ಇಂಗ್ಲೆಂಡ್‌ ದೇಸಿ ಟಿ20ಗೆ ಪ್ಲಾಸ್ಟಿಕ್‌ ಪಿಚ್‌!

By Web DeskFirst Published Apr 26, 2019, 12:44 PM IST
Highlights

ವಿಶ್ವಕಪ್‌ ಮುಗಿದ ಬೆನ್ನಲ್ಲೇ ಆರಂಭಗೊಳ್ಳಲಿರುವ ದೇಸಿ ಟಿ20 ಟೂರ್ನಿಗೆ ಕಳಪೆ ಪಿಚ್‌ಗಳನ್ನು ಒದಗಿಸುವ ಬದಲು ಪ್ಲಾಸ್ಟಿಕ್‌ ಪಿಚ್‌ಗಳ ವ್ಯವಸ್ಥೆ ಮಾಡಲು ಇಸಿಬಿ ನಿರ್ಧಾರ ತೆಗೆದುಕೊಂಡಿದೆ. ಏನಿದು ಹೊಸ ಪ್ರಯತ್ನ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಲಂಡನ್‌(ಏ.26): ಕ್ರಿಕೆಟ್‌ನಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ), ಇದೀಗ ದೇಸಿ ಟಿ20 ಪಂದ್ಯಗಳಿಗೆ ಪ್ಲಾಸ್ಟಿಕ್‌ ಪಿಚ್‌ಗಳನ್ನು ಬಳಕೆ ಮಾಡಲು ಮುಂದಾಗಿದೆ. 

ಈ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಸಹ ನಡೆಯಲಿರುವ ಕಾರಣ, ಇಂಗ್ಲೆಂಡ್‌ನ ಬಹುತೇಕ ಮೈದಾನಗಳ ಪಿಚ್‌ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಇಂಗ್ಲೆಂಡ್‌ನಲ್ಲಿ ಸದ್ಯ ರಾಯಲ್‌ ಲಂಡನ್‌ ಕಪ್‌ ಏಕದಿನ ಪಂದ್ಯಾವಳಿ ನಡೆಯುತ್ತಿದೆ. ಬಳಿಕ ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದ್ದು, ಒಟ್ಟು 48 ಪಂದ್ಯಗಳು ನಡೆಯಲಿವೆ. ಜತೆಗೆ 10 ತಂಡಗಳ ಅಭ್ಯಾಸಕ್ಕೂ ಪಿಚ್‌ಗಳ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಇಸಿಬಿಗಿದೆ. ಹೀಗಾಗಿ ವಿಶ್ವಕಪ್‌ ಮುಗಿದ ಬೆನ್ನಲ್ಲೇ ಆರಂಭಗೊಳ್ಳಲಿರುವ ದೇಸಿ ಟಿ20 ಟೂರ್ನಿಗೆ ಕಳಪೆ ಪಿಚ್‌ಗಳನ್ನು ಒದಗಿಸುವ ಬದಲು ಪ್ಲಾಸ್ಟಿಕ್‌ ಪಿಚ್‌ಗಳ ವ್ಯವಸ್ಥೆ ಮಾಡಲು ಇಸಿಬಿ ನಿರ್ಧಾರ ತೆಗೆದುಕೊಂಡಿದೆ.

ಏನಿದು ಪ್ಲಾಸ್ಟಿಕ್‌ ಪಿಚ್‌?: ಬಲವರ್ಧಿತ ಕೃತಕ ಹುಲ್ಲಿನಿಂದ ತಯಾರಿಸಿದ ಈ ಪಿಚ್‌ನಲ್ಲಿ ಶೇ.5ರಷ್ಟು ಪಾಲಿಥಿಲೀನ್‌ ಇರಲಿದೆ. ಸಾಮಾನ್ಯವಾಗಿ ಸಿದ್ಧಪಡಿಸುವ ಕ್ರಿಕೆಟ್‌ ಪಿಚ್‌ಗಳಿಗಿಂತ 5 ಪಟ್ಟು ಹೆಚ್ಚು ಬಾಳಿಕೆ ಬರಲಿದೆ. ಇದರಿಂದ ಮೈದಾನ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಆಟದ ಗುಣಮಟ್ಟ ಸಹ ಗಣನೀಯ ಪ್ರಮಾಣದಲ್ಲಿ ಸುಧಾರಿಸಲಿದೆ.

10 ಮೈದಾನಗಳಲ್ಲಿ ಅಳವಡಿಕೆ: ಲಂಡನ್‌ನ ದಿ ಓವಲ್‌ ಸೇರಿದಂತೆ ಇಂಗ್ಲೆಂಡ್‌ನ 10 ಮೈದಾನಗಳಲ್ಲಿ ಈಗಾಗಲೇ ಪ್ಲಾಸ್ಟಿಕ್‌ ಪಿಚ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಸದ್ಯಕ್ಕೆ ನೆಟ್ಸ್‌ ಅಭ್ಯಾಸಕ್ಕೆ ಪಿಚ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಜುಲೈನಲ್ಲಿ ಇಸಿಬಿ ಹಾಕ್‌ಐ ತಂತ್ರಜ್ಞಾನದೊಂದಿಗೆ ಪಿಚ್‌ ವೇಗದ ಬೌಲಿಂಗ್‌ಗೆ ಹೇಗೆ ವರ್ತಿಸಲಿದೆ. ಚೆಂಡು ಪುಟಿದೆದ್ದಾಗ ದಿಕ್ಕು ಎಷ್ಟರ ಮಟ್ಟಿಗೆ ಬದಲಾಗುತ್ತದೆ ಎನ್ನುವುದನ್ನು ಪರೀಕ್ಷಿಸಲಿದೆ.

3 ವರ್ಷಗಳ ಹಿಂದೆ ಇಸಿಬಿ 11 ಲಕ್ಷ ರುಪಾಯಿ ಖರ್ಚು ಮಾಡಿ ಲೌಬರೋ ಮೈದಾನದಲ್ಲಿ ಪ್ಲಾಸ್ಟಿಕ್‌ ಪಿಚ್‌ ಅಳವಡಿಸಿತ್ತು. ಈ ಪಿಚ್‌ ಉತ್ತಮ ವೇಗ, ಬೌನ್ಸ್‌ ಹೊಂದಿದ್ದು ಬ್ಯಾಟಿಂಗ್‌ ಸ್ನೇಹಿಯಾಗಿದೆ ಎನ್ನಲಾಗಿದೆ. ಪ್ಲಾಸ್ಟಿಕ್‌ ಪಿಚ್‌ಗಳನ್ನು ಸೀಮಿತ ಓವರ್‌ ಕ್ರಿಕೆಟ್‌ಗೆ ಮಾತ್ರ ಬಳಸಬಹುದು ಎನ್ನಲಾಗಿದೆ. ಜತೆಗೆ ಪಿಚ್‌ ಮೇಲೆ ಸ್ಪಿನ್‌ ಮಾಡಲು ವಿಶೇಷ ಕೌಶಲ್ಯವಿರಬೇಕು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯ ಮಹತ್ವಾಕಾಂಕ್ಷೆಯ 100 ಬಾಲ್‌ ಕ್ರಿಕೆಟ್‌ಗೂ ಪ್ಲಾಸ್ಟಿಕ್‌ ಪಿಚ್‌ಗಳನ್ನೇ ಬಳಕೆ ಮಾಡುವ ಸಾಧ್ಯತೆ ಇದೆ.

click me!