ಹೊಸ ತಂಡ ಕೂಡಿಕೊಂಡ ರಹಾನೆ..!

By Web DeskFirst Published Apr 26, 2019, 11:44 AM IST
Highlights

ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೊಸ ತಂಡದ ಪರ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ರಹಾನೆ ಇದೀಗ ಇಂಗ್ಲೆಂಡ್’ನತ್ತ ಮುಖ ಮಾಡಿದ್ದಾರೆ. ಏನಿದು ಸ್ಟೋರಿ ನೀವೇ ನೋಡಿ...

ನವದೆಹಲಿ[ಏ.26]: ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ ತಂಡವಾದ ಹ್ಯಾಂಪ್‌ಶೈರ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಮೇ ತಿಂಗಳಿಂದ ಜುಲೈ ವರೆಗೂ 8 ಪಂದ್ಯಗಳನ್ನು ಆಡಲಿದ್ದಾರೆ. 

ದಕ್ಷಿಣ ಆಫ್ರಿಕಾ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಏಡನ್‌ ಮಾರ್ಕ್ರಮ್‌ ಸ್ಥಾನವನ್ನು ರಹಾನೆ ತುಂಬಲಿದ್ದಾರೆ. ಭಾರತದಿಂದ ಹ್ಯಾಂಪ್‌ಶೈರ್‌ ಪರ ಆಡಲಿರುವ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ಮೊದಲು ಗೋರ್ಡನ್ ಮಾಲ್ಕಮ್ ಮಾರ್ಶಲ್, ಶೇನ್ ವಾರ್ನ್, ಕೆವಿನ್ ಪೀಟರ್’ಸನ್ ಅವರಂತಹ ದಿಗ್ಗಜ ಕ್ರಿಕೆಟಿಗರು ಹ್ಯಾಂಪ್‌ಶೈರ್‌ ಪರ ಕ್ರಿಕೆಟ್ ಆಡಿದ್ದಾರೆ. 

ಟೀಂ ಇಂಡಿಯಾದಿಂದ ಕಡೆಗಣನೆ- ವಿದೇಶಿ ಕ್ರಿಕೆಟ್‌ನತ್ತ ರಹಾನೆ!

2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ರಹಾನೆ ಇದುವರೆಗೆ ಭಾರತ ಪರ 56 ಟೆಸ್ಟ್ ಹಾಗೂ 90 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್’ನಲ್ಲಿ 9 ಶತಕ ಹಾಗೂ 17 ಅರ್ಧಶತಕ ಸಹಿತ 40.55ರ ಸರಾಸರಿಯಲ್ಲಿ 3,488 ರನ್ ಬಾರಿಸಿದ್ದಾರೆ. ಇನ್ನು 12ನೇ ಆವೃತ್ತಿಯ ಐಪಿಎಲ್’ನಲ್ಲಿ ರಹಾನೆ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಮೇ 14ರಂದು ಎಡ್ಜ್‌ಬಾಸ್ಟನ್‌ನಲ್ಲಿ ವಾರ್ವಿಕ್‌ಶೈರ್‌ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಕೌಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ವಿಶ್ವಕಪ್‌ ಬಳಿಕ ಭಾರತ ತಂಡ ವಿಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, ಭಾರತದ 7 ಟೆಸ್ಟ್‌ ತಜ್ಞರು ಕೌಂಟಿಯಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
 

click me!