ಬಹುನಿರೀಕ್ಷಿತ ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಯು ಮುಂಬಾ ತಂಡಗಳು ಮುಖಾಮುಖಿಯಾದರೆ, ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯಗಳ ಬಗೆಗಿನ ವರದಿ ಇಲ್ಲಿದೆ ನೋಡಿ..,.
ಹೈದರಾಬಾದ್[ಜು.20]: ಮೊದಲ 5 ಆವೃತ್ತಿಗಳಲ್ಲಿ ಪ್ರಶಸ್ತಿ ಬರ ಎದುರಿಸಿದ್ದ ಬೆಂಗಳೂರು ಬುಲ್ಸ್, 6ನೇ ಆವೃತ್ತಿಯಲ್ಲಿ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿಹಿಡಿದಿತ್ತು. ಹಾಲಿ ಚಾಂಪಿಯನ್ ಆಗಿ 7ನೇ ಆವೃತ್ತಿಗೆ ಕಾಲಿಡುತ್ತಿರುವ ಬುಲ್ಸ್, ಶನಿವಾರ ತನ್ನ ಅಭಿಯಾನ ಆರಂಭಿಸಲಿದ್ದು ಮೊದಲ ಪಂದ್ಯದಲ್ಲಿ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ ಸೆಣಸಲಿದೆ.
7ನೇ ಆವೃತ್ತಿಯ ಕಬಡ್ಡಿಯ ಸಂಪೂರ್ಣ ವೇಳಾಪಟ್ಟಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ....
ಕಳೆದ ಆವೃತ್ತಿಯಲ್ಲಿ ರೈಡ್ ಮಷಿನ್ ಪವನ್ ಶೆರಾವತ್ ತಂಡದ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದರು. ಈ ಬಾರಿಯೂ ತಂಡ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ. ನಾಯಕ ರೋಹಿತ್ ಕುಮಾರ್, ರೈಡಿಂಗ್‌ನಲ್ಲಿ ಪವನ್‌ಗೆ ಸಾಥ್ ನೀಡಲಿದ್ದಾರೆ. ಮಹೇಂದರ್ ಸಿಂಗ್ ಹಾಗೂ ಅಮಿತ್ ಶೆರೊನ್ ತಂಡದ ಪ್ರಮುಖ ಡಿಫೆಂಡರ್‌ಗಳಾಗಿದ್ದು, ರೈಡರ್‌ಗಳಿಗೆ ತಕ್ಕ ಬೆಂಬಲ ನೀಡಬೇಕಿದೆ. ಪಾಟ್ನಾ ಮತ್ತೊಮ್ಮೆ ತನ್ನ ತಾರಾ ರೈಡರ್ ಪ್ರದೀಪ್ ನರ್ವಾಲ್ ಮೇಲೆ ಹೆಚ್ಚಾಗಿ ಅವಲಂಬಿತಗೊಳ್ಳಲಿದೆ.
ತೆಲುಗು ಟೈಟಾನ್ಸ್ , ಮುಂಬಾ ಫೈಟ್
ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳಿಗೆ ಇರಾನ್‌ನ ಬಲಿಷ್ಠ ಡಿಫೆಂಡರ್’ಗಳು ನಾಯಕರಾಗಿದ್ದಾರೆ.
ಮುಂಬಾಗೆ ಹೋಲಿಸಿದರೆ, ಟೈಟಾನ್ಸ್ ಬಲಿಷ್ಠವಾಗಿದ್ದು ತವರಿನ ಚರಣದಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಪ್ರೊ ಕಬಡ್ಡಿ ಹೈದರಾಬಾದ್‌ಗೆ ವಾಪಸಾಗಿದ್ದು, ಸ್ಥಳೀಯ ಅಭಿಮಾನಿಗಳು ರೋಚಕ ಪಂದ್ಯ ಗಳಿಗೆ ಸಾಕ್ಷಿಯಾಗಲು ಉತ್ಸುಕರಾಗಿದ್ದಾರೆ.
ಮೊದಲ ಪಂದ್ಯ: ತೆಲುಗು ಟೈಟಾನ್ಸ್ vs ಯು ಮುಂಬಾ
ಸಮಯ: 7.30
ಎರಡನೇ ಪಂದ್ಯ: ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್
ಸಮಯ: 8.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್