ಪ್ರೊ ಕಬಡ್ಡಿ 2018: ಟೈಟನ್ಸ್‌ಗೆ ಸೋಲಿನ ರುಚಿ ತೋರಿದ ವಾರಿಯ​ರ್ಸ್

Published : Oct 17, 2018, 10:31 AM IST
ಪ್ರೊ ಕಬಡ್ಡಿ 2018:  ಟೈಟನ್ಸ್‌ಗೆ ಸೋಲಿನ ರುಚಿ ತೋರಿದ ವಾರಿಯ​ರ್ಸ್

ಸಾರಾಂಶ

ಪ್ರೊ ಕಬಡ್ಡಿ 6ನೇ ಆವೃತ್ತಿ ತೆಲುಗು ಟೈಟಾನ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು.  ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್ ರೋಚಕ ಗಲುವಿನ ನಗೆ ಬೀರಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಸೋನೆಪತ್(ಅ.17):  ಬೆಂಗಾಲ್‌ ವಾರಿಯ​ರ್ಸ್ ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಮಂಗಳವಾರ ಇಲ್ಲಿ ನಡೆದ ‘ಎ’ ವಲಯದ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ 30-25 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಮಣೀಂದರ್‌ ಸಿಂಗ್‌ ಆಕರ್ಷಕ ರೈಡಿಂಗ್‌ ನಡೆಸಿ 11 ಅಂಕ ಗಳಿಸುವ ಮೂಲಕ ಬೆಂಗಾಲ್‌ ಗೆಲುವಿನ ರೂವಾರಿಯಾದರು. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ತೆಲುಗು ಟೈಟಾನ್ಸ್‌ ಹಲವು ಅವಕಾಶಗಳನ್ನು ಕೈಚೆಲ್ಲಿ ನಿರಾಸೆ ಅನುಭವಿಸಿತು. ತಂಡದ ತಾರಾ ಆಟಗಾರ ರಾಹುಲ್‌ ಚೌಧರಿ ಕೇವಲ 2 ಬೋನಸ್‌ ಅಂಕ ಗಳಿಸಲಷ್ಟೇ ಶಕ್ತರಾದರು. 12 ಬಾರಿ ರೈಡ್‌ ನಡೆಸಿದ ರಾಹುಲ್‌ 5 ಬಾರಿ ಔಟ್‌ ಆದರೆ, ಇನ್ನೈದು ಬಾರಿ ಖಾಲೆ ಕೈಯಲ್ಲಿ ತಮ್ಮ ಅಂಕಣಕ್ಕೆ ಮರಳಿದರು. ಪಂದ್ಯದಲ್ಲಿ ಸೋಲುಂಡರೂ, ಟೈಟಾನ್ಸ್‌ ‘ಬಿ’ ವಲಯದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಬೆಂಗಾಲ್‌ ವಾರಿಯ​ರ್‍ಸ್ 2ನೇ ಸ್ಥಾನಕ್ಕೇರಿದೆ.

ಮೊದಲಾರ್ಧದಲ್ಲಿ ಉಭಯ ತಂಡಗಳು ನಿಧಾನ ಆರಂಭ ಪಡೆದುಕೊಂಡವು. ಟೈಟಾನ್ಸ್‌ನ ರಕ್ಷಣಾ ಪಡೆಯನ್ನು ಮುನ್ನಡೆಸಿದ ಅಬೋಜರ್‌ ಮಿಘಾನಿ ಅಂಕ ಗಳಿಕೆಯಲ್ಲಿ ಮುನ್ನಡೆದರು. ಟೈಟಾನ್ಸ್‌ 2-0 ಆರಂಭಿಕ ಮುನ್ನಡೆ ಗಳಿಸಿತು. 3ನೇ ನಿಮಿಷದಲ್ಲಿ ಬೆಂಗಾಲ್‌ ಅಂಕ ಖಾತೆ ತೆರೆಯಿತು.

