ಸ್ವಿಸ್‌ ಓಪನ್‌ ಗೆದ್ದ ಪಿವಿ ಸಿಂಧುವಿಗೆ ಪ್ರಧಾನಿ ಮೋದಿ ಅಭಿನಂದನೆ..!

By Kannadaprabha News  |  First Published Mar 28, 2022, 8:40 AM IST

* ಸ್ವಿಸ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿದ ಪಿ ವಿ ಸಿಂಧು

* ಥಾಯ್ಲೆಂಡ್‌ನ ಬುಸಾನನ್‌ ಒಂಗ್ಬಾಮ್‌ರುಂಗ್ಪಾನ್‌ ವಿರುದ್ಧ ಸಿಂಧುಗೆ ಜಯ

* ಸಿಂಧು ಸಾಧನೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ


ಬಾಸೆಲ್(ಮಾ.28)‌: ಭಾರತದ ತಾರಾ ಶಟ್ಲರ್‌, ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು (PV Sindhu), ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Swiss Open Badminton Tournament) ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಕಳೆದ ಬಾರಿ ಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್‌ ವಿರುದ್ಧ ಸೋತಿದ್ದ 26 ವರ್ಷದ ಸಿಂಧು, ಈ ಬಾರಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಯಶಸ್ವಿಯಾದರು. ಪಿ.ವಿ. ಸಿಂಧು ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಭಿನಂದನೆ ಸಲ್ಲಿಸಿದ್ದಾರೆ. 

ಭಾನುವಾರ 49 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಸಿಂಧು ಥಾಯ್ಲೆಂಡ್‌ನ ಬುಸಾನನ್‌ ಒಂಗ್ಬಾಮ್‌ರುಂಗ್ಪಾನ್‌ ವಿರುದ್ಧ 21-16, 21-8 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಇದರೊಂದಿಗೆ ಬುಸಾನನ್‌ ವಿರುದ್ಧದ 17 ಮುಖಾಮುಖಿಗಳಲ್ಲಿ ಸಿಂಧು 16ನೇ ಗೆಲುವು ಸಾಧಿಸಿದರು. ಜನವರಿಯಲ್ಲಿ ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌ (Syed Modi Badminton Tournament 2022) ಚಾಂಪಿಯನ್‌ ಆಗಿದ್ದ ಸಿಂಧುಗೆ ಈ ವರ್ಷ ಇದು 2ನೇ ಪ್ರಶಸ್ತಿ.

Tap to resize

Latest Videos

2022ನೇ ಸಾಲಿನ ಸ್ವಿಸ್ ಓಪನ್‌ ಪ್ರಶಸ್ತಿ ಜಯಿಸಿದ ಪಿ.ವಿ. ಸಿಂಧು ಅವರಿಗೆ ಅಭಿನಂದನೆಗಳು. ಅವರ ಈ ಸಾಧನೆಯು ದೇಶದ ಯುವ ಜನತೆಗೆ ಸ್ಪೂರ್ತಿಯಾಗಿದೆ. ಮುಂಬರುವ ದಿನಗಳಲ್ಲಿ ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. 

Congratulations to on winning the Swiss Open 2022. Her accomplishments inspire the youth of India. Best wishes to her for her future endeavours.

— Narendra Modi (@narendramodi)

ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಎಚ್‌.ಎಸ್‌.ಪ್ರಣಯ್‌ ರನ್ನರ್‌-ಅಪ್‌ ಪ್ರಶಸ್ತಿ ತೃಪ್ತಿಪಟ್ಟುಕೊಂಡರು. ಫೈನಲ್‌ನಲ್ಲಿ ಅವರು ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ, ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟಿವಿರುದ್ಧ 12-21, 18-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. 2017ರಲ್ಲಿ ಯುಸ್‌ ಓಪನ್‌ ಗೆದ್ದ ಬಳಿಕ ಪ್ರಣಯ್‌ ಯಾವುದೇ ಪ್ರಶಸ್ತಿ ಗೆದ್ದಿಲ್ಲ.

