ಭಾರತ ತಂಡಕ್ಕೆ ಕೊನೆಯ ದಿನ ಗೆಲ್ಲಲು 175 ರನ್’ಗಳ ಅವಶ್ಯಕತೆಯಿತ್ತು. ನಾಲ್ಕನೇ ದಿನದಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 112 ರನ್ ಬಾರಿಸಿತ್ತು. ಕೊನೆಯ ದಿನ ಕೇವಲ 28 ರನ್ ಬಾರಿಸಿ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತು.
ಪರ್ತ್[ಡಿ.18]: ಆಸ್ಟ್ರೇಲಿಯಾ ಬೌಲರ್’ಗಳ ಸಂಘಟಿತ ಪ್ರದರ್ಶನಕ್ಕೆ ತತ್ತರಿಸಿದ ಟೀಂ ಇಂಡಿಯಾ 140 ರನ್’ಗಳಿಗೆ ಆಲೌಟ್ ಆಗುವುದರೊಂದಿಗೆ ಪರ್ತ್ ಟೆಸ್ಟ್’ನಲ್ಲಿ 146 ರನ್’ಗಳ ಸೋಲು ಅನುಭವಿಸಿದೆ. ಈ ಮೂಲಕ 4 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದಂತಾಗಿದೆ.
ಭಾರತ ತಂಡಕ್ಕೆ ಕೊನೆಯ ದಿನ ಗೆಲ್ಲಲು 175 ರನ್’ಗಳ ಅವಶ್ಯಕತೆಯಿತ್ತು. ನಾಲ್ಕನೇ ದಿನದಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 112 ರನ್ ಬಾರಿಸಿತ್ತು. ಕೊನೆಯ ದಿನ ಕೇವಲ 28 ರನ್ ಬಾರಿಸಿ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತು. ರಿಷಭ್ ಪಂತ್ 30 ರನ್ ಬಾರಿಸಿ ಮತ್ತೊಮ್ಮೆ ನೇಥನ್ ಲಯನ್’ಗೆ ವಿಕೆಟ್ ಒಪ್ಪಿಸಿದರು. ಬಾಲಂಗೋಚಿಗಳಾದ ಶಮಿ, ಬುಮ್ರಾ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು. ಹನುಮ ವಿಹಾರಿ ಕೂಡ ತಮ್ಮ ಖಾತೆಗೆ 4 ರನ್ ಸೇರಿಸಿ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನಡೆಯಾಯಿತು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ನೇಥನ್ ಲಯನ್ ತಲಾ ಮೂರು ವಿಕೆಟ್ ಪಡೆದರೆ, ಹ್ಯಾಜಲ್’ವುಡ್-ಕಮ್ಮಿನ್ಸ್ ತಲಾ 2 ವಿಕೆಟ್ ಪಡೆದರು.
ಪರ್ತ್ ಟೆಸ್ಟ್’ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 326 ರನ್ ಬಾರಿಸಿತ್ತು, ಇದಕ್ಕುತ್ತರವಾಗಿ ಭಾರತ ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ 283 ರನ್’ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್’ನಲ್ಲಿ 43 ರನ್’ಗಳ ಮುನ್ನಡೆ ಸಾಧಿಸಿತ್ತು. ಇನ್ನು ದ್ವಿತಿಯ ಇನ್ನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ 243 ರನ್ ಬಾರಿಸುವುದರೊಂದಿಗೆ ವಿರಾಟ್ ಪಡೆಗೆ ಗೆಲ್ಲಲು 287 ರನ್’ಗಳ ಟಾರ್ಗೆಟ್ ನೀಡಿತ್ತು.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಿಂದ ಡಿಸೆಂಬರ್ 26 ರಿಂದ ಆರಂಭಗೊಳ್ಳಲಿದೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಲಿದೆ.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 326&243
ಭಾರತ: 283&140