
ನವದೆಹಲಿ(ಫೆ.01): ಚೊಚ್ಚಲ ಖೇಲೋ ಇಂಡಿಯಾ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಸೆಳೆಯಿತು. ಇದೇ ವೇಳೆ ಭಾರತದ ಕ್ರೀಡಾ ದಿಗ್ಗಜರಾದ ಬೈಚುಂಗ್ ಭುಟಿಯಾ, ಕಿದಾಂಬಿ ಶ್ರೀಕಾಂತ್, ಪಿ.ವಿ. ಸಿಂಧು, ಪುಲ್ಲೇಲಾ ಗೋಪಿಚಂದ್ ಮೈದಾನಕ್ಕೆ ಆಗಮಿಸಿ ಯುವ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
‘ಖೇಲೋ ಇಂಡಿಯಾ ಕೇವಲ ಒಂದು ಕಾರ್ಯಕ್ರಮವಲ್ಲ, ಇಲ್ಲಿ ಕೇವಲ ಪದಕ ಗೆಲ್ಲುವುದಷ್ಟೇ ಮುಖ್ಯವಲ್ಲ. ಇದೊಂದು ಕ್ರೀಡಾ ಕ್ರಾಂತಿ. ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ, ಪ್ರತಿಭಾನ್ವಿತರಿಗೆ ಪ್ರೋತ್ಸಾಹದ ಕೊರೆತೆ ಇದೆ. ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಯೋಜನೆಯೇ ಖೇಲೋ ಇಂಡಿಯಾ’ ಎಂದು ಮೋದಿ ಹೇಳಿದರು.
ಬುಧವಾರ ಬೆಳಗ್ಗೆಯೇ ಕ್ರೀಡೆಗಳು ಆರಂಭಗೊಂಡವು. ಬಾಲಕರ 100 ಮೀಟರ್ ಓಟ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಕಿರಿಯರ ರಾಷ್ಟ್ರೀಯ ಚಾಂಪಿಯನ್, ದೆಹಲಿಯ ಸ್ಲಂ ಬಾಲಕ ನಿಸಾರ್ ಅಹ್ಮದ್ ಕೇವಲ 11 ಸೆಕೆಂಡ್'ಗಳಲ್ಲಿ ಓಟ ಮುಕ್ತಾಯಗೊಳಿಸಿ ಫೈನಲ್ ಪ್ರವೇಶಿಸಿದರು.
ಜಮೈಕಾದಲ್ಲಿರುವ ಉಸೇನ್ ಬೋಲ್ಟ್ ಕಲಿತ ಕ್ರೀಡಾ ಅಕಾಡೆಮಿಯಲ್ಲೇ ತರಬೇತಿ ಪಡೆಯಲು ಅವಕಾಶ ಪಡೆದಿರುವ ನಿಸಾರ್, ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದರು. ಇದೇ ವಿಭಾಗದಲ್ಲಿ ಕರ್ನಾಟಕದ ಶಶಿಕಾಂತ್ ಕೂಡ ಫೈನಲ್‌ಗೇರಿದ್ದಾರೆ. ಮೊದಲ ದಿನ ತಮಿಳುನಾಡು ಕ್ರೀಡಾಪಟುಗಳು ಪ್ರಾಬಲ್ಯ ಮೆರೆದಿದ್ದು, ಒಟ್ಟು 6 ಪದಕಗಳನ್ನು ಗೆದ್ದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.