ಕಾಮನ್ವೆಲ್ತ್‌, ಏಷ್ಯನ್‌ ಗೇಮ್ಸ್‌ ಮ್ಯಾರಾಥಾನ್‌ಗೆ ರಾಜ್ಯದ ಬೆಳ್ಳಿಯಪ್ಪ

ನವದೆಹಲಿ: ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಚೀನಾದ ಹಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನ ಮ್ಯಾರಾಥಾನ್‌ ಓಟದಲ್ಲಿ ಸ್ಪರ್ಧಿಸಲು ಕರ್ನಾಟಕದ ಎ.ಬಿ.ಬೆಳ್ಳಿಯಪ್ಪ ಅರ್ಹತೆ ಪಡೆದಿದ್ದಾರೆ. ಭಾನುವಾರ ನಡೆದ ನವದೆಹಲಿ ಮ್ಯಾರಾಥಾನ್‌ನಲ್ಲಿ 5ನೇ ಸ್ಥಾನ ಪಡೆಯುವ ಮೂಲಕ ಎರಡೂ ಕ್ರೀಡಾಕೂಟಗಳಿಗೆ ಅರ್ಹತೆ ಪಡೆದರು. 

Marathon Record ದೆಹಲಿ ಮ್ಯಾರಾಥಾನ್‌ನಲ್ಲಿ ದಾಖಲೆ, ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್‌ಗೆ ಕರ್ನಾಟಕದ ಬೆಳ್ಳಿಯಪ್ಪಗೆ ಅರ್ಹತೆ!

2 ಗಂಟೆ 17 ನಿಮಿಷ 9 ಸೆಕೆಂಡ್‌ಗಳಲ್ಲಿ ಅವರು ಓಟ ಪೂರ್ಣಗೊಳಿಸಿದರು. ಕಾಮನ್‌ವೆಲ್ತ್‌ ಗೇಮ್ಸ್‌ ಅರ್ಹತೆಗೆ 2 ಗಂಟೆ 18 ನಿಮಿಷ 40 ಸೆಕೆಂಡ್‌, ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯಲು 2 ಗಂಟೆ 18 ನಿಮಿಷ 48 ಸೆಕೆಂಡ್‌ಗಳಲ್ಲಿ ಓಟ ಮುಕ್ತಾಯಗೊಳಿಸಬೇಕಿತ್ತು. ಪುರುಷರ ವಿಭಾಗದಲ್ಲಿ 6 ಭಾರತೀಯರು ಎರಡೂ ಕ್ರೀಡಾಕೂಟಗಳಿಗೆ ಅರ್ಹತೆಗಿಟ್ಟಿಸಿದರು.

ಭಾರತೀಯ ಬ್ಯಾಡ್ಮಿಂಟನ್‌ಗೆ ಅಸ್ಸಾಂ ಸಿಎಂ ಬಿಸ್ವಾ ಅಧ್ಯಕ್ಷ

ಗುವಾಹಟಿ: ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ(ಬಿಎಐ) ಅಧ್ಯಕ್ಷರಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮರು ಆಯ್ಕೆಯಾಗಿದ್ದಾರೆ. ಬಿಎಐ ವಾರ್ಷಿಕ ಸಭೆಯಲ್ಲಿ ಬಿಸ್ವಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, 2026ರ ವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 2017ರಲ್ಲಿ ಮೊದಲ ಬಾರಿ ಬಿಎಐ ಅಧ್ಯಕ್ಷರಾಗಿದ್ದ ಬಿಸ್ವಾ, ಸದ್ಯ ಬ್ಯಾಡ್ಮಿಂಟನ್‌ ಏಷ್ಯಾ ಉಪಾಧ್ಯಕ್ಷ ಹಾಗೂ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ ಕಾರ‍್ಯಕಾರಿ ಮಂಡಳಿಯ ಸದಸ್ಯರಾಗಿಯೂ ಕಾರ‍್ಯನಿರ್ವಹಿಸುತ್ತಿದ್ದಾರೆ. ಮಾಜಿ ಕಿರಿಯರ ರಾಷ್ಟ್ರೀಯ ಕೋಚ್‌ ಸಂಜಯ್‌ ಮಿಶ್ರಾ ಬಿಎಐ ಕಾರ‍್ಯದರ್ಶಿಯಾಗಿ, ರಾಷ್ಟ್ರೀಯ ಪ್ರಧಾನ ಕೋಚ್‌ ಪುಲ್ಲೇಲಾ ಗೋಪಿಚಂದ್‌ ಸೇರಿದಂತೆ 9 ಮಂದಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

click me!