
ಧನಂಜಯ ಎಸ್. ಹಕಾರಿ, ಕನ್ನಡಪ್ರಭ
ಬೆಂಗಳೂರು[ಜೂ.06]: ತಂದೆ ಪೇಂಟರ್. ಜೀವನ ಸಾಗಿಸಲು ಈತ ಟ್ಯಾಕ್ಸಿ ಸಹ ಓಡಿಸುತ್ತಿದ್ದ. ಎಲ್ಲಾ ಯುವಕರು ಉತ್ಸಾಹದಿಂದ ಜಿಮ್ ಸೇರುವಂತೆ ಈತನೂ ಸೇರಿದ್ದ. ಬಾಡಿಬಿಲ್ಡಿಂಗ್‌ನತ್ತ ಅಕರ್ಷಿತನಾಗಿದ್ದವನಿಗೆ ಕಿಕ್ ಬಾಕ್ಸಿಂಗ್ ಕಡೆಗೆ ಒಲವಾಯಿತು. ಅದನ್ನೇ ವೃತ್ತಿಯಾಗಿಸಿಕೊಂಡ ವ್ಯಕ್ತಿ ಇಂದು ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದು ರಾಜ್ಯ, ದೇಶಕ್ಕೆ ಹೆಮ್ಮೆ ತಂದಿದ್ದಾನೆ.
ಈ ಸಾಧನೆ ಮಾಡಿರುವುದು ಕೋಲಾರ ಮೂಲದ ಬೆಂಗಳೂರು ನಿವಾಸಿ, ವಿನೋದ್ ರೆಡ್ಡಿ. ಜೂ.4ರಂದು ರಷ್ಯಾದ ಅನಾಪದಲ್ಲಿ ಮುಕ್ತಾಯಗೊಂಡ ವಿಶ್ವಕಪ್ ಕಿಕ್ ಬಾಕ್ಸಿಂಗ್ 75 ಕೆ.ಜಿ ಕೆ 1 ವಿಭಾಗದಲ್ಲಿ ವಿನೋದ್ ಕಂಚಿನ ಪದಕ ಗೆದ್ದರು. ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲೇ ಪದಕ ಗೆದ್ದು ಸಾಧನೆಗೈದ ವಿನೋದ್, ‘ಕನ್ನಡಪ್ರಭ’ದೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ.
ಅಣ್ಣನೇ ಸ್ಫೂರ್ತಿ: 25 ವರ್ಷಗಳಿಂದ ಬೆಂಗಳೂರಲ್ಲಿರುವ ವಿನೋದ್, ಐಟಿಐ ಓದಿದ್ದಾರೆ. ಕೆಲ ಕಾಲ ಜೀವನ ನಿರ್ವಹಣೆಗಾಗಿ ಟ್ಯಾಕ್ಸಿ ಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಬಾಕ್ಸರ್ ಆಗಲು ಅಣ್ಣ ಪುನೀತ್ ಸ್ಫೂರ್ತಿಯಂತೆ. ಕಾರಣ, ಪುನೀತ್ ಸಹ ಬಾಕ್ಸರ್. 10 ವರ್ಷದ ಹಿಂದೆ ಸ್ನೇಹಿತರೊಂದಿಗೆ ವಿನೋದ್ ಜಿಮ್‌ಗೆ ಸೇರಿದ್ದರು. ಅಲ್ಲಿಂದಲೇ ಅವರ ಕ್ರೀಡಾ ಜೀವನ ಆರಂಭಗೊಂಡಿದ್ದು.
ಹಲವು ಪದಕಗಳ ಸರದಾರ: ಆರಂಭದಲ್ಲಿ ಸಮರ ಕಲೆಗಳಲ್ಲಿ ಒಂದಾದ ಮುಯೆ ಥಾಯ್ ಅಭ್ಯಾಸ ಮಾಡುತ್ತಿದ್ದ ವಿನೋದ್, 8 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಪಾಲ್ಗೊಂಡು, 8 ಚಿನ್ನದ ಪದಕ ಗೆದ್ದಿದ್ದರು. ಪ್ರೊ ಮುಯೆ ಥಾಯ್ ಲೀಗ್‌ನಲ್ಲಿಯೂ ಒಮ್ಮೆ ಸ್ಪರ್ಧಿಸಿದ್ದರು. ಬಳಿಕ ಕಳೆದ 6 ವರ್ಷಗಳಿಂದ ಕಿಕ್ ಬಾಕ್ಸಿಂಗ್‌ನಲ್ಲಿ ನಿರತರಾಗಿದ್ದಾರೆ. 4 ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಪಾಲ್ಗೊಂಡು 3 ಚಿನ್ನ ಜಯಿಸಿದ್ದಾರೆ. 10 ವರ್ಷಗಳ ಕಿಕ್ ಬಾಕ್ಸಿಂಗ್ ವೃತ್ತಿ ಬದುಕಿನಲ್ಲಿ 60-80 ಕ್ಲಬ್ ಫೈಟ್‌ಗಳಲ್ಲಿ ಸ್ಪರ್ಧಿಸಿದ್ದಾರೆ. ವಿಶ್ವಕಪ್ ಕಂಚು ಗೆದ್ದಿರುವ ವಿನೋದ್ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.
ದಿನ 10 ಮೊಟ್ಟೆ, ಅರ್ಧ ಕೆ.ಜಿ ಮಾಂಸ!: ವೃತ್ತಿಪರ ಕಿಕ್ ಬಾಕ್ಸರ್ ಆಗುವುದು ಸಾಮಾನ್ಯದ ಕೆಲಸವಲ್ಲ. ಎಲ್ಲಾ ಕ್ರೀಡೆಗಳಲ್ಲಿ ಇರುವಂತೆ ಇದರಲ್ಲೂ ಫಿಟ್ನೆಸ್‌ಗೇ ಮೊದಲ ಆದ್ಯತೆ. ಇದೊಂದು ಕಾಂಟ್ಯಾಕ್ಟ್ ಸ್ಪೋರ್ಟ್ ಆಗಿರುವುದರಿಂದ ದೈಹಿಕವಾಗಿ ಬಲಿಷ್ಠರಾಗಿರಬೇಕಾಗುತ್ತದೆ. ಇದಕ್ಕಾಗಿಯೇ ವಿನೋದ್ ವಿಶಿಷ್ಠ ಆಹಾರ ಪದ್ಧತಿ ಅನುಸರಿಸುತ್ತಾರೆ. ಪ್ರತಿ ದಿನ 10 ಮೊಟ್ಟೆ, ಅರ್ಧ ಕೆ.ಜಿ ಮಾಂಸ, ಡ್ರೈ ಫ್ರೂಟ್ಸ್, ಹಾಲು, ತರಕಾರಿ, ಪ್ರೋಟಿನ್‌ಯಕ್ತ ಪೌಷ್ಟಿಕಾಂಶಗಳನ್ನು ಸೇವಿಸುತ್ತಿದ್ದಾರೆ. ವಿನೋದ್ ಸ್ಪರ್ಧೆಗಳಿದ್ದಾಗ ದಿನಕ್ಕೆ 6 ಗಂಟೆ, ಸ್ಪರ್ಧೆ ಇಲ್ಲದಿದ್ದಾಗ ದಿನಕ್ಕೆ 3 ಗಂಟೆ ಕಸರತ್ತು ಮಾಡುತ್ತಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.