ಹಾಕಿ ವಿಶ್ವಕಪ್‌ನಿಂದ ಹೊರಬಿದ್ದ ಭಾರತ: 'ಯಾರಿಗಾದರೂ ನಿಜಕ್ಕೂ ಕಾಳಜಿ ಇದ್ಯಾ?' ಪಿಆರ್‌ ಶ್ರೀಜೇಶ್‌, ವೀರೆನ್‌ ರಸ್ಕಿನ್ಹಾ ಆಕ್ರೋಶ

Published : Aug 26, 2026, 05:07 PM IST
Hockey World Cup Team India

ಸಾರಾಂಶ

ಹಾಕಿ ವಿಶ್ವಕಪ್‌ನಿಂದ ಭಾರತ ತಂಡ ಹೊರಬಿದ್ದ ನಂತರ, ಮಾಜಿ ನಾಯಕರಾದ ಪಿಆರ್ ಶ್ರೀಜೇಶ್ ಮತ್ತು ವೀರೇನ್ ರಸ್ಕಿನ್ಹಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದ ಕಳಪೆ ಪ್ರದರ್ಶನ ಮತ್ತು ಆಡಳಿತದ ನಿರ್ಲಕ್ಷ್ಯವನ್ನು ಪ್ರಶ್ನಿಸಿರುವ ಅವರು, ಈ ಸೋಲಿನ ಹೊಣೆಯನ್ನು ಯಾರು ಹೊರಬೇಕು ಎಂದು ಕೇಳಿದ್ದಾರೆ.

ನವದೆಹಲಿ (ಆ.26): ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ದಯನೀಯ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿರುವುದು ತೀವ್ರ ಟೀಕೆಗೆ ಕಾರಣವಾಗಿದೆ. ಭಾರತ ಹಾಕಿ ತಂಡದ ಮಾಜಿ ನಾಯಕರಾದ ಪಿಆರ್ ಶ್ರೀಜೇಶ್ ಮತ್ತು ವೀರೇನ್ ರಸ್ಕಿನ್ಹಾ ಅವರು ತಂಡದ ಪ್ರದರ್ಶನವನ್ನು ತೀವ್ರವಾಗಿ ಪ್ರಶ್ನಿಸಿದ್ದು, ಈ ಸೋಲಿನ ಹೊಣೆಯ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಭಾರತದ ನಿರಾಶಾದಾಯಕ ಅಭಿಯಾನದ ನಂತರ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿರುವ ಶ್ರೀಜೇಶ್, 'ದೇಶದಲ್ಲಿ ಯಾರಿಗಾದರೂ ನಿಜಕ್ಕೂ ಇದರ ಬಗ್ಗೆ ಕಾಳಜಿ ಇದೆಯೇ?" ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತ ಹಾಗೂ ಭಾರತದ ಮಾಜಿ ಗೂಲ್‌ಕೀಪರ್ ಪಿಆರ್ ಶ್ರೀಜೇಶ್ ಎಕ್ಸ್‌ನಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ವ್ಯಂಗ್ಯವಾಗಿ ಪೋಸ್ಟ್‌ ಮಾಡಿದ್ದಾರೆ.'ಚಿಂತೆ ಮಾಡ್ಬೇಡಿ... ವಿಶ್ವಕಪ್ ನಮಗೇನೂ ಮುಖ್ಯವಲ್ಲ" ಎಂದು ಅವರು ಲೇವಡಿ ಮಾಡಿದ್ದಾರೆ. ಪ್ರಮುಖ ಕೂಟಗಳಲ್ಲಿ ಭಾರತ ತಂಡವು ಪದೇ ಪದೇ ಎಡವಟ್ಟು ಮಾಡಿಕೊಳ್ಳುತ್ತಿರುವುದಕ್ಕೆ ಮಾಜಿ ನಾಯಕ ವೀರೇನ್ ರಸ್ಕಿನ್ಹಾ ಕೂಡ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.

