ಚೊಚ್ಚಲ ಟಿ20 ವಿಶ್ವಕಪ್ ಗೆದ್ದು 12 ವರ್ಷ, ಚಿಯರ್ಸ್ ಟೀಂ ಇಂಡಿಯಾ..!

By Web DeskFirst Published Sep 24, 2019, 1:32 PM IST
Highlights

ಸೆಪ್ಟೆಂಬರ್ 24, 2007ರಂದು ನಡೆದ ಚೊಚ್ಚಲ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ರನ್‌ಗಳಿಂದ ಮಣಿಸಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 12 ವರ್ಷಗಳ ಹಿಂದೆ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನದ ಒಂದು ಮೆಲುಕು ಇಲ್ಲಿದೆ ನೋಡಿ...

ಬೆಂಗಳೂರು[ಸೆ.24]: ಸೆಪ್ಟೆಂಬರ್ 24, 2007 ಭಾರತ ಕ್ರಿಕೆಟ್ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ. ಭಾರತದ ಕ್ರಿಕೆಟ್‌ಗೆ ಹೊಸ ದಿಕ್ಕು ಸಿಕ್ಕ ದಿನ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದ ದಿನ. ಹೌದು, ಇಂದಿಗೆ 12 ವರ್ಷದ ಹಿಂದೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಗೆದ್ದು ವಿಶ್ವ ಚಾಂಪಿಯನ್ ಆದ ದಿನ.

ಯುವರಾಜ್‌ಗಾಗಿ ಜರ್ಸಿ ನ.12ಕ್ಕೆ ವಿದಾಯ ಹೇಳಿ; BCCIಗೆ ಗಂಭೀರ್ ನುಡಿ!

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಯುವ ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿದ್ದರಿಂದ, ಧೋನಿ ಪಡೆಯ ಮೇಲೆ ಅಷ್ಟೇನು ನಿರೀಕ್ಷೆಗಳಿರಲಿಲ್ಲ. 

ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಕೇವಲ ಒಂದು ಟಿ20 ಪಂದ್ಯವನ್ನಾಡಿದ್ದ ಸೆಹ್ವಾಗ್, ಯುವರಾಜ್ ಸಿಂಗ್, ಧೋನಿ ಹೊರತುಪಡಿಸಿ ಉಳಿದವರಿಗೆ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಅನುಭವವಿರಲಿಲ್ಲ. ತಂಡದ ಸಂಘಟಿತ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ಬರೆದಿತ್ತು.

ಲೀಗ್ ಹಂತದಿಂದ ಫೈನಲ್ ಪಂದ್ಯದವರೆಗಿನ ಟೀಂ ಇಂಡಿಯಾ ಪ್ರದರ್ಶನ ಹೀಗಿತ್ತು...

ಲೀಗ್ ಹಂತದ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ, ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೆದುರು ಟೀಂ ಇಂಡಿಯಾ ಮೊದಲ ಬಾರಿಗೆ ಕಣಕ್ಕಿಳಿದಿತ್ತು. ಮೊದಲ ಪಂದ್ಯ ರೋಚಕ ಟೈ ಆದ ಬಳಿಕ ಬಾಲ್ ಔಟ್ ಮೂಲಕ ಟೀಂ ಇಂಡಿಯಾ ಗೆದ್ದು ಬೀಗಿತು. ಇನ್ನು ಫೈನಲ್’ನಲ್ಲಿ ಮತ್ತೆ ಪಾಕಿಸ್ತಾನ ತಂಡವೇ ಭಾರತಕ್ಕೆ ಎದುರಾಯಿತು. ಜೋಹಾನ್ಸ್ ಬರ್ಗ್’ನಲ್ಲಿ ನಡೆದ ಫೈನಲ್ ಪಂದ್ಯವೂ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ, ಗೌತಮ್ ಗಂಭೀರ್[75] ಆಕರ್ಷಕ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 157 ರನ್ ಬಾರಿಸಿತ್ತು. ಇನ್ನು ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಆರ್.ಪಿ. ಸಿಂಗ್ ಆರಂಭಿಕ ಆಘಾತ ನೀಡಿದರಾದರೂ ಆ ಬಳಿಕ ಇಮ್ರಾನ್ ನಜೀರ್ ಹಾಗೂ ಯೂನೀಸ್ ಖಾನ್ ತಂಡಕ್ಕೆ  ಚೇತರಿಕೆ ನೀಡಿದರು. ಈ ನಡುವೆ ಇರ್ಫಾನ್ ಪಠಾಣ್ ಚಾಣಾಕ್ಷ ಬೌಲಿಂಗ್ ಟೀಂ ಇಂಡಿಯಾವನ್ನು ಕಮ್ ಬ್ಯಾಕ್ ಮಾಡುವಂತೆ ಮಾಡಿತು. ಆದರೆ ಮಿಸ್ಬಾ ಉಲ್ ಹಕ್ ಸ್ಫೋಟಕ ಬ್ಯಾಟಿಂಗ್ ಭಾರತೀಯ ಅಭಿಮಾನಿಗಳನ್ನು ಆತಂಕದ ಕಾರ್ಮೋಡಕ್ಕೆ ತಳ್ಳಿತ್ತು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲ್ಲಲು ಕೇವಲ 13 ರನ್ ಅವಶ್ಯಕತೆಯಿತ್ತು. 

ತುದಿಗಾಲಿನಲ್ಲಿ ನಿಲ್ಲಿಸಿದ ಆ ಕೊನೆಯ ಓವರ್:

This day, in 2⃣0⃣0⃣7⃣ were crowned World T20 Champions 😎🇮🇳 pic.twitter.com/o7gUrTF8XN

— BCCI (@BCCI)

ಭಾರತ ಗೆಲ್ಲಲು ಕೇವಲ ಒಂದು ವಿಕೆಟ್ ಅವಶ್ಯಕತೆಯಿತ್ತು. ಟೀಂ ಇಂಡಿಯಾ ಪರ ಅನನುಭವಿ ವೇಗಿ ಜೋಗಿಂದರ್ ಶರ್ಮಾ’ಗೆ ನಾಯಕ ಧೋನಿ ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ನೀಡಿದರು. ಮೊದಲ ಎಸೆತವೇ ವೈಡ್, ಎರಡನೇ ಎಸೆತದಲ್ಲಿ ಸಿಕ್ಸರ್’ಗಟ್ಟಿದ ಮಿಸ್ಬಾ, ಪಾಕ್ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಮೂರನೇ ಎಸೆತದಲ್ಲಿ ಮಿಸ್ಬಾ, ಶ್ರೀಶಾಂತ್’ಗೆ ಕ್ಯಾಚ್ ನೀಡಿದಾಗ ಟೀಂ ಇಂಡಿಯಾ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಭಾರತ 5 ರನ್‌ಗಳಿಂದ ವಿಶ್ವಕಪ್ ಜಯಿಸಿತು, ಟೀಂ ಇಂಡಿಯಾಗೆ ಧೋನಿ ಎನ್ನುವ ಯಶಸ್ವಿ ನಾಯಕನ ಆಗಮನವಾಯಿತು.  

click me!