2 ಟ್ಯಾಕಲ್‌ ಅಂಕ ಗಳಿಸಿದ ತಲೈವಾಸ್‌ ಮೊದಲಾರ್ಧದ ಮುಕ್ತಾಯಕ್ಕೆ 14-25ರ ಹಿನ್ನಡೆ ಅನುಭವಿಸಿತು.

ದ್ವಿತೀಯಾರ್ಧದಲ್ಲಿ ಪುಟಿದೆದ್ದ ತಲೈವಾಸ್‌ 24ನೇ ನಿಮಿಷದಲ್ಲಿ ಬುಲ್ಸ್‌ ಆಲೌಟ್‌ ಮಾಡಿ ಅಂತರವನ್ನು 21-29ಕ್ಕಿಳಿಸಿಕೊಂಡಿತು. ತಲೈವಾಸ್‌ ಒಂದು ಹಂತದಲ್ಲಿ ಅಂತರವನ್ನು ಕೇವಲ 6 ಅಂಕಗಳಿಗೆ ತಂದಿತ್ತು. ಆದರೆ ಬೆಂಗಳೂರು ತಂಡದ ಬಲಿಷ್ಠ ರಕ್ಷಣಾ ಪಡೆಯ ಎದುರು ತಲೈವಾಸ್‌ ತಿಣುಕಾಡಿತು. 30ನೇ ನಿಮಿಷದಲ್ಲಿ ಬುಲ್ಸ್‌ ತನ್ನ ಮುನ್ನಡೆಯನ್ನು 33-24ಕ್ಕೆ ಹೆಚ್ಚಿಸಿಕೊಂಡಿತು.

ಕೊನೆ 10 ನಿಮಿಷ ಬಾಕಿ ಇದ್ದಾಗ ನಾಯಕ ಅಜಯ್‌ ಠಾಕೂರ್‌ ಗಾಯಗೊಂಡು ಅಂಕಣ ತೊರೆದಿದ್ದು ತಲೈವಾಸ್‌ಗೆ ಮತ್ತಷ್ಟುಹಿನ್ನಡೆ ಉಂಟು ಮಾಡಿತು. 5 ನಿಮಿಷ ಬಾಕಿ ಇದ್ದಾಗ 11 ಅಂಕಗಳಿಂದ ಮುಂದಿದ್ದ ಬುಲ್ಸ್‌, ಗೆಲುವಿನತ್ತ ಹೆಜ್ಜೆಹಾಕಿತು. 37ನೇ ನಿಮಿಷದಲ್ಲಿ ಸೂಪರ್‌ ಟ್ಯಾಕಲ್‌ ಮೂಲಕ 2 ಅಂಕ ಗಳಿಸಿದ ತಲೈವಾಸ್‌, 39ನೇ ನಿಮಿಷದಲ್ಲಿ ಮತ್ತೆರಡು ಅಂಕ ಗಳಿಸಿತು. ಸೋಲಿನ ಅಂತರವನ್ನು 7 ಅಂಕಗಳಿಗಿಂತ ಕಡಿಮೆಗೆ ಇಳಿಸಿಕೊಂಡು ಕನಿಷ್ಠ 1 ಅಂಕ ಗಳಿಸಲು ತಲೈವಾಸ್‌ ಯತ್ನಿಸಿತು. ಆದರೆ ಬುಲ್ಸ್‌ ಇದಕ್ಕೆ ಅವಕಾಶ ನೀಡಲಿಲ್ಲ. 9 ಅಂಕಗಳ ಅಂತರದ ಗೆಲುವು ಸಾಧಿಸಿದ ಬುಲ್ಸ್‌, ‘ಬಿ’ ವಲಯದಲ್ಲಿ 2ನೇ ಸ್ಥಾನಕ್ಕೇರಿತು. ತಲೈವಾಸ್‌ 6 ಪಂದ್ಯಗಳಲ್ಲಿ 5 ಸೋಲಿನೊಂದಿಗೆ ಕೊನೆ ಸ್ಥಾನಕ್ಕೆ ಕುಸಿಯಿತು.

ಟರ್ನಿಂಗ್‌ ಪಾಯಿಂಟ್‌: ಮೊದಲ 20 ನಿಮಿಷಗಳ ಆಟದ ಬಳಿಕ 11 ಅಂಕ ಹಿಂದಿದ್ದರೂ ದ್ವಿತೀಯಾರ್ಧದಲ್ಲಿ ಪುಟಿದೆದ್ದ ತಲೈವಾಸ್‌, 27ನೇ ನಿಮಿಷದ ವೇಳೆಗೆ ಅಂತರವನ್ನು ಕೇವಲ 6 ಅಂಕಗಳಿಗೆ ಇಳಿಸಿಕೊಂಡಿತು. ಆದರೆ ಈ ಹಂತದಲ್ಲಿ ಬುಲ್ಸ್‌ ಎಚ್ಚೆತ್ತುಕೊಂಡು ಸತತ 3 ಅಂಕ ಗಳಿಸಿದ್ದು, ತಲೈವಾಸ್‌ಗೆ ಹಿನ್ನಡೆ ಉಂಟು ಮಾಡಿತು.

ಇಂದು 2 ನಗರಗಳಲ್ಲಿ ಪಂದ್ಯಗಳು!

ಪ್ರೊ ಕಬಡ್ಡಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 2 ವಿವಿಧ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಗುರುವಾರ ಮೊದಲ ಪಂದ್ಯ ಸೋನೆಪತ್‌ನಲ್ಲಿ ನಡೆದರೆ, 2ನೇ ಪಂದ್ಯ ಪುಣೆಯಲ್ಲಿ ನಡೆಯಲಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
 

click me!