ಆದರೆ 5ನೇ ನಿಮಿಷದಲ್ಲಿ ಜಾನ್‌ ಕುನ್‌ ಲೀ ಬೆಂಗಾಲ್‌ 5-4ರ ಮುನ್ನಡೆ ಪಡೆಯಲು ನೆರವಾದರು. 14ನೇ ನಿಮಿಷದಲ್ಲಿ ಉಭಯ ತಂಡಗಳು 9-9ರಲ್ಲಿ ಸಮಬಲ ಸಾಧಿಸಿದವು. ಮೊದಲಾರ್ಧದ ಅಂತ್ಯಕ್ಕೆ ತೆಲುಗು ಟೈಟಾನ್ಸ್‌ 13-10ರ ಅಲ್ಪ ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದಲ್ಲೂ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿ ಅಂಕ ಗಳಿಸಿದವು. ಆದರೆ 32ನೇ ನಿಮಿಷದಲ್ಲಿ ಮಣೀಂದರ್‌ ಸಿಂಗ್‌ 2 ಅಂಕ ಗಳಿಸಿ ಬೆಂಗಾಲ್‌ ವಾರಿಯ​ರ್‍ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು. ಟೈಟಾನ್ಸ್‌ ಆಲೌಟ್‌ ಮಾಡಿದ ಬೆಂಗಾಲ್‌ 19-17ರ ಮುನ್ನಡೆ ಪಡೆಯಿತು. 33ನೇ ನಿಮಿಷದಲ್ಲಿ ರಾಹುಲ್‌ ಚೌಧರಿಯನ್ನು ಹೊರಗಟ್ಟಿದ ವಾರಿಯ​ರ್‍ಸ್, ಹಿಡಿತವನ್ನು ಮತ್ತಷ್ಟುಬಿಗಿಗೊಳಿಸಿತು.

34ನೇ ನಿಮಿಷದಲ್ಲಿ 2 ಅಂಕ ಮುನ್ನಡೆ ಹೊಂದಿದ್ದ ಬೆಂಗಾಲ್‌, ರಕ್ಷಣಾ ಪಡೆ ಗಳಿಸಿದ 3 ಟ್ಯಾಕಲ್‌ ಅಂಕಗಳ ನೆರವಿನಿಂದ ಅಂತಿಮ 3 ನಿಮಿಷ ಬಾಕಿ ಇದ್ದಾಗ 26-21ರ ಮುನ್ನಡೆಯೊಂದಿಗೆ ಜಯದತ್ತ ಹೆಜ್ಜೆ ಹಾಕಿತು.

39ನೇ ನಿಮಿಷದಲ್ಲಿ ಟೈಟಾನ್ಸ್‌ ಡಿಫೆಂಡರ್‌ಗಳು ಮಣೀಂದರ್‌ ಸಿಂಗ್‌ ಔಟ್‌ ಮಾಡಿ ಅಂತರವನ್ನು 25-27ಕ್ಕಿಳಿಸಿದರು. ಆದರೆ ರಾಹುಲ್‌ ಚೌಧರಿ ಸುವರ್ಣ ಅವಕಾಶವನ್ನು ಕೈಚೆಲ್ಲಿ ಟೈಟಾನ್ಸ್‌ಗೆ ಹಿನ್ನಡೆ ಉಂಟು ಮಾಡಿದರು. ಇದರಿಂದಾಗಿ ಬೆಂಗಾಲ್‌ಗೆ 2 ಅಂಕ ದೊರೆಯಿತು. ಅಂತಿಮವಾಗಿ 5 ಅಂಕಗಳ ಅಂತರದಲ್ಲಿ ಬೆಂಗಾಲ್‌ ಜಯಗಳಿಸಿತು.

ಟರ್ನಿಂಗ್‌ ಪಾಯಿಂಟ್‌:
ಪಂದ್ಯದ ಪಂದ್ಯದ ಕೊನೆ ನಿಮಿಷದಲ್ಲಿ ರಾಹುಲ್‌ ಚೌಧರಿ ಮಾಡಿದ ಎಡವಟ್ಟಿನಿಂದಾಗಿ ಬೆಂಗಾಲ್‌ ವಾರಿಯ​ರ್‍ಸ್ಗೆ ಸೂಪರ್‌ ಟ್ಯಾಕಲ್‌ ದೊರೆಯಿತು. 2 ಅಂಕ ಪಡೆದ ವಾರಿಯ​ರ್‍ಸ್ ಗೆಲುವನ್ನು ಖಚಿತ ಪಡಿಸಿಕೊಂಡಿತು.


ಮಲ್ಲಪ್ಪ ಸಿ.ಪಾರೇಗಾಂವ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!