ಪುರುಷರ ಮತ್ತು ಮಹಿಳೆಯರ ನಿರಾಶಾದಾಯಕ ನಿರ್ಗಮನ

ಸೋಮವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 3-5 ಅಂತರದ ಸೋಲು ಕಾಣುವ ಮೂಲಕ ಭಾರತ ಪುರುಷರ ತಂಡದ ವಿಶ್ವಕಪ್ ಪಯಣ ಅಂತ್ಯಗೊಂಡಿತು. ಕನಿಷ್ಠ 2 ಗೋಲುಗಳ ಅಂತರದ ಗೆಲುವು ಅಗತ್ಯವಿದ್ದ ಪಂದ್ಯದಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು.ಇತ್ತ ಮಹಿಳೆಯರ ವಿಭಾಗದಲ್ಲೂ ಆಸ್ಟ್ರೇಲಿಯಾ ವಿರುದ್ಧ ನಡೆದ ರೋಚಕ ಪಂದ್ಯ 0-0 ಅಂತರದಲ್ಲಿ ಸಮಬಲಗೊಂಡಿತು. ಹೆಚ್ಚಿನ ಗೋಲು ಗಳಿಸಿದ ಆಧಾರದ ಮೇಲೆ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟರೆ, ಭಾರತ ಕೂಟದಿಂದ ಹೊರಬಿದ್ದಿತು.

'ಇದು ರಿಹರ್ಸಲ್ ಅಲ್ಲ, ವಿಶ್ವಕಪ್!'

ಭಾರತ ತಂಡ ಕೂಟದಿಂದ ನಿರ್ಗಮಿಸಿದ ನಂತರ ಶ್ರೀಜೇಶ್ ಸೋಶಿಯಲ್‌ ಮೀಡಿಯಾದಲ್ಲಿ ಖಾರವಾದ ಪ್ರಶ್ನೆ ಕೇಳಿದ್ದಾರೆ.'ನಾವು ಕೇವಲ 'ಉತ್ತಮ ಹಾಕಿ' ಆಡುವ ತಂಡವನ್ನು ಕಟ್ಟುತ್ತಿದ್ದೇವೆಯೇ ಅಥವಾ ವಿಶ್ವದ ಶ್ರೇಷ್ಠ ತಂಡಗಳನ್ನು ಸೋಲಿಸಿ 'ಗೆಲ್ಲುವ' ಸಾಮರ್ಥ್ಯವಿರುವ ತಂಡವನ್ನು ರೂಪಿಸುತ್ತಿದ್ದೇವೆಯೇ?' ಎಂದು ಪ್ರಶ್ನೆ ಮಾಡಿದ್ದು, 'ಕಲಿಯುತ್ತಿದ್ದೇವೆ', 'ಒಳ್ಳೆಯ ಹಾಕಿ ಆಡಿದೆವು' ಅಥವಾ ಭವಿಷ್ಯದ ಬಗ್ಗೆ ಮಾತನಾಡುವುದನ್ನು ಇನ್ಮುಂದೆ ನಿಲ್ಲಿಸಿ. ಇದು ಯಾವುದೇ ರಿಹರ್ಸಲ್ ಅಲ್ಲ; ಇದು ವಿಶ್ವಕಪ್!' ಎಂದು ಹೇಳಿದ್ದಾರೆ.

'ಈ ತಂಡಕ್ಕೆ ಕಠಿಣ ಪ್ರಶ್ನೆಗಳನ್ನು ಯಾರು ಕೇಳುತ್ತಾರೆ? ಸೋಲಿನ ಹೊಣೆಯನ್ನು ಆಗ್ರಹಿಸುತ್ತಾರೆ? ಮತ್ತು ನಿಜವಾಗಿಯೂ... ಯಾರಿಗಾದರೂ ಇದರ ಬಗ್ಗೆ ಕಾಳಜಿ ಇದೆಯೇ?' ಎಂದು ಪ್ರಶ್ನಿಸಿದ್ದಾರೆ.

ಮಹಿಳಾ ತಂಡವನ್ನೂ ಟೀಕೆ ಮಾಡಿರುವ ಶ್ರೀಜೇಶ್, ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ಮುಖ್ಯ ಕೋಚ್‌ ಶೋರ್ಡ್ ಮರಿನೆ (Sjoerd Marijne) ರಜೆಯ ಮೇಲೆ ತೆರಳಿದ್ದನ್ನು ಪ್ರಶ್ನಿಸಿದ್ದಾರೆ. 'ಅತ್ಯಂತ ನಿರ್ಣಾಯಕ ಸಮಯದಲ್ಲಿ ಕೋಚ್ ರಜೆಯಲ್ಲಿದ್ದರೂ ಆಟಗಾರ್ತಿಯರು ಶ್ರಮಿಸಿ ತಮ್ಮ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡಿದ್ದಾರೆ, ಅವರಿಗೆ ಶ್ರೇಯಸ್ಸು ಸಲ್ಲಬೇಕು. ಆದರೆ ಈ ನಿರ್ಲಕ್ಷ್ಯಕ್ಕೆ ಹೊಣೆ ಯಾರು? ಮುಖ್ಯ ಕೋಚ್‌ ಇಲ್ಲದಿದ್ದಾಗ ತಂಡದಿಂದ ಅತ್ಯುತ್ತಮ ಪ್ರದರ್ಶನವನ್ನು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ?" ಎಂದು ಅವರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಏಷ್ಯನ್ ಗೇಮ್ಸ್ ಗೆಲುವು ಲೋಪಗಳನ್ನು ಮುಚ್ಚಿಹಾಕದಿರಲಿ': ವೀರೇನ್ ರಸ್ಕಿನ್ಹಾ ಎಚ್ಚರಿಕೆ

