
ಮುಂಬೈ(ಡಿ.15): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 9ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಹೋರಾಟ ಅಂತ್ಯಗೊಂಡಿದೆ. ಅತ್ಯುತ್ತಮ ಹೋರಾಟದ ಮೂಲಕ ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು ಬುಲ್ಸ್, ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧದ ರೋಚಕ ಹೋರಾಟದಲ್ಲಿ ಬುಲ್ಸ್ 29-49 ಅಂಕಗಳ ಅಂತರದಲ್ಲಿ ಸೋಲು ಅನುಭವಿಸಿತು. 20 ಅಂಕಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ.
ಆರಂಭದಿಂದಲೇ ಜೈಪುರ ಪಿಂಕ್ ಪ್ಯಾಂಥರ್ಸ್ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇತ್ತ ಬೆಂಗಳೂರು ಬುಲ್ಸ್ ಕೂಡ ಅದೇ ರೀತಿಯ ಅಗ್ರೆಸ್ಸೀವ್ ಆಟ ಪ್ರದರ್ಶಿಸಿತು. ಆದರೆ ಅಂಕಗಳಿಸುವಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ. ಮೊದಲಾರ್ಧದಲ್ಲಿ ಜೈಪುರ ಪಿಂಕ್ ಪ್ಯಾಂರ್ಥರ್ಸ್ ಸಂಪೂರ್ಣ ಹಿಡಿತ ಸಾಧಿಸಿತು. ರೈಡ್ ಹಾಗೂ ಟ್ಯಾಕಲ್ ಅಂಕಗಳ ಮೂಲಕ ಬೆಂಗಳೂರು ಬುಲ್ಸ್ ತಂಡಕ್ಕೆ ತೀವ್ರ ಆಘಾತ ನೀಡಿತು.
PKL 2023 ಕಬಡ್ಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಪ್ರೊ ಕಬಡ್ಡಿಗೆ ಪವನ್ ಶೆರಾವತ್ ಎಂಟ್ರಿ..?
ಮೊದಲಾರ್ಧದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 24- 15 ಅಂಕಗಳ ಮುನ್ನಡೆ ಪಡೆಯಿತು. ಮೊದಲಾರ್ಧಲ್ಲಿ ಆಲೌಟ್ ಆದ ಬೆಂಗಳೂರುು 2 ಅಂಕ ಕಳೆದುಕೊಂಡಿತು. 1 ಅಂಕ ಹೆಚ್ಚುವರಿಯಾಗಿ ಬಿಟ್ಟುಕೊಡಬೇಕಾಯಿತು. ಫಸ್ಟ್ ಹಾಫ್‌ನಲ್ಲಿ ಬೆಂಗಳೂರು ಬುಲ್ಸ್ 9 ಅಂಕಗಳ ಹಿನ್ನಡೆ ಅನುಭವಿಸಿತು.
ದ್ವಿತಿಯಾರ್ಧದಲ್ಲಿ ಬೆಂಗಳೂರು ಬುಲ್ಸ್ ತಂಡದ ಮೇಲಿನ ಒತ್ತಡ ಹೆಚ್ಚಾಯಿತು. ರೈಡಿಂಗ್‌ನಲ್ಲಿ ಬೆಂಗಳೂರು ಬುಲ್ಸ್ ಸಮಬಲದ ಹೋರಾಟ ನೀಡಿತು. ಆದರೆ ಟ್ಯಾಕಲ್ ವಿಚಾರದಲ್ಲಿ ತೀವ್ರ ಹಿನ್ನಡೆ ಅನುಭವಿಸಿತು. ಪಿಂಕ್ ಪ್ಯಾಂಥರ್ಸ್ ಕಿಲಾಡಿಗಳನ್ನು ಟ್ಯಾಕಲ್ ಮಾಡುವಲ್ಲಿ ಬೆಂಗಳೂರು ವಿಫಲವಾಯಿತು. ಹೆಜ್ಜೆ ಹೆಜ್ಜೆಗೂ ಹಿನ್ನಡೆ ಅನುಭವಿಸಿದ ಬೆಂಗಳೂರು ಆಲೌಟ್ ಮೂಲಕ 4 ಅಂಕ ಕಳೆದುಕೊಂಡಿತು. ಇದರಿಂದ ಹೆಚ್ಚುವರಿ 2 ಅಂಕ ಬಿಟ್ಟುಕೊಡಬೇಕಾಯಿತು.
ದ್ವಿತಿಯಾರ್ಧದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 25 ಅಂಕ ಸಂಪಾದಿಸಿದರೆ, ಬೆಂಗಳೂರು ಬುಲ್ಸ್ 14 ಅಂಕಕ್ಕೆ ತೃಪ್ತಿಪಟ್ಟುಕೊಂಡಿತು. ಮೊದಲಾರ್ಧದಲ್ಲಿನ ಹಿನ್ನಡೆಯಿಂದಲೇ ಚೇತರಿಸಿಕೊಳ್ಳದ ಬುಲ್ಸ್ ಸೆಕೆಂಡ್ ಹಾಫ್‌ನಲ್ಲೂ ಮುಗ್ಗರಿಸಿತು. ಈ ಮೂಲಕ 29-49 ಅಂಕಗಳ ಅಂತರದಲ್ಲಿ ಪಂದ್ಯ ಕೈಚೆಲ್ಲಿತು.
ಪಂದ್ಯದ ವೇಳೆ ಗಾಯ: ಕಬಡ್ಡಿ ಆಟಗಾರ ಸಾವು!
ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 2018ರ ಚಾಂಪಿಯನ್ ಬುಲ್ಸ್ 56-24 ಅಂಕಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಸೆಮಿಫೈನಲ್ ಪ್ರವೇಶಿಸಿತ್ತು. 4ನೇ ನಿಮಿಷದಲ್ಲೇ ಡೆಲ್ಲಿಯನ್ನು ಆಲೌಟ್ ಮಾಡಿದ ಬುಲ್ಸ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿತು. ಯಾವ ಕ್ಷಣದಲ್ಲೂ ಎದುರಾಳಿಗೆ ಚೇತರಿಸಲು ಅವಕಾಶ ನೀಡದೆ ಮೊದಲಾರ್ಧಕ್ಕೆ 31-14 ಅಂಕಗಳ ದೊಡ್ಡ ಮುನ್ನಡೆ ಸಾಧಿಸಿತ್ತು. ನಂತರವೂ ಆಕ್ರಮಣಕಾರಿ ಆಟವಾಡಿದ ಬುಲ್ಸ್, ಡೆಲ್ಲಿಯನ್ನು ಒಟ್ಟಾರೆ 4 ಬಾರಿ ಅಲೌಟ್ ಮಾಡಿತು. ಭರತ್ 15, ವಿಕಾಸ್ ಖಂಡೋಲ 13 ರೈಡ್ ಅಂಕ ಸಂಪಾದಿಸಿದರು. ಡೆಲ್ಲಿ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್(08)ರನ್ನು ಕಟ್ಟಿಹಾಕಿದ್ದು ಬುಲ್ಸ್‌ಗೆ ಸುಲಭದಲ್ಲಿ ಗೆಲುವು ತಂದುಕೊಟ್ಟಿತು. ಸುಬ್ಯಮಣ್ಯನ್ 7, ಸೌರಭ್ 5 ಟ್ಯಾಕಲ್ ಅಂಕ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.