ಮಾಜಿ ನಾಯಕ ವೀರೇನ್ ರಸ್ಕಿನ್ಹಾ ಕೂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಸಿಗುವ ಚಾಂಪಿಯನ್ ಪಟ್ಟ ಅಥವಾ ಚಿನ್ನದ ಪದಕವು ಭಾರತೀಯ ಹಾಕಿಯಲ್ಲಿರುವ ಗಂಭೀರ ಸಮಸ್ಯೆಗಳನ್ನು ಮರೆಮಾಚಬಹುದು ಎಂದು ಎಚ್ಚರಿಸಿದ್ದಾರೆ. 'ಪ್ರಸ್ತುತ ಏಷ್ಯನ್ ಹಾಕಿ ಅತ್ಯಂತ ಕಳಪೆ ಮಟ್ಟದಲ್ಲಿದೆ; ಜಪಾನ್, ಪಾಕಿಸ್ತಾನ ಮತ್ತು ಮಲೇಷ್ಯಾ ತಂಡಗಳ ಪ್ರದರ್ಶನವನ್ನು ನೋಡಿದರೆ ಇದು ತಿಳಿಯುತ್ತದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಸಿಗುವ ಚಿನ್ನದ ಪದಕವು ನಮ್ಮ ಪುರುಷರ ಹಾಕಿಯಲ್ಲಿರುವ ಸಾಲು ಸಾಲು ಲೋಪಗಳನ್ನು ಮುಚ್ಚಿಹಾಕುತ್ತದೆ ಎಂಬುದು ನನ್ನ ಆತಂಕ. ಏಷ್ಯನ್ ಗೇಮ್ಸ್ ಮುಗಿದ ನಂತರ ಫಿಟ್‌ನೆಸ್, ಆಟಗಾರರ ಆಯ್ಕೆ, ತಂತ್ರಗಾರಿಕೆ ಮತ್ತು ತಂಡದ ಆಳ (squad depth) ಹೀಗೆ ಪ್ರತಿಯೊಂದು ವಿಷಯದಲ್ಲೂ ಗಂಭೀರ ಆತ್ಮಾವಲೋಕನ ನಡೆಯಬೇಕಿದೆ" ಎಂದು ರಸ್ಕಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

51 ವರ್ಷಗಳ ಕಾಯುವಿಕೆ

ಭಾರತ ಪುರುಷರ ಹಾಕಿ ತಂಡ ವಿಶ್ವಕಪ್‌ನಲ್ಲಿ ಪದಕದ ವೇದಿಕೆ (Podium finish) ಏರದೇ ಬರೋಬ್ಬರಿ 51 ವರ್ಷಗಳಾಗಿವೆ. ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿರುವ ಭಾರತ ತಂಡ ಮುಂದಿನ ಹಂತದಲ್ಲಿ ಬೆಲ್ಜಿಯಂ ವಿರುದ್ಧ 7ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಸೆಣಸಲಿದೆ. ವಿಶ್ವಕಪ್ ನಿರಾಸೆಯ ನಂತರ ಈಗ ಎಲ್ಲರ ಗಮನ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನತ್ತ ನೆಟ್ಟಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಹಾದಿಯನ್ನು ಸುಗಮಗೊಳಿಸಲು ಮತ್ತು ಕಳೆದುಕೊಂಡ ಹಿರಿಮೆಯನ್ನು ಮರಳಿ ಪಡೆಯಲು ಭಾರತಕ್ಕೆ ಈ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಫಲಿತಾಂಶ ಅತ್ಯಗತ್ಯವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ವೈಭವ್, ಜೈಸ್ವಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಬಿಸಿಸಿಐ, ಐಸಿಸಿಗೆ ದಿಗ್ಗಜ ಕ್ರಿಕೆಟಿಗನ ಕರೆ!
Cricket Records: ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್‌ಗಳು ಇವರೇ! ಪಟ್ಟಿಯಲ್ಲಿ ಧೋನಿ ಯಾವ ಸ್ಥಾನಲ್ಲಿದ್ದಾರೆ?